ಸಂಸ್ಕೃತಿಯಿಂದಾಗಿ ಭಾರತಕ್ಕೆ ವಿಶ್ವದಲ್ಲಿಯೇ ಗೌರವಯುತ ಸ್ಥಾನ

| Published : Jul 10 2024, 12:33 AM IST

ಸಂಸ್ಕೃತಿಯಿಂದಾಗಿ ಭಾರತಕ್ಕೆ ವಿಶ್ವದಲ್ಲಿಯೇ ಗೌರವಯುತ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಸಂಸ್ಕೃತಿ ಕಾರಣದಿಂದ ಭಾರತಕ್ಕೆ ವಿಶ್ವದಲ್ಲಿಯೇ ಗೌರವಯುತ ಸ್ಥಾನ ಲಭಿಸಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಪ್ರಬೋಧಿನೀ ಗುರುಕುಲದಲ್ಲಿ ನೂತನ ಛಾತ್ರ ಪ್ರವೇಶೋತ್ಸವ

ಕನ್ನಡಪ್ರಭ ವಾರ್ತೆ, ಕೊಪ್ಪ

ಸಂಸ್ಕೃತಿ ಕಾರಣದಿಂದ ಭಾರತಕ್ಕೆ ವಿಶ್ವದಲ್ಲಿಯೇ ಗೌರವಯುತ ಸ್ಥಾನ ಲಭಿಸಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.ತಾಲೂಕಿನ ಸಿಗದಾಳಿನ ಪ್ರಭೋಧಿನಿ ಗುರುಕುಲದಲ್ಲಿ ಸೋಮವಾರ ನಡೆದ ನೂತನ ಛಾತ್ರ ಪ್ರವೇಶೋತ್ಸವದಲ್ಲಿ ಆಶೀರ್ವಚನ ನೀಡಿದರು. ಎಲ್ಲ ದೇಶಗಳ ಮೇಲಾದಂತೆ ನಮ್ಮ ದೇಶದ ಮೇಲೆ ವಿದೇಶಿ ದಾಳಿಯಾಯಿತು. ಆದರೆ ನಾವೆಂದಿಗೂ ನಮ್ಮತನ ಕಳೆದುಕೊಳ್ಳಲಿಲ್ಲ. ನಾವು ಯಾರ ಮೇಲೂ ದಂಡೆತ್ತಿ ಹೋದವರಲ್ಲ. ಆದರೂ ಪರಕೀಯರು ನಮ್ಮ ಸಂಸ್ಕೃತಿಗೆ ಶರಣಾಗಿಹೋದರು. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಬಯಸಿದಂತೆ ಪಿತ್ರಾರ್ಜಿತ ಸಂಸ್ಕೃತಿಯನ್ನೂ ಕೇಳಿ ಪಡೆದು ಮುಂದಿನ ತಲೆಮಾರಿಗೆ ನೀಡಬೇಕು. ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ ಎಂದು ಸಾರಿದ ಸಂಸ್ಕೃತಿ ನಮ್ಮದು. ಜಗತ್ತಿಗೇ ಗುರುವಾದ ಶ್ರೀ ಕೃಷ್ಣನೂ ಕೂಡ ಸಾಂದೀಪಿನಿ ಆಶ್ರಮದಲ್ಲಿ ಗುರುಕುಲ ಅಧ್ಯಯನ ಮಾಡಿದ್ದ. ಆದರ್ಶ ಪುರುಷ ಶ್ರೀರಾಮನೂ ವಿಶ್ವಾಮಿತ್ರರ ಗುರುಕುಲದಲ್ಲಿ ಕಲಿತಿದ್ದ. ಗುರುಕುಲದಲ್ಲಿ ಕಲಿತ ರಾಮ ಪಿತೃ ವಾಕ್ಯ ಪರಿಪಾಲಕನಾದ, ಗುರುಕುಲ ಶಿಕ್ಷಣ ಪಡೆದ ಕೃಷ್ಣ ಧರ್ಮ ಸಂಸ್ಥಾಪನೆ ಮಾಡಿದ. ಮಾತ, ಪಿತೃ, ಆಚಾರ್ಯರು ಹೇಗೆ ದೇವರೋ ಅಂತೆಯೇ ರಾಷ್ಟ್ರವನ್ನೂ ದೇವರಂತೆ ಆರಾಧಿಸಬೇಕು. ಎಳೆ ವಯಸ್ಸಿನಲ್ಲೇ ಇಂತಹ ಆಧ್ಯಾತ್ಮ ಆಧಾರಿತ ರಾಷ್ಟ್ರೀಯ ಶಿಕ್ಷಣ ಪ್ರಬೋಧಿನೀ ಗುರುಕುಲದಲ್ಲಿ ನೀಡಲಾಗುತ್ತಿದೆ ಎಂದರು.