ಸಾರಾಂಶ
ಚಾಮರಾಜನಗರದಲ್ಲಿ ನಿವೃತ್ತ ನೌಕರರ ವೇದಿಕೆಯ ಜಿಲ್ಲಾ ಸಂಚಾಲಕ ಎ.ಶಿವಣ್ಣ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಗಳಿಕೆ ರಜೆ ನಗದೀಕರಣ ಸೇರಿದಂತೆ ವಿವಿಧ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಫೆ.೨೮ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ವತಿಯಿಂದ ಅನಿರ್ಧಿಷ್ಠಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಚಾಲಕ ಎ. ಶಿವಣ್ಣ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರ ವೇತನ ಭತ್ಯೆ ಹಾಗೂ ಪಿಂಚಣಿದಾರರ ಪಿಂಚಣಿ ಪರಿಷ್ಕರಿಸಲು ಡಾ.ಸುಧಾಕರ್ ರಾವ್ ನೇತೃತ್ವದಲ್ಲಿ ೭ನೇ ವೇತನ ಆಯೋಗ ರಚಿಸಿತ್ತು. ಸರಕಾರವು ಈ ಸಂಬಂಧ ೨೦೨೪ ಆ.೨೩ ರಿಂದ ವೇತನ ಭತ್ಯೆಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ.೨೦೨೨ ಜು.೧ ರಿಂದಲೇ ಪಡೆಯಬೇಕಿದ್ದ ನಿವೃತ್ತಿ ವೇತನದ ವ್ಯತ್ಯಾಸವನ್ನು ಕೇಳುತ್ತಿಲ್ಲ. ಬದಲಾಗಿ ನಾವು ಕೇಳುತ್ತಿರುವುದು ೭ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿಸಿಆರ್‌ಜಿ, ಕಮ್ಯುಟೇಷನ್ ಹಾಗೂ ಗಳಿಕೆ ರಜೆ ನಗದೀಕರಣಗಳ ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸದ ಮೊತ್ತವನ್ನು ಮಾತ್ರ ಕೇಳುತ್ತೇವೆ. ಸುಮಾರು ೫ ತಿಂಗಳುಗಳಿಂದ ಮುಖ್ಯಮಂತ್ರಿಗಳ ಗಮನ ಸೆಳೆದು ಬೇಡಿಕೆ ಈಡೇರಿಸಿಕೊಳ್ಳುವ ದಿಸೆಯಲ್ಲಿ ವಿವಿಧ ರೀತಿಯಲ್ಲಿ ಹೋರಾಟಗಳನ್ನು ಮಾಡುತ್ತ ಬಂದಿದ್ದೇವೆ. ಆದರೂ ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸಿಲ್ಲ ಎಂದು ದೂರಿದರು.ನಮ್ಮ ಹಕ್ಕೊತ್ತಾಯಗಳು ಈಡೇರುವವರಗೆ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಯಲ್ಲಿದ್ದು, ಫೆ.೨೮ರಿಂದ ಆರಂಭವಾಗಲಿರುವ ಪ್ರತಿಭಟನಾ ಧರಣಿಯಲ್ಲಿ ಜಿಲ್ಲೆಯ ನಿವೃತ್ತ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಂಚಾಲಕ ಕೆ.ಎನ್. ಶಿವಸ್ವಾಮಿ ಮಹದೇವಯ್ಯ ಎಚ್, ರುದ್ರಯ್ಯ, ಜ್ಞಾನಪ್ರಕಾಶ್, ಪ್ರಭುಸ್ವಾಮಿ, ಮುನಿಸ್ವಾಮಿ ಇದ್ದರು.