ಸಾರಾಂಶ
ಬ್ರಹ್ಮಾವರ: ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ ಬ್ರಹ್ಮಾವರಸ್ವತಂತ್ರ, ನಿಷ್ಪಕ್ಷಪಾತ ಮತ್ತು ವಿಶ್ವಾಸಾರ್ಹ ಮಾಧ್ಯಮವನ್ನು ಜನರೇ ಉಳಿಸಿಕೊಳ್ಳಬೇಕು ಎಂದು ಕನ್ನಡಪ್ರಭ - ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.ಅವರು ಶನಿವಾರ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದಿಂದ ಕೊಡಮಾಡಿದ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.ವಡ್ಡರ್ಸೆಯವರ ಮುಂಗಾರು ಒಂದು ಪತ್ರಿಕೆಯಾಗಿರಲಿಲ್ಲ, ಆದೊಂದು ಆಂದೋಲನವಾಗಿತ್ತು. ಓದುಗರೇ ಒಡೆಯರಾಗುವ ಆಶಯದಿಂದ ಅವರು ಪತ್ರಿಕೆ ಕಟ್ಟಿದ್ದರು. ಅದನ್ನು ಬಡವರ ಮತ್ತು ಶೋಷಿತರ ಶಕ್ತಿಶಾಲಿ ಧ್ವನಿಯನ್ನಾಗಿ ಮಾಡಿದ್ದರು, ಅವರ ಪತ್ರಿಕೆಯನ್ನು ಒಂದು ಪ್ರಾಡಕ್ಟ್‌ನಂತೆ ನಡೆಸಲಿಲ್ಲ, ಹೋರಾಟದ ಹಾಗೆ ನಡೆಸಿದ್ದರು. ಆದರೆ ಕೆಲವು ಲೆಕ್ಕಾಚಾರಗಳು ತಪ್ಪಿದ್ದರಿಂದ ಪತ್ರಿಕೆ ಸ್ಥಗಿತವಾಯಿತು ಎಂದರು.ಇಂದು ಡಿಜಿಟಲ್ ಮಾಧ್ಯಮ ಸಮಾನತೆಯ ಬಹುದೊಡ್ಡ ಮಾರ್ಗವಾಗಿದೆ, ಮಾಧ್ಯಮದಲ್ಲಿ ತಂತ್ರಜ್ಞಾನ ಹೆಚ್ಚಿದೆ, ಸುದ್ದಿಯ ಮರುವಾಖ್ಯಾನಕ್ಕೆ ಅವಕಾಶ ಇದೆ, ಸುದ್ದಿ ಮನೆ ಪರಿವರ್ತನೆಯಾಗಿದೆ. ಆದರೆ ವಡ್ಡರ್ಸೆಯವರ ಕಾಲದಲ್ಲಿ ಹಾಗಿರಲಿಲ್ಲ, ಆದರೆ ಮಾಧ್ಯಮದ ಅಂತಃಸತ್ವ ಅಂದಿಗೂ ಇಂದಿಗೂ ಬದಲಾಗಿಲ್ಲ, ಅದು ಇಂದಿಗೂ ನೇರ ದಿಟ್ಟ ನಿರಂತರವಾಗಿದೆ. ಆದರೆ ಮಾಧ್ಯಮ ಸ್ವತಂತ್ರವಾಗಿ ನಡೆಯಬೇಕಾಗುತ್ತದೆ. ಜನರೇ ಒಡೆಯರಾಗಿ ಸ್ವತಂತ್ರ ಮಾಧ್ಯಮವನ್ನು ಉಳಿಸಬೇಕು ಎಂದವರು ವಿಶ್ಲೇಷಿಸಿದರು.ವಡ್ಡರ್ಸೆ ಅವರಿಂದಲೇ ವರದಿಗಾರನಾಗಿ ಪತ್ರಿಕೋದ್ಯಮಮಕ್ಕೆ ಬಂದು ತಾನು ಇಂದು ಅವರದ್ದೇ ಊರಿನಲ್ಲಿ ಅವರದ್ದೇ ಹೆಸರಿನ ಪ್ರಶಸ್ತಿಯನ್ನು ಪಡೆಯುತ್ತಿರುವುದು ಧನ್ಯತೆಯನ್ನು ನೀಡಿದೆ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಇಂದಿನ ಪತ್ರಿಕೋದ್ಯಮ ಸಂದಿಗ್ಧ, ಸಂಕ್ರಮಣ ಕಾಲದಲ್ಲಿದೆ. ಪ್ರಾಮಾಣಿಕ ಮತ್ತು ನಿರ್ಭಿತ ಪತ್ರಿಕೋದ್ಯಮ ಇಂದಿನ ತುರ್ತು ಅಗತ್ಯವಾಗಿದೆ. ಈ ಸಂದರ್ಭದಲ್ಲಿ ರಘುರಾಮ ಶೆಟ್ಟಿ ವಡ್ಡರ್ಸೆ ಅವರು ಪತ್ರಕರ್ತರಿಗೆ ಮಾದರಿಯಾಗಿದ್ದಾರೆ ಎಂದರು.