ಭಾರತ ಮಿತ್ರ ರಾಷ್ಟ್ರಗಳ ಸಾರ್ವಭೌಮತ್ವ ರಕ್ಷಿಸಲು ಬದ್ಧ: ರಾಜನಾಥ ಸಿಂಗ್‌

| Published : Apr 06 2025, 01:45 AM IST

ಭಾರತ ಮಿತ್ರ ರಾಷ್ಟ್ರಗಳ ಸಾರ್ವಭೌಮತ್ವ ರಕ್ಷಿಸಲು ಬದ್ಧ: ರಾಜನಾಥ ಸಿಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ರಾಷ್ಟ್ರ ಅತಿಯಾದ ಸಂಪತ್ತು, ಸೇನಾಬಲದಿಂದ ಬೇರೆ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ನಡೆಸುವುದು ಸರಿಯಲ್ಲ.

ಕಾರವಾರ: ಯಾವುದೇ ರಾಷ್ಟ್ರ ಅತಿಯಾದ ಸಂಪತ್ತು, ಸೇನಾಬಲದಿಂದ ಬೇರೆ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ನಡೆಸುವುದು ಸರಿಯಲ್ಲ. ಭಾರತ ಮಿತ್ರ ರಾಷ್ಟ್ರಗಳ ಹಿತಾಸಕ್ತಿ, ಸಾರ್ವಭೌಮತ್ವ ರಕ್ಷಿಸಲು ಬದ್ಧವಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳುವ ಮೂಲಕ ಪರೋಕ್ಷವಾಗಿ ಹಿಂದೂ ಮಹಾಸಾಗರದಲ್ಲಿ ಚೀನಾ ಪ್ರಾಬಲ್ಯ ಸಾಧಿಸುತ್ತಿರುವ ಸಂದರ್ಭದಲ್ಲಿ ಮಿತ್ರ ರಾಷ್ಟ್ರಗಳೊಂದಿಗೆ ಸೇರಿ ಬಲಿಷ್ಠವಾದ ಅಸ್ತಿತ್ವ ಸ್ಥಾಪಿಸುವ ಸುಳಿವು ನೀಡಿದರು.

ರಕ್ಷಣಾ ಸಚಿವ ರಾಜನಾಥ ಸಿಂಗ್ ಇಲ್ಲಿನ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ 9 ರಾಷ್ಟ್ರಗಳ ಪ್ರತಿನಿಧಿಗಳು ಇರುವ ಐಒಎಸ್ ಸಾಗರ ಪರಿಕ್ರಮಕ್ಕೆ ಚಾಲನೆ ಹಾಗೂ ನೌಕಾನೆಲೆಯಲ್ಲಿ ₹2 ಸಾವಿರ ಕೋಟಿ ವೆಚ್ಚದ ವಿವಿಧ ಸೌಲಭ್ಯಗಳನ್ನು ಉದ್ಘಾಟಿಸಿ, ಮಾತನಾಡಿದರು.

ಭಾರತವು ಹಿಂದೂ ಮಹಾಸಾಗರದಲ್ಲಿ ತನ್ನ ಪ್ರಾಬಲ್ಯ ಸಾಧಿಸುತ್ತಿದ್ದು, ಇದು ನಮ್ಮ ರಾಷ್ಟ್ರೀಯ ಹಿತಾಸಕ್ತಿಯ ಜೊತೆಗೆ ನಮ್ಮ ಮಿತ್ರ ರಾಷ್ಟ್ರಗಳ ಸುರಕ್ಷತೆಗೂ ನೆರವು ನೀಡಲಿದೆ ಎಂದರು.

ಹಿಂದೂ ಮಹಾಸಾಗರದಲ್ಲಿ ಭಾರತದ ನೌಕಾಪಡೆಯ ಆದ್ಯತೆ ಕೇವಲ ಸುರಕ್ಷತೆಗಷ್ಟೇ ಅಲ್ಲ, ಸಂಸ್ಕೃತಿ, ವ್ಯಾಪಾರ ವಹಿವಾಟು, ಪ್ರವಾಸೋದ್ಯಮದ ಮೂಲಕ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಪ್ರಾಮುಖ್ಯತೆ ನೀಡಲಾಗುತ್ತದೆ. ಭಾರತವು ಹಿಂದೂ ಮಹಾಸಾಗರದ ಬಳಕೆ ರಾಷ್ಟ್ರಗಳ ಜೊತೆ ಸದಾ ಸಹಕಾರ ಮನೋಭಾವದಿಂದ ನಡೆದುಕೊಂಡಿದೆ. ಇದರಿಂದಾಗಿ ಹಿಂದೂ ಮಹಾಸಾಗರದಲ್ಲಿ ಶಾಂತಿಯುತ ಮತ್ತು ಸಹಬಾಳ್ವೆಗೆ ಸಹಕಾರಿಯಾಗಿದೆ ಎಂದರು.

