ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಲಯನ್ಸ್ ಕ್ಲಬ್ ಮಾಣಿಯ ಸಹಯೋಗದಲ್ಲಿ ಗುರುವಾರ ಆಚರಿಸಲಾಯಿತು.ಭಾರತೀಯ ಗಡಿ ಭದ್ರತಾ ಪಡೆಯ ನಿವೃತ್ತ ಉಪ ಕಮಾಡಂಟ್ ಡಿ.ಚಂದಪ್ಪ ಮೂಲ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತದವು ವಿಜ್ಞಾನ, ಕೈಗಾರಿಕೆ, ಕೃಷಿ, ಆರ್ಥಿಕತೆ, ಸೈನ್ಯ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಮುಂದಿದೆ.ನೂರಾರು ಮತಗಳಿದ್ದರೂ ಒಮ್ಮತ ಈ ಮಣ್ಣಿನಲ್ಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸಾಮಾಜಿಕ ಕಳಕಳಿ ಬೆಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಹೆತ್ತ ತಂದೆ ತಾಯಿ,ಗುರು ಹಿರಿಯರು ಅನ್ನದಾತ ರೈತ ಹಾಗೂ ದೇಶ ಕಾಯುವ ಸೈನಿಕರನ್ನು ಗೌರವಿಸುವುದೇ ನಿಜವಾದ ದೇಶ ಪ್ರೇಮ ಎಂದರು.
ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕಿಶನ್ ರೈ ಮಾತನಾಡಿ, ದೇಶವು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಯನ್ನು ಮಾಡಿದೆ. ಸಾಧನೆಗಳ ಜೊತೆಗೆ, ಮುಂದೆ ಇರುವ ಸವಾಲುಗಳನ್ನು ಎದುರಿಸಲು ದೇಶದ ನಾಗರಿಕರಾದ ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಬಾಲವಿಕಾಸ ಟ್ರಸ್ಟ್ ಅಧ್ಯಕ್ಷ ಪ್ರಹ್ಲಾದ್ ಶೆಟ್ಟಿ ಜೆ., ದೇಶದ ಗಡಿಯಲ್ಲಿ ಯೋಧರ ಶ್ರಮದಿಂದಾಗಿ ನಾವು ನಿಶ್ಚಿಂತರಾಗಿ ನಿದ್ರಿಸುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಹುಟ್ಟಿಸುವ ನಿಟ್ಟಿನಲ್ಲಿ ಸೇನಾ ಯೋಧರನ್ನು ಆಹ್ವಾನಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದರು.
ಬಂಟ್ವಾಳ ತಾಲೂಕು ಮಟ್ಟದ ಚೆಸ್ ಪಂದ್ಯಾಟದಲ್ಲಿ ಪ್ರಥಮ ಹಾಗೂ ಚತುರ್ಥ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಶ್ರೀಶಾ ಪಿ. (7ನೇ) ಹಾಗೂ ಆರನ್ ಪಾಯಿಸ್ (10ನೇ) ಅವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ, ಶಾಲೆಯ ವ್ಯವಸ್ಥಾಪಕಿ ನಯನ ಎಂ., ಲಯನ್ಸ್ ಕ್ಲಬ್ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಾಂಶುಪಾಲ ರವೀಂದ್ರ ದರ್ಬೆ ಸ್ವಾಗತಿಸಿದರು. ಶಿಕ್ಷಕಿ ರತ್ನಮಾಲಾ ವಂದಿಸಿದರು. ವಿದ್ಯಾರ್ಥಿಗಳಾದ ಶ್ರೇಯಾ ಎಸ್. ಹಾಗೂ ವೇದಾಂತ್ ಗಣೇಶ್ ಪೂಜಾರಿ ನಿರೂಪಿಸಿದರು