ಹಾಸ್ಟೇಲ್‌ ಕೊರತೆಗೆ ಮುಕ್ತಿ ಎಂದು?

| Published : Jul 10 2024, 12:33 AM IST

ಸಾರಾಂಶ

ವಿಜಯನಗರ ಜಿಲ್ಲೆಯಲ್ಲಿ ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಸೌಲಭ್ಯಗಳಿಲ್ಲ. ಹೀಗಾಗಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣ ಅರ್ಧದಲ್ಲಿ ಮೊಟಕುಗೊಳ್ಳಲಿದೆ ಎಂಬ ಆತಂಕ ಮಕ್ಕಳ ಪಾಲಕರಲ್ಲಿ ಮನೆ ಮಾಡಿದೆ.

ಕೃಷ್ಣ ಎನ್‌. ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಜಯನಗರ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ವಸತಿ ನಿಲಯಗಳ ಕೊರತೆ ಕಾಡುತ್ತಿದ್ದು, ಇದರಿಂದ ಈ ಭಾಗದ ಹಿಂದುಳಿದ ವರ್ಗಗಳ ಸಮುದಾಯ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿರತಾಗುವ ಪರಿಸ್ಥತಿ ಎದುರಾಗಿದೆ.

ವಿಜಯನಗರ ಜಿಲ್ಲೆಯಲ್ಲಿ ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಸೌಲಭ್ಯಗಳಿಲ್ಲ. ಹೀಗಾಗಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣ ಅರ್ಧದಲ್ಲಿ ಮೊಟಕುಗೊಳ್ಳಲಿದೆ ಎಂಬ ಆತಂಕ ಮಕ್ಕಳ ಪಾಲಕರಲ್ಲಿ ಮನೆ ಮಾಡಿದೆ.

ವಿಜಯನಗರಕ್ಕೆ ಅನ್ಯಾಯ

ಈ ನಡುವೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಿಗೆ ೨೦೨೪-೨೫ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ೧೫೦ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಂಗಳನ್ನು ಸರ್ಕಾರ ಮಂಜೂರು ಮಾಡಿ ಹಂಚಿಕೆ ಮಾಡಿರುವುದರಲ್ಲಿ ವಿಜಯನಗರ ಜಿಲ್ಲೆಗೆ ಅನ್ಯಾಯವಾಗಿದೆ ಎಂಬ ದೂರು ಕೇಳಿ ಬಂದಿದೆ.

ವಿಜಯನಗರ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ೨೧ ಮೆಟ್ರಿಕ್ ನಂತರದ ವಸತಿ ನಿಲಯಗಳಿಗಾಗಿ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ವಿಜಯನಗರ ಜಿಲ್ಲೆಗೆ ಸರ್ಕಾರ ಎರಡು ವಸತಿ ನಿಲಯಗಳನ್ನು ಮಂಜೂರು ಮಾಡಿದೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಾಮಾಜಿಕ ಮತ್ತು ಶೈಕ್ಷಣಿಕ ನ್ಯಾಯ ಸಿಗಲೇಬೇಕಿದೆ. ಆದರೆ, ವಸತಿ ನಿಲಯಗಳ ಮಂಜೂರಾತಿಯ ವಿಚಾರದಲ್ಲಿ ಹಿಂದಿನಿಂದಲೂ ಅನ್ಯಾಯವಾಗುತ್ತಿದೆ ಎಂಬುದು ಜಿಲ್ಲೆಯ ಜನರ ಆರೋಪ.

