ವಿಶ್ವದಲ್ಲಿಯೇ ಬಲಿಷ್ಠ ಆರ್ಥಿಕತೆಯಲ್ಲಿ ಭಾರತಕ್ಕೂ ಸ್ಥಾನ

| N/A | Published : Aug 16 2025, 12:00 AM IST

ವಿಶ್ವದಲ್ಲಿಯೇ ಬಲಿಷ್ಠ ಆರ್ಥಿಕತೆಯಲ್ಲಿ ಭಾರತಕ್ಕೂ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತವಿಂದು ವಿಶ್ವದ ಬಲಿಷ್ಠ ದೇಶಗಳಿಗೆ ಸೆಡ್ಡು ಹೊಡೆದು ಆರ್ಥಿಕತೆಯಲ್ಲಿ ಐದನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಕೆ.ಮಂಜುನಾಥ್ ತಿಳಿಸಿದರು

 ಕೊರಟಗೆರೆ :  ಭಾರತವಿಂದು ವಿಶ್ವದ ಬಲಿಷ್ಠ ದೇಶಗಳಿಗೆ ಸೆಡ್ಡು ಹೊಡೆದು ಆರ್ಥಿಕತೆಯಲ್ಲಿ ಐದನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಕೆ.ಮಂಜುನಾಥ್ ತಿಳಿಸಿದರು.ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಆಯೋಜಿಸಲಾದ ೭೯ನೇ ಭಾರತ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಇವತ್ತಿನ ಜಾಗತಿಕ ಮಟ್ಟದಲ್ಲಿ ಭಾರತ ಅಭಿವೃದ್ಧಿಯ ಜೊತೆಗೆ ಆರ್ಥಿಕವಾಗಿಯೂ ಮುಂದೆ ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ.  

ಸ್ವಾತಂತ್ರ್ಯದ ನೆರಳಿನಲ್ಲಿ ಬದುಕುತ್ತಿರುವ ನಾವು ನೀವೆಲ್ಲರೂ ಸ್ವಚ್ಛಂದದ ಸ್ವಾತಂತ್ರ್ಯದ ಹಕ್ಕಿಗಳು. ಸ್ವಾತಂತ್ರ್ಯ ಕೇವಲ ಬದುಕುವುದಕ್ಕೋಸ್ಕರ ಅಲ್ಲ. ಸಂವಿಧಾನದ ಆಶಯದಲ್ಲಿ ದೇಶದ ಘನತೆ, ಗೌರವ, ಸಂಸ್ಕಾರ, ಸಂಪ್ರದಾಯ, ಜಲ, ನೆಲವನ್ನು ರಕ್ಷಿಸುವುದಲ್ಲದೇ ನಾಡಿನ ಪ್ರಗತಿ-ಅಭಿವೃದ್ಧಿಗೆ ಶ್ರಮಿಸುವುದು ನಮ್ಮ ನಿಮ್ಮೇಲ್ಲರಾ ಆದ್ಯ ಕರ್ತವ್ಯ. ಪ್ರಜಾಪ್ರಭುತ್ವದ ಸ್ಥಿರ ಪ್ರಗತಿ ಸಾಮಾಜಿಕ ಪ್ರಜಾಪ್ರಭುತ್ವದ ಬಲವರ್ತನೆಯ ಕಡೆಗೆ ಸಾಧಿಸಿದ ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.ಸ್ವಾತಂತ್ರ್ಯ ಸಿಕ್ಕಿ ೭೯ವರ್ಷ ಪೂರೈಸಿದರೂ ದೇಶದಲ್ಲಿ ಜಾತಿ ವ್ಯವಸ್ಥೆಯ ಆಧಾರದಲ್ಲಿ ಅಪರಾಧಗಳು ನಡೆಯುತ್ತಿರುವುದು ವಿಷಾದನೀಯ. 

19 ನೇ ಶತಮಾನದಲ್ಲಿ ಮಹಿಳೆಯರ ಕುರಿತಾಗಿ ಇದ್ದಂತಹ ಅನಿಷ್ಟ ಪದ್ಧತಿಗಳಿಗೆ ಕಡಿವಾಣ ಹಾಕಿರುವುದೇ ವಿಶ್ವದ ಅತಿದೊಡ್ಡ ಭಾರತದ ಸಂವಿಧಾನ. ೨೦೨೩-೨೪ನೇ ಸಾಲಿನಿಂದ ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ. ಈ ಮೂಲಕ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದರೆ ಕರ್ನಾಟಕ ಭಾರತದಲ್ಲೇ ಅತಿ ಹೆಚ್ಚು ತಲಾದಾಯ ಹೊಂದಿರುವ ದೇಶದ ಎರಡನೇ ರಾಜ್ಯವಾಗಿದೆ ಎಂದರು.

ಇಲ್ಲಿನ ವಾಸವಿ ಯುವಜನ ಸಂಘದ ಅಧ್ಯಕ್ಷ ಬಾಲಾಜಿ ದರ್ಶನ್, ಉಪಾಧ್ಯಕ್ಷ ಸಾಗರ್ ಹೆಚ್.ಪಿ, ಕಾರ್ಯದರ್ಶಿ ಹೇಮಂತ್, ಸಹ ಕಾರ್ಯದರ್ಶಿ ವರುಣ್, ಖಚಾಂಚಿ ಸುಭಾಷ್ ಹಾಗೂ ನಿರ್ದೇಶಕರು ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸುಮಾರು ೨೦೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.ಈ ಕಾರ್ಯಕ್ರಮದಲ್ಲಿ ಪ.ಪಂ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷೆ ಉಸ್ನಾಫಾರಿಯಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ, ತಾ.ಪಂ ಇಒ ಅಪೂರ್ವ, ಸಿಪಿಐ ಅನಿಲ್, ಸ್ಕೌಟ್ಸ್ ಅಂಡ್ ಗೈಡ್ಸ್ ಅಧ್ಯಕ್ಷ ಕೆ.ಆರ್ ಓಬಳರಾಜು, ಗ್ಯಾರಂಟಿ ಸಮಿತಿ ಅಧ್ಯಕ್ಷ ವೆಂಕಟೇಶ್‌ಮೂರ್ತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ಕಸಾಪ ಅಧ್ಯಕ್ಷ ಈರಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥ್‌ನಾರಾಯಣ್, ಅರಕೆರೆ ಶಂಕರ್, ಪ.ಪಂ ಮುಖ್ಯಾಧಿಕಾರಿ ಉಮೇಶ್, ಸದಸ್ಯರಾದ ಲಕ್ಷ್ಮೀನಾರಾಯಣ್, ನಟರಾಜ್ ಸೇರಿದಂತೆ ಇತರರು ಇದ್ದರು.

Read more Articles on