ಪ್ರಶಸ್ತಿ ಪ್ರದಾನ ಮಾಡಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಎಂ.ಮೋಹನ್ ಆಳ್ವ, ಮೌಲ್ಯಾಧಾರಿತ ಪತ್ರಿಕೋದ್ಯಮ ನಡೆಸಿದ್ದ ವಡ್ಡರ್ಸೆ ಅವರ ಹೆಸರಿನ ಪ್ರಶಸ್ತಿಯು ಮೌಲ್ಯಾಧಾರಿತ ಪತ್ರಿಕೋದ್ಯಮವನ್ನು ನಡೆಸುತ್ತಿರುವ ರವಿ ಹೆಗಡೆ ಅವರಿಗೆ ನೀಡುವ ಮೂಲಕ ಪ್ರಶಸ್ತಿಗೆ ನ್ಯಾಯ ಸಂದಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯರನ್ನು ಅಭಿನಂದಿಸಲಾಯಿತು.
ಕನ್ನಡಪ್ರಭ ಪತ್ರಿಕೆಯ ಪುರವಣಿ ಸಂಪಾದಕ ಜೋಗಿ, ರವಿ ಹೆಗಡೆ ಅವರ ಪರಿಚಯ - ಅಭಿನಂದನಾ ಭಾಷಣ ಮಾಡಿದರು. ಹಿರಿಯ ಪತ್ರಕರ್ತ ಕೆ.ಸಿ. ರಾಜೇಶ್ ಅವರು ಪ್ರಭಾಕರ ಆಚಾರ್ಯರನ್ನು ಅಭಿನಂದಿಸಿದರು.ಬ್ರಹ್ಮಾವರ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಂಟರ ಭವನದ ಅಧ್ಯಕ್ಷ ಭುಜಂಗ ಶೆಟ್ಟಿ, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಜಿಲ್ಲಾ ಸಂಘದ ಪ್ರತಿನಿಧಿ ಮೈಕಲ್ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪತ್ರಕರ್ತರಾದ ಚಂದ್ರಶೇಖರ ಅಚ್ಲಾಡಿ ಕಾರ್ಯಕ್ರಮ ನಿರೂಪಿಸಿದರು, ಚಿತ್ತೂರು ಪ್ರಭಾಕರ ಆಚಾರ್ಯ ಸ್ವಾಗತಿಸಿದರು. ವಸಂತ ಗಿಳಿಯಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಾಗರಾಜ ಅಲ್ತಾರು ವಂದಿಸಿದರು.ಮುಂಗಾರು ಪ್ರದರ್ಶನ:ಕಾರ್ಯಕ್ರಮದಲ್ಲಿ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಜ್ಯ ಶಾಸ್ತ್ರ ವಿಭಾಗದ ವತಿಯಿಂದ 90ರ ದಶಕದಲ್ಲಿ ವಡ್ಡರ್ಸೆ ಅವರು ಸಂಪಾದಕರಾಗಿದ್ದ ಮುಂಗಾರು ಪತ್ರಿಕೆಗಳ ಪ್ರದರ್ಶನವನ್ನು ಏರ್ಪಡಿಸಿದ್ದು ಗಮನ ಸೆಳೆಯಿತು.