ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಆಗ್ರಹಿಸಿ ಅನಿರ್ದಿಷ್ಟ ಹೋರಾಟ

| Published : Nov 25 2025, 02:15 AM IST

ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಆಗ್ರಹಿಸಿ ಅನಿರ್ದಿಷ್ಟ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ ಕ್ವಿಂಟಲ್‌ಗೆ ₹ 3 ಸಾವಿರ ದರ ನಿಗದಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಸೋಮವಾರ ಜಿಲ್ಲಾಡಳಿತ ಭವನದ ಎದುರು ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದರು.

ಹಾವೇರಿ: ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ ಕ್ವಿಂಟಲ್‌ಗೆ ₹ 3 ಸಾವಿರ ದರ ನಿಗದಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಸೋಮವಾರ ಜಿಲ್ಲಾಡಳಿತ ಭವನದ ಎದುರು ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದರು. ಸಾವಿರಾರು ಸಂಖ್ಯೆಯ ರೈತರು, ಜಿಲ್ಲೆಯ ವಿವಿಧ ಮಠಾಧೀಶರು ಪಾಲ್ಗೊಂಡು ರೈತರ ಹೋರಾಟಕ್ಕೆ ಸಾಥ್‌ ನೀಡಿದರು.

ನಗರದ ಕಾಗಿನೆಲೆ ರಸ್ತೆಯಲ್ಲಿರುವ ಮುರುಘರಾಜೇಂದ್ರ ಮಠದ ಆವರಣದಲ್ಲಿ ಸೇರಿದ್ದ ರೈತರು ಶ್ರೀ ಮಠದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು. ಹತ್ತಾರು ಟ್ರ್ಯಾಕ್ಟರ್‌ಗಳು, ಟಾಟಾ ಏಸ್ ವಾಹನಗಳಲ್ಲಿ ಜಿಲ್ಲೆಯ ಹಿರೇಕೆರೂರು, ರಾಣಿಬೆನ್ನೂರು, ಹಾವೇರಿ, ಬ್ಯಾಡಗಿ, ರಟ್ಟೀಹಳ್ಳಿ, ಹಾನಗಲ್, ಶಿಗ್ಗಾಂವಿ ಸೇರಿದಂತೆ ವಿವಿಧ ತಾಲೂಕುಗಳಿಂದ ರೈತರು ಆಗಮಿಸಿದ್ದರು. ಮೆರವಣಿಗೆಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆಯು ನಗರದ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿದ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಬ್ಬರ ಮೇಲೊಬ್ಬರು ಪ್ರತ್ಯಾರೋಪ ಮಾಡುವುದನ್ನು ಬಿಟ್ಟು ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು. ಕೇಂದ್ರ ಸರ್ಕಾರ ಮೆಕ್ಕೆಜೋಳ ಬೆಳೆಗೆ ಬೆಂಬಲ ಬೆಲೆ 2400 ರು., ರಾಜ್ಯ ಸರ್ಕಾರದ ವಂತಿಗೆ 600 ಸೇರಿ ಒಟ್ಟು 3 ಸಾವಿರ ರು.ದರ ನಿಗದಿ ಮಾಡಲೇಬೇಕು ಎಂದು ಒತ್ತಾಯಿಸಿದರು. ಜತೆಗೆ ಖರೀದಿ ಕೇಂದ್ರ ಆರಂಭಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಅಕ್ಕಿಆಲೂರು ಶಿವಬಸವ ಸ್ವಾಮೀಜಿ, ಹೇರೂರು ನಂಜುಂಡೇಶ್ವರ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಪಾಲ್ಗೊಂಡು ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಮಾಲತೇಶ ಪೂಜಾರ, ಜಿಲ್ಲಾ ಉಪಾಧ್ಯಕ್ಷ ಎಚ್.ಎಚ್. ಮುಲ್ಲಾ, ಶಿವಬಸಪ್ಪ ಗೋವಿ, ಮರಿಗೌಡ್ರ ಪಾಟೀಲ, ಪ್ರಭುಗೌಡ ಪ್ಯಾಟಿ, ಚನ್ನಪ್ಪ ಮರಡೂರ, ಶಿವಯೋಗಿ ಹೊಸಗೌಡ್ರ, ರಾಜು ತರ್ಲಗಟ್ಟ, ಶಂಕ್ರಣ್ಣ ಶಿರಗಂಬಿ, ಅಡಿವೆಪ್ಪ ಆಲದಕಟ್ಟಿ, ರುದ್ರಗೌಡ ಕಾಡನಗೌಡ್ರ, ದಿಳ್ಳೆಪ್ಪ ಮಣ್ಣೂರ, ಮುತ್ತಪ್ಪ ಗುಡಗೇರಿ, ಸುರೇಶ ಮೈದೂರ, ಭುವನೇಶ್ವರ ಶಿಡ್ಲಾಪುರ, ಜಾನ್ ಪುನೀತ್, ರುದ್ರಪ್ಪ ಅಣ್ಣಿ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.ಅತಿವೃಷ್ಟಿ ಬೆಳೆಹಾನಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದ 38 ಕೋಟಿ ರು. ಇದೆ. ರೈತರಿಗೆ ದೀಪಾವಳಿಗೆ ಉಡುಗೊರೆ ಕೊಡುತ್ತೇವೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು. ಆದರೆ ನವೆಂಬರ್ ತಿಂಗಳು ಕಳೆಯುತ್ತಾ ಬಂದರೂ ಯಾವುದೇ ಪರಿಹಾರದ ಹಣ ನೀಡಿಲ್ಲ. ಸಚಿವರು ನೀಡಿದ ಭರವಸೆ ಹುಸಿಯಾಗಿದೆ. ಪ್ರತಿಭಟನೆ ಕಾವು ತೆಗೆದುಕೊಳ್ಳುವ ಮುನ್ನವೇ ಎಚ್ಚೆತ್ತುಕೊಂಡು ಪರಿಹಾರ ನೀಡಬೇಕು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.

