ಹೊಸಪೇಟೆ: ಪ್ರಾಚೀನ ಕಾಲದಲ್ಲಿ ಭಾರತ ತನ್ನ ಸಮೃದ್ಧ ಶಿಕ್ಷಣ ವ್ಯವಸ್ಥೆ, ವಿಜ್ಞಾನ ಮತ್ತು ಆಧ್ಯಾತ್ಮಿಕತೆಯಿಂದಾಗಿ ’ವಿಶ್ವಗುರು’ ಎನಿಸಿಕೊಂಡಿತ್ತು. ಅದೇ ಪರಂಪರೆಯನ್ನು ಮುಂದುವರಿಸುತ್ತ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಯುವಜನತೆಯ ಪಾತ್ರ ನಿರ್ಣಾಯಕವಾಗಿದೆ ಎಂದು ರಾಜ್ಯಪಾಲ ಹಾಗೂ ಹಂಪಿ ಕನ್ನಡ ವಿವಿ ಕುಲಾಧಿಪತಿ ಥಾವರ್ ಚಂದ್ ಗೆಹೆಲೋತ್‌ ಆಶಯ ವ್ಯಕ್ತಪಡಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಸಂಜೆ 34ನೇ ನುಡಿಹಬ್ಬದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ ಇಂದು ತನ್ನ ಭವ್ಯ ಇತಿಹಾಸ ಮತ್ತು ವಾಸ್ತುಶಿಲ್ಪಕ್ಕೆ ವಿಶ್ವಪ್ರಸಿದ್ಧವಾಗಿದೆ. ಇಲ್ಲಿರುವ ಕನ್ನಡ ವಿಶ್ವವಿದ್ಯಾಲಯ ನಮ್ಮ ಸಮೃದ್ಧ ಪರಂಪರೆ ಮತ್ತು ಆಧುನಿಕ ಶಿಕ್ಷಣದ ಕೊಂಡಿಯಾಗಿದೆ ಎಂದರು.

ಸಮಾಜಸೇವೆ, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗೌರವಾನ್ವಿತ ಪ್ರೊ. ಸಿ. ಮಹದೇವಪ್ಪ, ಡಾ. ಜಿ. ರಾಮಕೃಷ್ಣ, ಮತ್ತು ಡಾ. ಎಚ್. ಎಸ್. ಸತ್ಯನ್ ಅವರಿಗೆ ’ನಾಡೋಜ’ ಪ್ರಶಸ್ತಿ ನೀಡಿದ್ದು, ಅವರ ಸಾಧನೆ ಸಮಾಜಕ್ಕೆ ಪ್ರೇರಣೆಯಾಗಲಿ ಎಂದು ಹೇಳಿದರು.


ವಿಕಸಿತ ಭಾರತದ ಗುರಿ

ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಮತ್ತು ಸ್ಟಾರ್ಟ್​ಅಪ್ ಯೋಜನೆಗಳ ಸದುಪಯೋಗ ಪಡೆದುಕೊಂಡು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಯುವಕರು ಶ್ರಮಿಸಬೇಕು. ಶಿಕ್ಷಣದ ಹಂತದಿಂದ ಈಗ ನೀವು ಕರ್ಮದ ಹಂತಕ್ಕೆ ಕಾಲಿಡುತ್ತಿದ್ದೀರಿ ಎಂದರು.

ವಸುಧೈವ ಕುಟುಂಬಕಂ

ಭಾರತೀಯ ಶಿಕ್ಷಣ ಪದ್ಧತಿಯು ’ವಸುಧೈವ ಕುಟುಂಬಕಂ’ ಎಂಬ ಉದಾತ್ತ ತತ್ವದ ಮೇಲೆ ನಿಂತಿದೆ. ಆಧುನಿಕ ಜ್ಞಾನವನ್ನು ಮಾನವೀಯ ಮೌಲ್ಯಗಳೊಂದಿಗೆ ಬೆರೆಸಿ ಜಗತ್ತಿಗೆ ಮಾದರಿಯಾಗುವಂತೆ ನಾವು ಶಿಕ್ಷಣ ನೀಡಬೇಕಿದೆ ಎಂದರು.

ಕನ್ನಡ ಭಾಷೆ, ಸಾಹಿತ್ಯದ ಜೊತೆಗೆ ಇತಿಹಾಸ, ದರ್ಶನ ಶಾಸ್ತ್ರ, ಪುರಾತತ್ವ ಮತ್ತು ಸಮಾಜಶಾಸ್ತ್ರದಂತಹ ವಿಷಯಗಳಲ್ಲಿ ವಿಶ್ವವಿದ್ಯಾಲಯ ನಡೆಸುತ್ತಿರುವ ಸಂಶೋಧನಾ ಕಾರ್ಯಗಳನ್ನು ರಾಜ್ಯಪಾಲರು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಕೋರಿದ ಅವರು, ಶಿಕ್ಷಕರು ಕೇವಲ ಜ್ಞಾನ ನೀಡುವವರಲ್ಲ, ಬದಲಾಗಿ ಜೀವನಕ್ಕೆ ಸರಿಯಾದ ದಾರಿ ತೋರಿಸುವ ಮಾರ್ಗದರ್ಶಕರು ಎಂದು ಬಣ್ಣಿಸಿದರು.