ವಿಜಯಪೂರ ಬಸ್ ನಿಲ್ದಾಣದ ಆವರಣದಲ್ಲಿ ಪ್ರತಿಷ್ಠಾಪಿಸಿದಂತೆ ಇಂಡಿ ನಗರದ ಮಿನಿ ವಿಧಾನಸೌಧದ ಮುಂದೆ ಕಿತ್ತೂರ ರಾಣಿ ಚನ್ನಮ್ಮನ ಮೂರ್ತಿ ಪ್ರತಿಷ್ಠಾಪಿಸಲು ಉಪ ವಿಭಾಗಾಧಿಕಾರಿಗಳು ಸ್ಥಳವಕಾಶ ಮಾಡಿಕೊಡಬೇಕೆಂದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ವಿಪರೀತ ಮಳೆಯಿಂದ ತಾಲೂಕಿನಲ್ಲಿ ಸುಮಾರು ₹1801 ಕೋಟಿ ಆರ್ಥಿಕ ನಷ್ಟ ಉಂಟಾಗಿದೆ. ತಾಲೂಕಿನ 52337 ರೈತರಿಗೆ ಜಿಲ್ಲೆಯಲ್ಲಿಯೇ ಅತಿಹೆಚ್ಚು ₹127 ಕೋಟಿ ಬೆಳೆ ಪರಿಹಾರ ನೀಡಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಅತೀ ಹೆಚ್ಚು ವಿಜಯಪುರ ಜಿಲ್ಲೆಗೆ, ಜಿಲ್ಲೆಯಲ್ಲಿಯೇ ಇಂಡಿ ತಾಲೂಕಿಗೆ ಹೆಚ್ಚು ಬೆಳೆ ಪರಿಹಾರ ಸರ್ಕಾರದಿಂದ ಬಂದಿರುವ ಕುರಿತು ರೈತರಿಗೆ ಮನವರಿಕೆ ಮಾಡುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ಮಾತನಾಡಿ, 2025 ಜ.1ರಿಂದ ಡಿ.30 ರವರೆಗೆ ಸರಾಸರಿ 620ಮೀ.ಮಿ ಮಳೆಯಾಗಬೇಕಾಗಿತ್ತು. ಆದರೆ 946ಮೀ.ಮಿ ಮಳೆಯಾಗಿದೆ. ವಾಡಿಕೆಗಿಂತ ಶೇ.53ರಷ್ಟು ಹೆಚ್ಚು ಮಳೆಯಾಗಿರುವುದರಿಂದ ಮೆಕ್ಕೆಜೋಳ, ಹತ್ತಿ, ತೊಗರಿ, ಉಳ್ಳಾಗಡ್ಡೆ ಸೇರಿದಂತೆ ಅನೇಕ ಬೆಳೆಗಳಿಗೆ ಹಾನಿಯಾಗಿದೆ ಎಂದರು.

ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಿಂದ ಸರಬರಾಜು ಮಾಡುವ ನೀರು ನಿರ್ವಹಣೆಗಾಗಿ ಸಂಬಧಿಸಿದ ಮುಖ್ಯ ಕಚೇರಿಯಲ್ಲಿ ಅನುಧಾನ ಲಭ್ಯ ಇದ್ದರೂ, ಅದನ್ನು ಉಪಯೋಗ ಮಾಡಿಕೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಣ ವಿಲೇವಾರಿಯಾಗಿಲ್ಲ. ಹೀಗಾಗಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಗುತ್ತಿಗೆದಾರರಿಗೆ ಈ ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು ಶಾಸಕರು ಸೂಚಿಸಿದರು.

ಹೆಸ್ಕಾಂ ಅಧಿಕಾರಿ ಎಸ್.ಆರ್.ಮೆಂಡೇಗಾರ ಮಾತನಾಡಿ, ತಾಲೂಕಿನಲ್ಲಿ 7 ವಿದ್ಯತ್ ವಿತರಣಾ ಘಟಕಗಳಿದ್ದು, ರೈತರಿಗೆ ಪ್ರತೀ ದಿನ 7 ಗಂಟೆಗಳ ಕಾಲ ಹಗಲು ಹೊತ್ತಿನಲ್ಲೇ ವಿದ್ಯುತ್ ಪೂರೈಕೆ ಮಾಡಲಾಗುವುದು, ನಿಂಬಾಳ ಗ್ರಾಮದಲ್ಲಿಯ ಹೊಸ ವಿದ್ಯುತ್ ಘಟಕದ ಕೆಲಸ ಪ್ರಗತಿಯಲ್ಲಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 60 ಸಾವಿರ ಮಕ್ಕಳು ಓದುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಹೆಚ್ಚಳಕ್ಕೆ ಕ್ರಮ ಜರುಗಿಸಲಾಗಿದೆ ಎಂದರು.

