ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಮೊದಲ ಸ್ವಾತಂತ್ರ್ಯ ಹೋರಾಟಕ್ಕೂ ಮೊದಲು ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಆರಂಭವಾಗಿತ್ತು. ಅಂದು ಗುಡ್ಡೆಮನೆ ಅಪ್ಪಯ್ಯ ಗೌಡರು ಹಾಗೂ ಕೆದಂಬಾಡಿ ರಾಮಯ್ಯ ಗೌಡರ ನೇತೃತ್ವದ ಅಮರ ಸುಳ್ಯ ದಂಗೆ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿತು ಎಂದು ನಿವೃತ್ತ ಸೇನಾಧಿಕಾರಿ ಮೇಜರ್ ಡಾ.ಕುಶ್ವಂತ್ ಕೋಳಿಬೈಲು ತಿಳಿಸಿದ್ದಾರೆ. ನಗರದ ಸುದರ್ಶನ ವೃತ್ತದ ಬಳಿ ಇರುವ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆಯ ಆವರಣದಲ್ಲಿ ಕೊಡಗು ಗೌಡ ಸಮಾಜಗಳ ಒಕ್ಕೂಟ ಮತ್ತು ಅಂಗಸಂಸ್ಥೆಗಳ ವತಿಯಿಂದ ನಡೆದ 79ನೇ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಹಿರಿಯರ ತ್ಯಾಗ ಬಲಿದಾನವನ್ನು ನಮ್ಮ ಇಂದಿನ ಪೀಳಿಗೆ ನೆನಪಿಸಿಕೊಳ್ಳಬೇಕು. ಅವರು ಹಾಕಿದ ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್, ಹಿರಿಯರ ಬಲಿದಾನದಿಂದ ಬಂದ ಸ್ವಾತಂತ್ರ್ಯ ವನ್ನು ಅನುಭವಿಸುತ್ತಿರುವ ಇಂದಿನ ಯುವ ಜನತೆ ಜವಾಬ್ದಾರಿಯಿಂದ ನಾಡು ಮತ್ತು ದೇಶ ಕಟ್ಟುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ಧ್ವಜಾರೋಹಣದ ನಂತರ ಹುತಾತ್ಮ ಗುಡ್ಡೆಮನೆ ಅಪ್ಪಯ್ಯಗೌಡರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ ಕುಮಾರ್, ಕೊಡಗು ಗೌಡ ಸಮುದಾಯದ ಗಣ್ಯರು, ಕೊಡಗಿನ ವಿವಿಧ ಗೌಡ ಸಮಾಜಗಳ ಅಧ್ಯಕ್ಷರು, ಪದಾಧಿಕಾರಿಗಳು, ಕೊಡಗು ಗೌಡ ಮಹಿಳಾ ಒಕ್ಕೂಟಗಳು, ಚೇರಳ ಗೌಡ ಸಮಾಜ ಚೆಟ್ಟಳ್ಳಿ, ಮಕ್ಕಂದೂರು ಗೌಡ ಸಮಾಜ, ಮರಗೋಡು ಗೌಡ ಸಮಾಜ, ಮಾಜಿ ಸೈನಿಕರ ಸಂಘ, ನಿವೃತ್ತ ನೌಕರರ ಸಂಘ, ಕೊಡಗು ಗೌಡ ಯುವ ವೇದಿಕೆ, ಕೊಡಗು ಮತ್ತು ದಕ್ಷಿಣ ಕನ್ನಡ ಮಹಿಳಾ ಒಕ್ಕೂಟ, ಕೊಡಗು ಗೌಡ ವಿದ್ಯಾಸಂಘ ಸೇರಿದಂತೆ ವಿವಿಧ ಗೌಡ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಗೌಡ ಸಮುದಾಯದ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆನಂದ ಕರಂದ್ಲಾಜೆ ಸ್ವಾಗತಿಸಿ, ವಿನೋದ್ ಮೂಡಗದ್ದೆ ನಿರೂಪಿಸಿ, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ನವೀನ್ ಅಂಬೆಕಲ್ಲು ವಂದಿಸಿದರು. ಕೊಡಗು ಮತ್ತು ದಕ್ಷಿಣ ಕನ್ನಡ ಮಹಿಳಾ ಒಕ್ಕೂಟ ಹಾಗೂ ಕುಶಾಲನಗರ ಗೌಡ ಮಹಿಳಾ ತಂಡದಿಂದ ನಡೆದ ದೇಶಭಕ್ತಿ ಗೀತೆ ಗಾಯನ ಗಮನ ಸೆಳೆಯಿತು.