ಬೇಡಿಕೆ

ಹೆಚ್ಚಿನ ಶಿಕ್ಷಣ ಸಂಸ್ಥೆ ಹೊಂದಿರುವ ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಅತಿ ಹೆಚ್ಚು ಬೇಡಿಕೆ ಇರುವ ಜಿಲ್ಲೆಗಳಲ್ಲಿ ತಲಾ ೧೦೦ ಸಂಖ್ಯಾಬಲದ ಒಂದು ಮೆಟ್ರಿಕ್ ನಂತರದ ಬಾಲಕ-ಬಾಲಕಿಯರ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡುವ ಅವಶ್ಯಕತೆಯನ್ನು ಪರಿಗಣಿಸಿ ಆಯಾ ಜಿಲ್ಲೆಗಳಿಗೆ ಹಾಸ್ಟೆಲ್‌ಗಳನ್ನು ಮಂಜೂರು ಮಾಡಬೇಕು ಎಂಬುದು ನಿಯಮ. ಇದನ್ನು ಪರಿಗಣಿಸಿದರೆ, ವಿಜಯನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ. ಹೊಸಪೇಟೆ ತಾಲ್ಲೂಕು ಒಂದರಲ್ಲಿ ಮಾತ್ರ ೭೦ಕ್ಕೂ ಹೆಚ್ಚು ವಿವಿಧ ಕಾಲೇಜ್‌ಗಳಿವೆ. ಪಕ್ಕದ ಜಿಲ್ಲೆಯ ವಿದ್ಯಾರ್ಥಿಗಳು ಹೆಚ್ಚಾಗಿ ಇಲ್ಲಿ ವಿವಿಧ ಕಾಲೇಜ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹೊಸಪೇಟೆ ನಗರದ ವಸತಿ ನಿಲಯಗಳಿಗೆ ಪ್ರತಿವರ್ಷವೂ ಸಾವಿರಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಾರೆ ಅದರಲ್ಲಿ ೪೦೦ ರಿಂದ ೫೦೦ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಸಿಕ್ಕಿದೆ.

ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕ ಎಚ್.ಆರ್. ಗವಿಯಪ್ಪನವರು ಇದನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲೆಗೆ ೨೦ ಮೆಟ್ರಿಕ್ ನಂತರದ ಹಾಸ್ಟೆಲ್‌ಗಳನ್ನು ಮಂಜೂರು ಮಾಡಿಸುವಲ್ಲಿ ಶೀಘ್ರ ಕ್ರಮ ವಹಿಸಬೇಕು ಎಂಬುದು ವಿಜಯನಗರ ಜಿಲ್ಲೆಯ ಜನರ ಒತ್ತಾಸೆ.

ಮಂಜೂರಾತಿಗೆ ಕ್ರಮ

ವಿಜಯನಗರ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ೧೨ ವಿದ್ಯಾರ್ಥಿ ನಿಲಯಗಳ ಮಂಜೂರಾತಿಗಾಗಿ ಶಾಸಕ ಎಚ್.ಆರ್. ಗವಿಯಪ್ಪ ನವರಿಗೆ ಮನವಿ ಸಲ್ಲಿಸಲಾಗಿದೆ. ಹಿಂದುಳಿದ ವರ್ಗಗಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರೊಂದಿಗೆ ಚೆರ್ಚಿಸಿ, ಕ್ರಮ ವಹಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದ್ದಾರೆ.

ರವಿಶಂಕರ್ ದೇವರಮನೆ ಅಧ್ಯಕ್ಷರು, ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಂಘ, ಹೊಸಪೇಟೆ.ಶಿಕ್ಷಣದಿಂದ ವಂಚಿತ

ವಿಜಯನಗರ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ವಸತಿ ನಿಲಯಗಳ ಕೊರತೆ ಕಾಡುತ್ತಿದ್ದು, ಈ ಭಾಗದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ಎದುರಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಅನುಗುಣವಾಗಿ ಹಾಸ್ಟೆಲ್ ಮಂಜೂರು ಮಾಡಲು ಸರ್ಕಾರ ಕ್ರಮ ವಹಿಸಬೇಕು.

ವೈ. ಯಮುನೇಶ್, ಅಧ್ಯಕ್ಷರು, ವಿಜಯನಗರ ಜಿಲ್ಲೆ ಹಿಂದುಳಿದ ವರ್ಗಗಳ ಒಕ್ಕೂಟ.