ಸಾರಾಂಶ
ಅಳ್ನಾವರ:
ನಿಮ್ಮ ದೇಶದಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಬೇರೆ ದೇಶದ ನ್ಯಾಯಾಲಯ ನಮಗೆ ಹೇಳಬೇಕೆ ಎಂದು ಸಚಿವ ಸಂತೋಷ ಲಾಡ್ ಗೌತಮ ಅದಾನಿ ಮೇಲಿನ ಭ್ರಷ್ಟಾಚಾರದ ಆರೋಪವನ್ನು ಪ್ರಶ್ನಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸರ್ಕಾರ ಇದ್ದರೂ ಭ್ರಷ್ಟಾಚಾರ ಮಾಡಿದ್ದರೆ ತಪ್ಪು. ಭ್ರಷ್ಚಾಚಾರ ಆಗಿರುವ ವೇಳೆ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಯಾವ ಸರ್ಕಾರ ಇತ್ತು ಎನ್ನುವುದನ್ನು ನಂತರ ನೋಡೋಣ. ಭ್ರಷ್ಟಾಚಾರ ಆಗುವಾಗ ಕೇಂದ್ರ ಸರ್ಕಾರದ ಇಂಟಲಿಜೆನ್ಸ್ ಇರಲಿಲ್ಲವೇ? ಭ್ರಷ್ಟಾಚಾರ ಆಗಿರುವುದನ್ನು ಬೇರೆ ದೇಶದ ನ್ಯಾಯಾಲಯ ನಮಗೆ ಹೇಳಬೇಕಾ? ಎಂದರು.
ಸೌರ ವಿದ್ಯುತ್ ಗುತ್ತಿಗೆ ನೀಡುವಲ್ಲಿ ಕೇಂದ್ರದ ಸೌರವಿದ್ಯುತ್ ನಿಗಮದ ಒಳ ಒಪ್ಪಂದ ಇದೆ. ಈ ವಿಷಯದಲ್ಲಿ ರಾಜಕೀಯ ಹೇಳಿಕೆ ಬೇಡ. ಆದರೆ, ಬಿಜೆಪಿಯವರು ಈ ಬಗ್ಗೆ ಮಾತನಾಡಬೇಕಲ್ಲವೇ? ಎಲ್ಲ ಬಿಜೆಪಿ ವಕ್ತಾರರು ಅದಾನಿ ಪರವಾಗಿಯೇ ಮಾತನಾಡುತ್ತಾರೆ. ಬಿಜೆಪಿ ವಕ್ತಾರರಿಗೂ ಅದಾನಿಗೂ ಏನು ಸಂಬಂಧ? ಅದಾನಿಗೆ ಅಮೆರಿಕದ ನ್ಯಾಯಾಲಯ ವಾರೆಂಟ್ ನೀಡಿದೆ. ಬೇರೆ ದೇಶದ ನ್ಯಾಯಾಲಯ ಹೇಳಿದ್ದನ್ನು ಭಾರತ ಸರ್ಕಾರ ಒಪ್ಪಿಕೊಳ್ಳುತ್ತದೆಯೇ? ಎಂದರು.ರಾಹುಲ್ ಗಾಂಧಿ ಹತ್ತು ವರ್ಷಗಳ ಹಿಂದೆಯೇ ಅದಾನಿ ಭ್ರಷ್ಟ ಉದ್ಯಮಿ ಎಂದಿದ್ದರು. ಅದು ಈಗ ಪ್ರಪಂಚಕ್ಕೆ ಸಾಬೀತಾಗಿದೆ. ಬಿಜೆಪಿ ಇನ್ನಾದರೂ ಪಾಠ ಕಲಿಯಬೇಕು. ಎಲ್ಲದಕ್ಕೂ ಕಾಂಗ್ರೆಸ್, ರಾಹುಲ್ ಗಾಂಧಿ ಅವರನ್ನು ಹೊಣೆ ಮಾಡಬಾರದು. ಈಗ ಅಲ್ಲಿರುವ ಟ್ರಂಪ್ ಸರ್ಕಾರ ನಮ್ಮ ಪ್ರಧಾನಿ ನರೇಂದ್ರ ಮೋದಿಗೆ ಚಿರಪರಿಚಿತ. ಮೋದಿಯವರು ಟ್ರಂಪ್ ಮೂಲಕ ಹೇಳಿಸಬಹುದಿತ್ತಲ್ಲವೇ? ಎಂದ ಲಾಡ್, ಕರ್ನಾಟಕದಲ್ಲಿ ಭ್ರಷ್ಟಾಚಾರ ಇದೆ ಎಂದು ಮೋದಿ ಹೇಳಿದ್ದರು. ಅದಾನಿ ಪ್ರಕರಣದಲ್ಲಿ ಅವರೇನು ಹೇಳುತ್ತಾರೆ. ಇದರ ಬಗ್ಗೆ ಚರ್ಚೆ ಮಾಡುತ್ತಾರಾ? ಸುಮ್ಮನೆ ಸಿನಿಮಾ ಓಡಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡರ ಬಗ್ಗೆ ಕಿಡಿಕಾರಿದರು.
ಸಚಿವರ ಪ್ರಗತಿ ವರದಿ ಕೇಳಿದ್ದಾರೆ:ರಾಜ್ಯ ಸರ್ಕಾರದ ಎಲ್ಲ ಸಚಿವರ ಪ್ರಗತಿ ವರದಿ ಕೇಳಿದ್ದು ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಅಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವ ಲಾಡ್, ಸಚಿವರು ತಮ್ಮ ಇಲಾಖೆಗಳ ಅಭಿವೃದ್ಧಿಯಲ್ಲಿ ಏನೇನು ಮಾಡಿದ್ದಾರೆ ಎಂಬುದರ ವರದಿ ಕೇಳಲಾಗಿದೆ. ಸಂಪುಟ ವಿಸ್ತರಣೆ, ರಚನೆ ಹೈಕಮಾಂಡ್‌ಗೆ ಬಿಟ್ಟಿದ್ದು. ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಲಾಡ್ ಹೇಳಿದರು.