ಸಾರಾಂಶ
ಚಾಮರಾಜನಗರ: ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದವರು ಸುಮಾರು 148 ಕಾಲೋನಿಗಳಲ್ಲಿ ವಾಸವಾಗಿದ್ದು, ಇವುಗಳಲ್ಲಿ 18ಕ್ಕೂ ಹೆಚ್ಚು ಹಾಡಿಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಇದಕ್ಕಾಗಿ ಆ.1ರಂದು ಜಿಲ್ಲಾ ಆದಿವಾಸಿಗಳ ಹಿತರಕ್ಷಣಾ ಹೋರಾಟ ಸಮಿತಿ ಹಾಗೂ ಪ್ರಗತಿ ಪರ ಸಂಘಟನೆಗಳೊಂದಿಗೆ ನಗರದ ಜಿಲ್ಲಾಡಳಿತದ ಭವನದ ಮುಂಭಾಗ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ನಾಗೇಂದ್ರ ಹೇಳಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆ.1ರಂದು ಸಂಜೆ 6 ಗಂಟೆಗೆ ಮೊಂಬತ್ತಿ ಮೆರವಣಿಗೆ ನಡೆಸಿ, ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಮುಷ್ಕರಕ್ಕೆ ಚಾಲನೆ ನೀಡಲಾಗುವುದು. ಭಾರತ ಸಂವಿಧಾನವು ಬುಡಕಟ್ಟು ಜನರ ಏಳಿಗೆಗಾಗಿ ಅವರಿಗೆ ನಿರೀಕ್ಷಿತ ಸ್ಥಾನಮಾನಗಳನ್ನು ಕಲ್ಪಿಸಲು ವಿಧಿ ವಿಧಾನಗಳನ್ನು ಜಾರಿಗೊಳಿಸಿದೆ. ಆದರೂ ಅನೇಕ ಬುಡಕಟ್ಟು ಕುಟುಂಬಗಳು ಬಡತನ ರೇಖೆಗಿಂತ ಕೆಳಮಟ್ಟದಲ್ಲಿವೆ. ಆದ್ದರಿಂದ ಅವಕಾಶಗಳಿಂದ, ಸೌಲಭ್ಯಗಳಿಂದ ವಂಚಿತರಾಗುತ್ತಾ ಇವರ ಸ್ಥಿತಿ ಚಿಂತಾಜನಕವಾಗಿದೆ ಎಂದರು.ಜಿಲ್ಲೆಯ 18 ಹಾಡಿಗಳಲ್ಲಿ ಇನ್ನೂ ಜನರು ವಿದ್ಯುತ್‌ನ್ನೇ ನೋಡಿಲ್ಲ, ಸುಮಾರು 2000 ಕುಟುಂಬಗಳಿಗೆ ರೇಷನ್ ಕಾರ್ಡ್‌ಗಳೇ ಇಲ್ಲ. ಅರಣ್ಯ ಇಲಾಖೆಯವರು 1980ರ ಆರಣ್ಯ ಕಾಯ್ದೆಯ ಪ್ರಕಾರ ಕಿರು ಉತ್ಪನ್ನಗಳನ್ನು ಸಂಗ್ರಹಿಸಲು ಅನಾವಶ್ಯ ತೊಂದರೆ ಕೊಡುತ್ತಿದ್ದಾರೆ. 2006 ಪ್ರಕಾರ ಆರಣ್ಯ ಕಾಯ್ದೆಯ ಪ್ರಕಾರ ನಮ್ಮ ಹಿತರಕ್ಷಣೆ ಕಾಪಾಡಬೇಕು ಎಂದು ಹೇಳಿದರು.
ಗ್ರಾಪಂಗಳಲ್ಲಿ ಬುಡಕಟ್ಟು ಜನರಿಗೆ ನರೇಗಾ ಕೆಲಸಗಳನ್ನು ನೀಡುತ್ತಿಲ್ಲ. ಇದರಿಂದಾಗಿ ಜೀವನ ಮಾಡಲು ಕುಟುಂಬಗಳು ಹಾಡಿಯನ್ನು ತೊರೆದು ವಲಸೆ ಹೊಗುತ್ತಿದ್ದಾರೆ. ಹಾಡಿಗಳಿಗೆ ವಿದ್ಯುತ್ ಕಂಬಗಳು ಬಂದಿದ್ದರೂ ಅರಣ್ಯ ಇಲಾಖೆಯವರು ಸಂಪರ್ಕಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿದರು.ಅನೇಕ ಜನರು ವಿಧವಾ, ವೃದ್ದಾಪ್ಯ ವೇತನದಿಂದ ವಂಚಿತರಾಗಿದ್ದಾರೆ. ಇದನ್ನು ವಿರೋಧಿಸಿ ಅನಿರ್ದಿಷ್ಠಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ನಮ್ಮ ಈ ಬೇಡಿಕೆಗಳನ್ನು ಈಡೇರಿಸುವವರೆಗೂ ಮುಷ್ಕರ ಕೈಬಿಡುವುದಿಲ್ಲ ಎಂದರು.
ಕಾರ್ಯದರ್ಶಿ ಗಿರೀಶ್, ಮುರುಗ, ಸಿದ್ದರಾಜು, ನಂಜುಂಡ, ಮಹೇಶ್ ಇದ್ದರು.