ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಾಂಗ್ರೆಸ್ ನೇತೃತ್ವದ ‘ಐಎನ್‌ಡಿಐಎ’ ಒಕ್ಕೂಟದ ಎಂಜಿನ್ ಕಟ್ ಆಗಿದ್ದು, ಯಾವುದೇ ಕಾರಣಕ್ಕೂ ಟೇಕಾಫ್ ಆಗುವುದಿಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಲೇವಡಿ ಮಾಡಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇಂಡಿಯಾ ಒಕ್ಕೂಟದ ಅನೇಕ ಸದಸ್ಯರುಗಳಲ್ಲಿಯೇ ಹೊಂದಾಣಿಕೆ ಇಲ್ಲವಾಗಿದೆ. ಕೇರಳ ರಾಜ್ಯದಲ್ಲಿ ಈಗಾಗಲೇ ಜಗಳ ಪ್ರಾರಂಭವಾಗಿದೆ. ಸಿಪಿಐ, ಕಾಂಗ್ರೆಸ್ ನಾಯಕರ ನಡುವೆ ಕಿತ್ತಾಟ ಶುರುವಾಗಿದೆ. ರಾಹುಲ್ ಗಾಂಧಿ ಬಂಧನವಾಗುವ ಬಗ್ಗೆಯೇ ಮಾತುಕತೆ ಯಾಗುತ್ತಿದೆ. ಈಗಾಗಿ ಇಂಡಿಯಾ ಒಕ್ಕೂಟ ಮುಂದೆ ಸಾಗುವುದಿಲ್ಲ ಎಂದರು.
ತಮಿಳುನಾಡಿನಲ್ಲಿ ಬಿಜೆಪಿ ತನ್ನ ಖಾತೆ ತೆರೆಯಲಿದೆ. ಆಂಧ್ರಪ್ರದೇಶದಲ್ಲೂ ಕೂಡ ಕಾಂಗ್ರೆಸ್‌ಗೆ ಮಹತ್ವವಿಲ್ಲವಾಗಿದೆ. ಈ ಎಲ್ಲಾ ಕಾರಣಗಳಿಂದ ಇಂಡಿಯಾ ಒಕ್ಕೂಟ ಟೇಕಾಫ್ ಆಗಲು ಸಾಧ್ಯವೇ ಇಲ್ಲ. ಇದು ಲೋಕಸಭಾ ಚುನಾವಣೆ ಪಂಚಾಯಿತಿ ಚುನಾವಣೆಯಲ್ಲ, ಇದು ದೇಶದ ಚುನಾವಣೆ. ಜನ ಬುದ್ಧಿವಂತರಿರುತ್ತಾರೆ. ಯಾರು ಪ್ರಧಾನಿಯಾಗಬೇಕು ಎಂಬುದನ್ನು ಅವರು ಈಗಾಗಲೇ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು.ಕರ್ನಾಟಕದ ಕಾಂಗ್ರೆಸ್ ಮುಖಂಡರು ಪ್ರಧಾನಿ ಮೋದಿ ಅವರ ಬಗ್ಗೆ ಕೀಳುಮಟ್ಟದ ಮಾತನಾಡುತ್ತಿರುವುದು ಸರಿಯಲ್ಲ. ಪ್ರಧಾನಿ ಹುದ್ದೆಗೆ ಗೌರವ ಕೊಡಬೇಕು. ಜನರು ಇದನ್ನು ಗಮನಿಸುತ್ತಾರೆ. ಒಬ್ಬ ಪ್ರಧಾನಿ ಎಂದರೆ ಕೇವಲ ಆ ದೇಶದವರು ಮಾತ್ರ ಆಗಿರುವುದಿಲ್ಲ. ಇಡೀ ಪ್ರಪಂಚದ ಆಗುಹೋಗುಗಳ ಬಗ್ಗೆ ಅರಿವಿರಬೇಕಾಗುತ್ತದೆ. ಹಾಗಾಗಿಯೇ ಮೋದಿ ಅವರನ್ನು ಬಿಟ್ಟು ಬೇರೆ ಯಾರೂ ಪ್ರಧಾನಮಂತ್ರಿಯಾಗಲು ಸಾಧ್ಯವಿಲ್ಲ ಎಂದರು.ಬರ ಪರಿಹಾರದ ಬಗ್ಗೆ ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಮೋಸ ಮಾಡಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ಬರ ಪರಿಹಾರವಾಗಲಿ, ನೆರೆ ಪರಿಹಾರವಾಗಲಿ ಅದನ್ನು ನೀಡಲು ಕೇಂದ್ರ ಸರ್ಕಾರಕ್ಕೆ ತನ್ನದೇ ಇತಿ ಮಿತಿಗಳಿವೆ. ಎಸ್.ಡಿ.ಆರ್.ಎಫ್. ಮತ್ತು ಎನ್.ಡಿ.ಆರ್.ಎಫ್. ಗಳ ಮೂಲಕ ಅದನ್ನು ನೀಡಬೇಕಾಗುತ್ತದೆ. ಹಾಗೆ ನೋಡಿದರೆ ಬಿಜೆಪಿ ಆಡಳಿತದಲ್ಲಿರುವ ಯಾವುದೇ ರಾಜ್ಯಗಳಿಗೂ ಹಣ ನೀಡಿಲ್ಲ. ನೆರವು ಕೇಳಲು ಸ್ನೇಹಿತನ ತರಹ ಹೋಗಬೇಕೆ ವಿನಃ ಪ್ರತಿಭಟನೆಯ ಮೂಲಕ ಅಲ್ಲ. ಈಗಾಗಲೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಹಣ ನೀಡಲು ಒಪ್ಪಿದೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅದು ಮುಂದಕ್ಕೆ ಹೋಗಿದೆ ಅಷ್ಟೇ ಎಂದು ತಿಳಿಸಿದರು.