ಹಿಂದೂ ಮಹಾಸಾಗರದಲ್ಲಿ ಭಾರತದ ಅಸ್ತಿತ್ವದಿಂದಾಗಿ ಮಿತ್ರ ರಾಷ್ಟ್ರಗಳ ನಡುವಣ ಸಂಬಂಧ ಮತ್ತಷ್ಟು ಬಲಿಷ್ಠಗೊಳ್ಳಲು ಸಹಕಾರಿಯಾಗಿದೆ. ಸಮಾನತೆ ಮತ್ತು ಹಕ್ಕುಗಳ ರಕ್ಷಣೆಗೆ ಇದು ಸಹಕಾರಿಯಾಗಿದೆ ಎಂದು ವಿವರಿಸಿದರು.

ಹಿಂದೂ ಮಹಾಸಾಗರದಲ್ಲಿ ಈಚಿನ ವರ್ಷಗಳಲ್ಲಿ ವ್ಯಾಪಾರಿ ಹಡಗುಗಳ ಒತ್ತೆ, ಕಡಲ್ಗಳ್ಳರ ಹಾವಳಿ ಸಂದರ್ಭದಲ್ಲಿ ಭಾರತದ ನೌಕಾಸೇನೆ ರಕ್ಷಣೆಗೆ ಮೊದಲು ಧಾವಿಸುತ್ತದೆ. ಕಡಲುಗಳ್ಳರ ಹಾವಳಿ ಸಂದರ್ಭದಲ್ಲಿ ಕೇವಲ ಭಾರತೀಯ ಹಡಗುಗಳ ರಕ್ಷಣೆಗಲ್ಲದೆ ವಿದೇಶಿ ಹಡಗುಗಳ ರಕ್ಷಣೆಗೂ ಭಾರತೀಯ ನೌಕಾಪಡೆ ಮುನ್ನುಗ್ಗುತ್ತದೆ. ಹಿಂದೂ ಮಹಾಸಾಗರದಲ್ಲಿ ಭಾರತೀಯ ನೌಕಾಪಡೆ ಬಳಕೆದಾರ ರಾಷ್ಟ್ರಗಳ ಜೊತೆ ಶಾಂತಿಯುತ ಹೆಜ್ಜೆ ಇಡುತ್ತಿದ್ದು, ಈ ಉಪಕ್ರಮ ಭಾರತದ ಬಗ್ಗೆ ಹೆಮ್ಮೆ ಮೂಡಿಸುವ ಸಂಗತಿಯಾಗಿದೆ. ಜೊತೆಗೆ ಸುರಕ್ಷಿತ ವ್ಯಾಪಾರ, ವಹಿವಾಟುಗಳಿಗೆ ಅನುಕೂಲಕರವಾಗಿದೆ. ಕಡಲುಗಳ್ಳರ ಹಾವಳಿ ತಡೆಗಟ್ಟಿ, ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟು ಹಿಂದೂ ಮಹಾಸಾಗರವನ್ನು ಸುರಕ್ಷಿತ ವಲಯವಾಗಿಸುವುದು ನಮ್ಮ ಪ್ರಮುಖ ಉದ್ದೇಶ ಎಂದರು.

ಹಿಂದೂ ಮಹಾಸಾಗರವನ್ನು ಮಿತ್ರ ರಾಷ್ಟ್ರಗಳ ಮಧ್ಯೆ ವ್ಯಾಪಾರ ವಹಿವಾಟಿಗೆ ಸುಭದ್ರ ನೆಲೆಯಾಗಿಸಲು ಅಗತ್ಯ ಶಸ್ತ್ರಾಸ್ತ್ರ ಮತ್ತು ಅತ್ಯಾಧುನಿಕ ಉಪಕರಣಗಳ ಮೂಲಕ ಭಾರತೀಯ ನೌಕಾಪಡೆ ಸುಸಜ್ಜಿತವಾಗಿದೆ ಎಂದು ತಿಳಿಸಿದರು.