ರೈತ ತಾನು ಬೆಳೆದ ಬೆಳೆಗಳಿಗೆ ತಾನೇ ಬೆಲೆ ನಿಗದಿ ಮಾಡುವ ಹಕ್ಕು ಬರಬೇಕು. ಯಾವುದೋ ಒಂದು ಆಫೀಸ್, ಕಂಪನಿಯಲ್ಲಿ ಬೆಲೆ ನಿಗದಿ ಆಗುತ್ತಿರುವುದು ನಿಜಕ್ಕೂ ವಿಷಾದ. ರೈತರ ಹಿತ ಚಿಂತನೆ ಮಾಡುವ ಸರ್ಕಾರ ಅಧಿಕಾರಕ್ಕೆ ಬರಬೇಕು. ಆಳುವ ನಾಯಕರು ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಯಾವುದೇ ಬೆಳೆ ಬೆಳೆಯಲಿ ಸರಿಯಾದ ಬೆಲೆ ಸಿಗಬೇಕು. ರೈತರ ಬೆಳೆಗೆ ಬೆಲೆ ಸಿಗದೇ ಹೋದರೆ ಸರ್ಕಾರ ಬಹಳ ತೊಂದರೆಗೊಳಗಾಗುತ್ತದೆ ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.ಸರ್ಕಾರ ಜನರಿಗೆ ಐದು ಗ್ಯಾರಂಟಿ ಕೊಟ್ಟಂತೆ ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ ರೈತರಿಗೆ ಬೆಲೆ ನಿಗದಿ ಗ್ಯಾರಂಟಿ ಕೊಡಬೇಕು. ನಮ್ಮ ದೇಶ ಕೃಷಿ ಪ್ರಧಾನ ಮತ್ತು ಋಷಿ ಪ್ರಧಾನ ದೇಶ. ರೈತರನ್ನು ಲ್ಯಾಂಡ್‌ಲಾರ್ಡ್ ಎಂದು ಕರೆಯುತ್ತಾರೆ. ರೈತರೇ ಬೆಲೆ ನಿಗದಿ ಮಾಡಿ ಮಾರಾಟ ಮಾಡಿದಾಗ ರೈತರಿಗೆ ಬೆಲೆ ಸಿಗುತ್ತದೆ. ರೈತರ ಅಳಲನ್ನು ಸರ್ಕಾರ ಆಲಿಸಬೇಕು. ರೈತರ ಕಣ್ಣಲ್ಲಿ ನೀರು ಹಾಕಿಸಬಾರದು. ನ್ಯಾಯಯುತ ಬೇಡಿಕೆ ಈಡೇರಿಸಿ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ರೈತರು ಈ ದೇಶದ ಸಂಪತ್ತು. 25ರಿಂದ 50 ವರ್ಷದ ವಯೋಮಾನದವರು ದೇಶಕ್ಕೆ ಅನ್ನ ಹಾಕುವ ರೈತರಾಗಿದ್ದಾರೆ. ಮಠಾಧೀಶರು ಮಠದಲ್ಲಿ ಶಿವಯೋಗಿ ಎನಿಸಿಕೊಂಡರೆ ರೈತರು ಹೊಲದಲ್ಲಿ ದುಡಿದು ನೇಗಿಲಯೋಗಿ ಆಗುತ್ತಾರೆ. ಹೊಟ್ಟೆ ತುಂಬಿಸಿಕೊಳ್ಳಲು ರೈತರು ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ರೈತರು ಬೀದಿಗಿಳಿಯಲು ಸರ್ಕಾರ ಬಿಡಬಾರದು. ಹೋರಾಟಕ್ಕೆ ಧುಮುಕುವ ಮುನ್ನವೇ ರೈತರ ಬೇಡಿಕೆ ಈಡೇರಿಸಬೇಕು ಎಂದು ವಿಜಯಪುರದ ಅಭಿನವ ಸಿದ್ದಾರೂಢ ಸ್ವಾಮೀಜಿ ಹೇಳಿದರು.

ಮೆಕ್ಕೆಜೋಳ ಬೆಂಬಲ ಬೆಲೆ ದರ ನಿಗದಿ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಬೆಳೆ ಹಾನಿ ಪರಿಹಾರ ರೈತರ ಖಾತೆಗಳಿಗೆ ಜಮೆ ಮಾಡಿಸಲಾಗುವುದು. ಹೆಸ್ಕಾಂಗೆ ಸಂಬಂಧಿಸಿದ ಸಮಸ್ಯೆಗಳಿಗೆ ಅಧಿಕಾರಿಗಳನ್ನು ಕರೆತಂದು ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.