ಯಾವುದೇ ಗ್ಯಾರಂಟಿಗಳು ಸರ್ಕಾರವನ್ನು ಉರುಳಿಸುತ್ತವೆ. ಅಥವಾ ಅಧಿಕಾರಕ್ಕೆ ತರುತ್ತವೆ ಎನ್ನುವುದು ಸುಳ್ಳು. ಚುನಾವಣೆಗಳು ಗ್ಯಾರಂಟಿಗಳ ಮೇಲೆ ನಿಂತಿಲ್ಲ. ಕರ್ನಾಟಕದ ವಿಧಾನಸಭಾ ಚುನಾವಣೆಯೂ ಕೂಡ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಗ್ಯಾರಂಟಿಗಳಿಂದ ಅಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಹಾಗಾಗಿ ಕಾಂಗ್ರೆಸ್ ನವರು ಭ್ರಮೆಯಲ್ಲಿದ್ದಾರೆ. ಗ್ಯಾರಂಟಿಗಳಿಂದ ನಾವು ಗೆಲ್ಲುತ್ತೇವೆ ಎನ್ನುವುದು ಸುಳ್ಳು ಎಂದು ಕುಟುಕಿದರು.ಬಿಜೆಪಿ ಬಗ್ಗೆ ಟೀಕೆ ಮಾಡುವವರಿಗೆ ಜೂನ್ 4 ರಂದು ಉತ್ತರ ಸಿಗುತ್ತದೆ. ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಗೆಲುವು ಖಚಿತವಾಗಿದೆ. ಈಶ್ವರಪ್ಪನವರ ಸ್ಪರ್ಧೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಅವರ ಬಗ್ಗೆ ನನಗೆ ಗೌರವವಿದೆ. ಆದರೆ ಈ ಚುನಾವಣೆ ನಡೆಯು ವುದು ಮೋದಿಗಾಗಿ. ಇದು ರಾಷ್ಟ್ರೀಯ ಚುನಾವಣೆ. ಜನರು ಸ್ಥಳೀಯ ನಾಯಕರನ್ನು ನೋಡುವುದಿಲ್ಲ. ರಾಷ್ಟ್ರೀಯ ನಾಯಕರನ್ನು ಮಾತ್ರ ನೋಡುತ್ತಾರೆ. ಕಣ್ಣುಮುಚ್ಚಿ ಕರ್ನಾಟಕದಲ್ಲಿ ಜನ ಬಿಜೆಪಿಗೆ ಓಟು ಹಾಕುತ್ತಾರೆ. ಕರ್ನಾಟಕದಲ್ಲಿ 28 ಕ್ಷೇತ್ರಗಳಲ್ಲೂ ಎನ್.ಡಿ.ಎ. ಮೈತ್ರಿಕೂಟ ಗೆಲ್ಲಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಪ್ರಮುಖರಾದ ಎಸ್. ದತ್ತಾತ್ರಿ, ಚಂದ್ರಶೇಖರ್, ಕೆ.ವಿ. ಅಣ್ಣಪ್ಪ, ವಿನ್ಸೆಂಟ್ ರೋಡ್ರಿಗಸ್, ಗಣೇಶ್ ಬಿಳಕಿ, ಪೆರುಮಾಳ್, ಶಿವಕುಮಾರ್ ಇದ್ದರು.
ಭದ್ರಾವತಿಯಲ್ಲೂ ಬಿವೈಆರ್ ಪರ ಅಣ್ಣಾಮಲೈ ಮತಬೇಟೆಭದ್ರಾವತಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಪರವಾಗಿ ನಗರದಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು.ಈ ಬಾರಿ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಪುನಃ ಆಯ್ಕೆ ಮಾಡುವ ನಿಟ್ಟಿನಲ್ಲಿ ಕ್ಷೇತ್ರದ ಮತದಾರರು ಹೆಚ್ಚಿನ ಮತಗಳನ್ನು ನೀಡುವ ಮೂಲಕ ಬೆಂಬಲಿಸುವಂತೆ ಮನವಿ ಮಾಡಿದರು.ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರಾದ ಎಂ.ಬಿ.ಭಾನುಪ್ರಕಾಶ್, ಶಾರದ ಅಪ್ಪಾಜಿ, ಎಸ್.ದತ್ತಾತ್ರಿ, ಡಿ.ಟಿ ಮೇಘರಾಜ್, ಮಂಗೋಟೆ ರುದ್ರೇಶ್, ಕುಮಾರ್, ಆರ್. ಕರುಣಾಮೂರ್ತಿ, ಜಿ.ಧರ್ಮಪ್ರಸಾದ್, ವಿ. ಕದಿರೇಶ್, ಜಿ.ಆನಂದ್ ಕುಮಾರ್, ಮಂಜುನಾಥ್ ಕದಿರೇಶ್, ಕೂಡ್ಲಿಗೆರೆ ಹಾಲೇಶ್, ಎಚ್.ತೀರ್ಥಯ್ಯ, ಚೆನ್ನೇಶ್, ಅಣ್ಣಪ್ಪ, ಗಾಯತ್ರಿದೇವಿ ಮಲ್ಲಪ್ಪ, ಆರ್.ಎಸ್ ಶೋಭ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.