ಈಚೆಗೆ ಪ್ರಧಾನಿ ನರೇಂದ್ರ ಮೋದಿ ಮಾರಿಷಸ್ ಗೆ ತೆರಳಿದ ಸಂದರ್ಭದಲ್ಲಿ ಸಾಗರಕ್ಕಿಂತ ಮುಂದೆ ಮಹಾಸಾಗರದ ಸಂರಕ್ಷಣೆ ಕಲ್ಪನೆ ಬಿತ್ತಿದ್ದರಿಂದ ಐಒಎಸ್ ಸಾಗರ ನೌಕೆ ಮೂಲಕ ಭಾರತೀಯ ನೌಕಾಪಡೆ ನೆರೆಯ 9 ರಾಷ್ಟ್ರಗಳ 44 ಪ್ರತಿನಿಧಿಗಳ ಜೊತೆ ಸಾಗರ ಪರಿಕ್ರಮಕ್ಕೆ ಹೊರಟಿದ್ದು ಭದ್ರತೆ ಮತ್ತು ಆ ಪ್ರದೇಶಗಳ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ವಿವರಿಸಿದರು.

1919 ಏ.5ರಂದು ಮುಂಬಯಿಯಿಂದ ಲಂಡನ್ ಗೆ ಭಾರತದ ಮೊದಲ ಸರಕು ಹಡಗು ತೆರಳಿತ್ತು. ಅದರ ನೆನಪಿಗೆ 1964ರಿಂದ ಪ್ರತಿ ವರ್ಷ ಏ.5ರಂದು ಮೆರಿಟೈಮ್ ಡೇ ಆಚರಿಸುತ್ತಿದ್ದೇವೆ. ಹಿಂದೂ ಮಹಾಸಾಗರದಲ್ಲಿ ಬಳಕೆದಾರ ರಾಷ್ಟ್ರಗಳ ಹಿತರಕ್ಷಣೆಗೆ ಭಾರತ ಮುಂದಡಿ ಇಟ್ಟಿದ್ದರ ದಶಮಾನೋತ್ಸವ ಅಂಗವಾಗಿ ಈಗ ಐಒಎಸ್ ಸಾಗರ ಪರಿಕ್ರಮವನ್ನು ಭಾರತದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಇದು ಹಿಂದೂ ಮಹಾಸಾಗರದ ದಕ್ಷಿಣ ರಾಷ್ಟ್ರಗಳ ಸಾಗರ ಭದ್ರತೆಯ ನಿಟ್ಟಿನಲ್ಲಿ ಪ್ರಮುಖ ಕಾರ್ಯಕ್ರಮವಾಗಿದೆ. ಹಿಂದೂ ಮಹಾಸಾಗರದಲ್ಲಿ ಸಹಕಾರ ಮತ್ತು ಸಹಯೋಗಕ್ಕೆ ಇದು ಅನುಕೂಲಕರ ಹೆಜ್ಜೆಯಾಗಿದೆ. ಇದರೊಂದಿಗೆ ಭಾರತದ ಆಶೋತ್ತರಗಳು ಉನ್ನತ ಮಟ್ಟಕ್ಕೆ ಸಾಗುವುದೆಂಬ ಭರವಸೆ ಇದೆ. ಐಒಎಸ್ ಸಾಗರ ಪರಿಕ್ರಮವು ಭಾರತದ ನಾಯಕತ್ವಕ್ಕೆ ಸಾಕ್ಷಿಯಾಗುವ ಒಂದು ಸಂದರ್ಭ ಎಂದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಡಿ.ಕೆ. ತ್ರಿಪಾಠಿ, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ ಚೌಹಾಣ, ರಕ್ಷಣಾ ಕಾರ್ಯದರ್ಶಿ ರಾಜೇಶಕುಮಾರ ಸಿಂಗ್ ಇದ್ದರು.

ಬಾಕ್ಸ್-

ಕೆನ್ಯಾ, ಮಡಗಾಸ್ಕರ್, ಕೊಮರೋಸ್, ಮಾಲ್ಡೀವ್ಸ್, ಮಾರಿಶಸ್, ಮೊಜಾಂಬಿಕ್, ಸೇಶೆಲ್ಸ್, ಶ್ರೀಲಂಕಾ ಹಾಗೂ ತಾಂಜಾನಿಯಾ ದೇಶಗಳ ನೌಕಾಪಡೆಯ 44 ಪ್ರತಿನಿಧಿಗಳು ಇರುವ ಐಒಎಸ್ ಸಾಗರ ಪರಿಕ್ರಮಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಚಾಲನೆ ನೀಡಿದ್ದು, ಐಎನ್ಎಸ್ ಸುನಯನ ಹೆಸರಿನ ಈ ನೌಕೆ ಹಿಂದೂ ಮಹಾಸಾಗರದಲ್ಲಿ 9 ಮಿತ್ರ ರಾಷ್ಟ್ರಗಳ ಶಾಂತಿ, ಸುರಕ್ಷತೆಯ ಉಸ್ತುವಾರಿ ವಹಿಸಲಿದೆ.