ಕೆಚ್ಚೆದೆಯ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯ: ಶಾಸಕ ಬಸವರಾಜ ಶಿವಣ್ಣನವರ

| Published : Aug 16 2024, 12:51 AM IST

ಕೆಚ್ಚೆದೆಯ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯ: ಶಾಸಕ ಬಸವರಾಜ ಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ಪರಕೀಯರು ಕೊಟ್ಟ ಹಿಂಸೆ ಮತ್ತು ಅವಮಾನಗಳಿಂದ ದೇಶದ ಸ್ವಾತಂತ್ರ್ಯ ಚಳವಳಿ ಎಚ್ಚರಗೊಂಡಿತು, ಕೆಚ್ಚೆದೆಯ ಹೋರಾಟಗಾರರ ಸರ್ವೋಚ್ಚ ತ್ಯಾಗಕ್ಕೆ ಭಾರತದಲ್ಲಿನ ದೇಶಭಕ್ತರು ಕೈಜೋಡಿಸಿದರು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಬ್ಯಾಡಗಿ:

ದೇಶ ಪರಕೀಯರ ಆಳ್ವಿಕೆಯಲ್ಲಿದ್ದ ದಿನಗಳನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕಾಗುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಜೀವ ತೆತ್ತವರೆಷ್ಟೋ? ಆದರೆ, ನಾವೆಲ್ಲರೂ ಸೇರಿ ಹೋರಾಟದಲ್ಲಿ ಮಡಿದವರ ಕನಸುಗಳನ್ನು ನನಸು ಮಾಡುವ ಬೃಹತ್ ಸರಪಳಿಯ ಭಾಗವಾಗಬೇಕಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಕರೆ ನೀಡಿದರು.

ಪಟ್ಟಣದ ಎಸ್.ಜೆ.ಜೆ.ಎಂ. ತಾಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರಕೀಯರು ಕೊಟ್ಟ ಹಿಂಸೆ ಮತ್ತು ಅವಮಾನಗಳಿಂದ ದೇಶದ ಸ್ವಾತಂತ್ರ್ಯ ಚಳವಳಿ ಎಚ್ಚರಗೊಂಡಿತು, ಕೆಚ್ಚೆದೆಯ ಹೋರಾಟಗಾರರ ಸರ್ವೋಚ್ಚ ತ್ಯಾಗಕ್ಕೆ ಭಾರತದಲ್ಲಿನ ದೇಶಭಕ್ತರು ಕೈಜೋಡಿಸಿದರು. ಅವರೆಲ್ಲರ ಪರಿಶ್ರಮ ಹಾಗೂ ತ್ಯಾಗ ಬಲಿದಾನಗಳಿಂದ ವಿಶ್ವದೆಲ್ಲೆಡೆ ಭಾರತೀಯರು ತಲೆ ಎತ್ತಿ ನಿಲ್ಲುವಂತೆ ಮಾಡಿದ್ದು, ಅಂತಹವರನ್ನು ಸ್ಮರಿಸಿಕೊಂಡು ನಮನಗಳನ್ನು ಸಲ್ಲಿಸುತ್ತೇನೆ ಎಂದರು.

ಅಡೆತಡೆ ಇಲ್ಲದ ಪಯಣ

ವಿವಿಧ ಜಾತಿ, ಧರ್ಮ, ಸಂಪ್ರದಾಯಗಳ ಜನರು ಒಂದೇ ಧ್ವಜದ ಕೆಳಗೆ ಜೀವಿಸುವುದಕ್ಕೆ ಅವಕಾಶ ಸಿಕ್ಕು ಇಂದಿಗೆ 78 ವರ್ಷಗಳು ಸಂದಿವೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಜೊತೆಗೆ, ಸರ್ದಾರ್ ಪಟೇಲ್, ಲಾಲ್ ಬಹದ್ದೂರ ಶಾಸ್ತ್ರಿ, ಜವಾಹರಲಾಲ್ ನೆಹರು, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮತ್ತು ಇನ್ನೂ ಅನೇಕ ಮಹಾನ್ ನಾಯಕರು ರಾಷ್ಟ್ರವ್ಯಾಪಿ ಹುಟ್ಟು ಹಾಕಿದ ಆಂದೋಲನ ಇಂದು ಸ್ವತಂತ್ರ ರಾಷ್ಟ್ರದ ಪ್ರಯಾಣ ಯಾವುದೇ ಅಡೆತಡೆಗಳಿಲ್ಲದೇ ಸಾಗುವಂತೆ ಮಾಡಿದೆ ಎಂದರು.

ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ

ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಫೈರೋಜ್ ಸೋಮನಕಟ್ಟಿ, ದೂರದೃಷ್ಟಿ ವಿಚಾರಗಳ ನಾಯಕತ್ವದಿಂದ ಭಾರತ ಇಂದು 5ನೇ ಅತೀದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ರೈತರು, ಕಾರ್ಮಿಕರು ತಮ್ಮ ಪ್ರಾಣವನ್ನು ಪಣಕ್ಕಿಡುವ ನಮ್ಮ ಸಶಸ್ತ್ರ ಪಡೆಗಳ ವೀರಯೋಧರ ದಣಿವರಿಯದ ಪರಿಶ್ರಮ ಇದಕ್ಕೆ ಸಾಥ್ ನೀಡಿದ್ದು ದೇಶದ ಸ್ವಾತಂತ್ರ್ಯ ದಿನಾಚರಣೆ ಈ ಶುಭ ಸಂದರ್ಭದಲ್ಲಿ ಸರ್ವರಿಗೂ ಶುಭಾಶಯಗಳನ್ನು ತಿಳಿಸುತ್ತೇನೆ ಎಂದರು.

ಇದಕ್ಕೂ ಮುನ್ನ ಪೊಲೀಸ್, ಎನ್‌ಸಿಸಿ ಸೇರಿದಂತೆ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಬಳಿಕ ನಿವೃತ್ತ ಸೈನಿಕರೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದವರನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸನ್ಮಾನಿಸಲಾಯಿತು. ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.