ತಾಲೂಕಿನ ಯಾವುದೇ ಗ್ರಾಮದಲ್ಲಿ ಸ್ಮಶಾನ ಭೂಮಿ ಸಮಸ್ಯೆಗಾಗಿ ದೂರುಗಳು ಬರದಂತೆ ಸಮಸ್ಯೆ ಬಗೆಹರಿಸಬೇಕು. ಹುಲಕೋಟಿ ಮಾದರಿಯಲ್ಲಿ ತಾಲೂಕಿನ ಸ್ಮಶಾನಭೂಮಿ ಸ್ಥಳಗಳನ್ನು ಅಭಿವೃದ್ಧಿ ಪಡಿಸಬೇಕು. ಫೆ.1ರೊಳಗಾಗಿ ಅಗಸನಾಳ ಸ್ಮಶಾನಭೂಮಿ ಸಮಸ್ಯೆ ಇತ್ಯರ್ಥ ಮಾಡಬೇಕು ಎಂದು ಶಾಸಕ ಪಾಟೀಲ ತಿಳಿಸಿದರು. ತಹಸೀಲ್ದಾರ್‌ ಬಿ.ಎಸ್.ಕಡಕಬಾವಿ ಮಾತನಾಡಿ, ತಾಲೂಕಿನ ಎಲ್ಲ 88 ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನಗಳಿದ್ದು, ಕೆಲವು ಕಡೆ ಸರ್ಕಾರಿ ಜಾಗವಿದ್ದು, ಅಲ್ಲಿಗೆ ಹೋಗಲು ದಾರಿ ಸಮಸ್ಯಯಿದೆ. ಅದನ್ನು ಕೂಡಲೇ ಬಗೆಹರಿಸುವುದಾಗಿ ತಿಳಿಸಿದರು.

ರೈತರು 265 ತಳಿಯ ಕಬ್ಬು ಬೆಳೆಯುತ್ತಿದ್ದು, ಇದು ರೈತರಿಗೂ ಮತ್ತು ಕಾರ್ಖಾನೆಯವರಿಗೂ ಲಾಭವಾಗುತ್ತಿಲ್ಲ. ಹೀಗಾಗಿ ಉತ್ತಮ ತಳಿಯ ಕಬ್ಬು ಬೆಳೆಯಲು ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಬೇಕು. ಮುಂಬರುವ ಸಂಕ್ರಮಣ ಸಮಯದಲ್ಲಿ ಸುಗ್ಗಿಹಬ್ಬ ಆಯೋಜನೆ ಮಾಡಿ, ಉತ್ತಮ ಬೆಳೆ ಬೆಳೆಯುವ, ಸಾಧಕ, ಪ್ರಗತಿಪರ ರೈತರನ್ನು ಗುರುತಿಸಿ ಪ್ರಶಸ್ತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಶಾಸಕರು ಸಲಹೆ ನೀಡಿದರು.

ಹೆಸ್ಕಾಂ, ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೆಬಿಜೆಎನ್ ಎಲ್ ಸೇರಿದಂತೆ ಎಲ್ಲ ಇಲಾಖೆಗಳ ಬಗ್ಗೆ ಪ್ರಗತಿ ಪರಿಶೀಲನೆ ಮಾಡಲಾಯಿತು.

ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ತಹಸೀಲ್ದಾರ್‌ ಬಿ.ಎಸ್.ಕಡಕಭಾವಿ, ಇಒ ಭೀಮಾಶಂಕರ ಕನ್ನೂರ, ಗುರನಗೌಡ ಪಾಟೀಲ, ಬಿ.ಕೆ.ಪಾಟೀಲ ಹಿರೇಬೇವನೂರ, ಇಲಿಯಾಸ್ ಬೋರಾಮಣಿ, ಪ್ರಶಾಂತ ಕಾಳೆ, ಬಾಬು ಸಾವಕಾರ ಮೇತ್ರಿ, ಮಲ್ಲಿಕಾರ್ಜುನ ಪಾಟೀಲ, ಕೆಂಪೆಗೌಡ, ಜೆ.ಎಂ.ಕರ್ಜಗಿ ವೇದಿಕೆ ಮೇಲಿದ್ದರು. ಕೆಬಿಜೆಎನ್ಎಲ್ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ, ಸಮಾಜ ಕಲ್ಯಾಣಾಧಿಕಾರಿ ಉಮೇಶ ಲಮಾಣಿ, ಕೃಷಿ ಎಡಿ ಮಹಾದೇವಪ್ಪ ಏವೂರ, ತೋಟಗಾರಿಕೆ ಎಡಿ ಎಚ್.ಎಸ್. ಪಾಟೀಲ, ಹೆಸ್ಕಾಂ ಎಇಇ ಎಸ್.ಆರ್. ಮೆಂಡೆಗಾರ, ಎಇಇ ಶಿವಾಜಿ ಬನಸೋಡೆ, ನಗರಸಭೆ ಪೌರಾಯುಕ್ತ ಶಿವಾನಂದ ಪೂಜಾರಿ, ಯೋಜನಾಧಿಕಾರಿ ನಂದೀಪ ರಾಠೋಡ, ಸಿಡಿಪಿಒ ಗೀತಾ ಗುತ್ತರಗಿಮಠ ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.ಕಿತ್ತೂರ ರಾಣಿ ಚನ್ನಮ್ಮ ಮೂರ್ತಿ ಸ್ಥಾಪನೆಗೆ ನಿರ್ಧಾರ

ವಿಜಯಪೂರ ಬಸ್ ನಿಲ್ದಾಣದ ಆವರಣದಲ್ಲಿ ಪ್ರತಿಷ್ಠಾಪಿಸಿದಂತೆ ಇಂಡಿ ನಗರದ ಮಿನಿ ವಿಧಾನಸೌಧದ ಮುಂದೆ ಕಿತ್ತೂರ ರಾಣಿ ಚನ್ನಮ್ಮನ ಮೂರ್ತಿ ಪ್ರತಿಷ್ಠಾಪಿಸಲು ಉಪ ವಿಭಾಗಾಧಿಕಾರಿಗಳು ಸ್ಥಳವಕಾಶ ಮಾಡಿಕೊಡಬೇಕೆಂದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸೂಚಿಸಿದರು.

ಕೇಂದ್ರ ಸರ್ಕಾರದಿಂದ ಜೆಜೆಎಂ ಯೋಜನೆಯಡಿ ಜಿಲ್ಲೆಗೆ ₹1200 ಕೋಟಿ ಬರಬೇಕು. ಇನ್ನೂವರೆಗೆ ಬಂದಿಲ್ಲ. ಹೀಗಾದರೆ ಯೋಜನೆಗಳು ಬೇಗನೆ ಪೂರ್ಣಗೊಳ್ಳಲು ಹೇಗೆ ಸಾಧ್ಯ. ನಗರ ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಮನರೇಗಾ ಯೋಜನೆ ಮುಂದುವರಿಸಲು ಸಭೆಯಲ್ಲಿ ಠರಾವು ಪಾಸ್ ಮಾಡಿ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಕಳುಹಿಸಬೇಕು ಎಂದರು. ಮಿನಿ ವಿಧಾನಸೌಧ ಮುಂದೆ ಕಿತ್ತೂರ ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪಿಸುವ ಕುರಿತು ಠರಾವು ಪಾಸ್‌ ಮಾಡಲಾಯಿತು. ಮಾ.31ರೊಳಗಾಗಿ ಮಿರಗಿ ಗ್ರಾಮದ ಹೊಸ ಊರ ಜಮೀನದಲ್ಲಿ ನಿರ್ಮಾಣವಾದ ಮನೆಗಳಿಗೆ ಉತಾರೆ ನೀಡಬೇಕು. ಎಲ್ಲಿ ಗಾರ್ಡನ್ ಮಾಡಲು ಸಾಧ್ಯವೊ ಅಲ್ಲಲ್ಲಿ ಗಾರ್ಡನ್ ನಿರ್ಮಾಣ ಮಾಡಿ ಮಾದರಿ ಎನಿಸಿಕೊಳ್ಳಬೇಕು ಎಂದರು.