ಕನ್ನಡಪ್ರಭ ವಾರ್ತೆ ಬೆಂಗಳೂರು
ದೇಶಭಕ್ತರ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯವನ್ನು ಪಡೆದರೂ ಸಹ ಇಂದಿಗೂ ಭ್ರಷ್ಟ ರಾಜಕಾರಣಿಗಳಿಂದ ಅತಂತ್ರರಾಗಿಯೇ ಉಳಿದಿದ್ದೇವೆ. ಪ್ರಾಮಾಣಿಕ ರಾಜಕಾರಣದಲ್ಲಿ ವಕೀಲರುಗಳು ಹೆಚ್ಚೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡಾಗ ಮಾತ್ರ ಭ್ರಷ್ಟಮುಕ್ತ, ಪಾರದರ್ಶಕ, ವಂಶ ಪಾರಂಪರ್ಯ ರಾಜಕಾರಣ ಹೊಡೆದೋಡಿಸಲು ಸಾಧ್ಯ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿಯ ಚಂದ್ರು ಹೇಳಿದ್ದಾರೆ.ಶುಕ್ರವಾರ ಪಕ್ಷವು ಆಯೋಜಿಸಿದ್ದ ‘ಜಿಬಿಎ ಚುನಾವಣೆಯಲ್ಲಿ ವಕೀಲರುಗಳ ಪಾತ್ರ’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಪರ್ಯಾಯ ರಾಜಕಾರಣ ವ್ಯವಸ್ಥೆಯನ್ನು ತರಲೇಬೇಕೆಂಬ ಮಹಾದಾಸೆಯಿಂದ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷವು ಸ್ಥಾಪನೆಯಾಗಿದೆ. ಬೆಂಗಳೂರಿನಲ್ಲಿ ಮುಂಬರುವ ನಗರ ಪಾಲಿಕೆಗಳ ಚುನಾವಣೆಗಳಲ್ಲಿ ವಕೀಲರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಪಕ್ಷದ ಅಭ್ಯರ್ಥಿಗಳಾಗಿ, ಬೆಂಬಲಿಗರಾಗಿ, ಪೋಷಕರಾಗಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಳೆದ ಹಲವು ದಶಕಗಳಿಂದ ಬೆಂಗಳೂರಿನ ಮಹಾನಗರ ಪಾಲಿಕೆಯು ಸಂಪೂರ್ಣ ಭ್ರಷ್ಟಾಚಾರದಿಂದ ಮುಳುಗಿ ಹೋಗಿದೆ. ನಾಗರಿಕರಿಗೆ ಬದುಕಲು ಸಾಧ್ಯವೇ ಆಗದಂತಹ ಪರಿಸ್ಥಿತಿಗೆ ರಾಜಕಾರಣಿಗಳು ತಳ್ಳಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಕುಂಠಿತವಾಗಿದೆ. ಬೆಂಗಳೂರಿಗರು ಪ್ರಾಣವನ್ನೇ ಒತ್ತೆ ಇಟ್ಟು ಬದುಕುವಂತಹ ಪರಿಸ್ಥಿತಿಗೆ ತಲುಪಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಕೀಲರುಗಳೆಲ್ಲರೂ ಪ್ರಾಮಾಣಿಕ ಪಕ್ಷಗಳಲ್ಲಿ ಗುರುತಿಸಿಕೊಂಡು ಭ್ರಷ್ಟ ವ್ಯವಸ್ಥೆಯನ್ನು ಸರಿ ಮಾಡಬೇಕೆಂದು ಮನವಿ ಮಾಡಿದರು.ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ, ಪ್ರಚಾರ ಸಮಿತಿಯ ಅಧ್ಯಕ್ಷ ಹಾಗೂ ವಕೀಲ ಲಕ್ಷ್ಮಿಕಾಂತರಾವ್, ನಂಜಪ್ಪ ಕಾಳೇಗೌಡ, ಲೋಹಿತ್ ಕುಮಾರ್, ಮಹದೇವಸ್ವಾಮಿ, ಬಸವರಾಜ ಮುದಿಗೌಡರ್, ರವಿಕುಮಾರ್, ಉಷಾ ಮೋಹನ್ ಮತ್ತು ಜ್ಯೋತಿಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.