ಅಭ್ಯಾಗತರ ಶಿರೀಶ್ ಪಿ.ಗುರ್ಜರ್ ಮಾತನಾಡಿ ಮಕ್ಕಳ ಸರ್ವತೋಮುಖ ವಿಕಾಸವಾಗಬೇಕೆಂಬ ಮಹದಾಸೆಯಿಂದ ಗುರುಕುಲ ಆರಂಭ ವಾಯಿತು. ಶಿಕ್ಷಣ ಎಂದರೆ ಸಂಸ್ಕಾರ ಮತ್ತು ಸಂಸ್ಕೃತ. ಸಂಸ್ಕೃತ ಮಹತ್ವವನ್ನು ಇಡೀ ಜಗತ್ತೇ ಅರಿತಿದೆ. ಆಧುನಿಕ ಶಿಕ್ಷಣ ವ್ಯವಸ್ಥೆಯೂ ಸಂಸ್ಕೃತವನ್ನು ಸ್ವೀಕರಿಸಿದೆ. ಪುರಾತನ ಕಾಲದಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಭಾಷೆಯಾಗಿತ್ತು. ಆದಿಶಂಕರರು ದೇಶಪರ್ಯಟನೆ ಮಾಡುತ್ತಾ ವೇದಾಂತದ ಸಂದೇಶ ಸಾರಿದ್ದು ಸಂಸ್ಕೃತದಲ್ಲಿಯೇ ಆಗಿತ್ತು. ಹಾಗೆಯೇ ಯೋಗವೂ ಕೂಡ ಜಗತ್ತನ್ನು ಬೆಸೆದ ವಿಷಯವಾಗಿದೆ ಎಂದರು. ವಿ.ನಾಗರಾಜ್ ಮಾತನಾಡಿ ಶಿಕ್ಷಣವೆಂಬುದು ಆಧ್ಯಾತ್ಮ ತಳಹದಿಯಲ್ಲಿರಬೇಕು. ಸಾಮಾಜಿಕ ದೃಷ್ಟಿ ಹಾಗೂ ರಾಷ್ಟ್ರೀಯತೆಯೊಂದಿಗೆ ನೀಡಲಾಗುವ ಶಿಕ್ಷಣದಿಂದ ಜಗತ್ತಿಗೆ ಒಳಿತಾಗುತ್ತದೆ. ಆಧ್ಯಾತ್ಮಿಕ ಜಾಗೃತ ಭಾರತ, ಸಾಮಾಜಿಕ ಭದ್ರ ಭಾರತ, ಜ್ಞಾನ ವಿಜ್ಞಾನಗಳ ಆಗರ ಭಾರತ, ಆರ್ಥಿಕವಾಗಿ ಬಲಿಷ್ಠ ಭಾರತ ದ ನಿರ್ಮಾಣ ಸ್ವಾಮಿ ವಿವೇಕಾನಂದರ ಕನಸಾಗಿತ್ತು. ಇದನ್ನು ನನಸಾಗಿಸಲು ಅಗತ್ಯ ಶಿಕ್ಷಣ ಭಾರತದಲ್ಲಿರಬೇಕು ಎಂಬುದು ಜಾಗತಿಕ ಸತ್ಯ ಎಂದರು. ಪ್ರಬೋಧಿನೀ ಟ್ರಸ್ಟ್. ನಿರ್ವಾಹಕ ವಿಶ್ವಸ್ತ ಎಚ್.ಬಿ.ರಾಜಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಗುರುಕುಲದ ನಾರಾಯಣ ಶೇವಿರೆ. ಡಾ. ಮಹಾಬಲೇಶ್ವರ ಭಟ್, ವಿಶ್ವಸ್ತರಾದ ವಿಜಯಕುಮಾರ್, ಸುಮಂತ ಶೆಟ್ಟಿ, ಭೀಮಣ್ಣ, ವಿಶ್ವಜಿತ್, ಅರವಿಂದ, ಆರೆಸ್ಸೆಸ್‌ನ ಕರ್ನಾಟಕ ದಕ್ಷಿಣ ಪ್ರಾಂತ ಬೌದ್ಧಿಕ ಪ್ರಮುಖ್ ಕೃಷ್ಣ ಪ್ರಾಸಾದ, ಹಾನ ವಿಭಾಗ ಪ್ರಚಾರಕ್ ಮಂಜುನಾಥ, ಮುಂತಾದರಿದ್ದರು.