ಜಗತ್ತಿಗೆ ಆಯುರ್ವೇದ ಕೊಡುಗೆ ನೀಡಿದ್ದು ಭಾರತ

| Published : Feb 01 2024, 02:00 AM IST

ಜಗತ್ತಿಗೆ ಆಯುರ್ವೇದ ಕೊಡುಗೆ ನೀಡಿದ್ದು ಭಾರತ
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ತಿಗೆ ಆಯುರ್ವೇದ ಕೊಡುಗೆ ನೀಡಿ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿಸಿದ್ದ ಮೊದಲ ದೇಶ ಭಾರತ.

ಹೊಳಲ್ಕೆರೆ: ಜಗತ್ತಿಗೆ ಆಯುರ್ವೇದ ಕೊಡುಗೆ ನೀಡಿ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿಸಿದ್ದ ಮೊದಲ ದೇಶ ಭಾರತ ಎಂದು ದೆಹಲಿ ಭಾರತೀಯ ವೈದ್ಯಕೀಯ ಪದ್ಧತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಡಾ.ರಘುರಾಮ್‌ ಭಟ್ಟ ತಿಳಿಸಿದರು.

ತಾಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ರಾಘವೇಂದ್ರ ಆಯುರ್ವೇದ ಕಾಲೇಜಿನ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಭಾರತೀಯ ಪರಂಪರೆ ಶ್ರೇಷ್ಠವಾಗಿದೆ. ಪ್ರಪಂಚದ ಎಲ್ಲಾ ದೇಶಗಳಿಗೂ ವೈಜ್ಞಾನಿಕ ತಳಹದಿಯಲ್ಲಿ ರೂಪಿಸಿದ ಜ್ಞಾನ ನೀಡಿದ್ದು, ನಮ್ಮ ಭಾರತ, ಯೋಗ ಮತ್ತು ಆಯುರ್ವೇದದ ಕೊಡುಗೆ ನೀಡಿ ಸರ್ವೇ ಜನಾ ಸುಖಿನೋ ಭವಂತು ಎಂಬುದನ್ನು ಹಿರಿಯರು ಈ ಹಿಂದೆ ತಿಳಿಸಿದ್ದರು. ಅದನ್ನು ಪುಸ್ತಕಗಳ ಮೂಲಕ ಅರಿಯುವ ಪರಿಸ್ಥಿತಿ ಎದುರಾಗಿದೆ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ರಾಘವೇಂದ್ರ ಪಾಟೀಲ ಮಾತನಾಡಿ, ಯೋಗ ಮತ್ತು ಆಯುರ್ವೇದ ಮೂಲಕ ನಾಡಿಗೆ ಮಲ್ಲಾಡಿಹಳ್ಳಿ ಪರಿಚಯಿಸಿದವರು ರಾಘವೇಂದ್ರ ಸ್ವಾಮೀಜಿಯವರು ಸ್ವತಃ ಆಯುರ್ವೇದ ಪಂಡಿತರಾಗಿ, ಯೋಗಾಚಾರ್ಯರಾಗಿ ಸಂಸ್ಥೆಯನ್ನು 8 ದಶಕಗಳ ಕಾಲ ಹಳ್ಳಿಯಿಂದ ದೆಹಲಿಯವರೆಗೆ ಪ್ರಸಿದ್ಧಿಗೊಳಿಸಿದರು ತಾನು ಹಚ್ಚಿದ ಸೇವಾ ದೀಪವನ್ನು ನಾಡಿನಾದ್ಯಂತ ನೀವು ಹಚ್ಚಬೇಕು ಎಂದರು.

ಆರ್ಥಿಕ ತಜ್ಞ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಆಯುರ್ವೇದ ವೈದ್ಯರು ಆಯುರ್ವೇದ ಮೂಲಜ್ಞಾನವನ್ನು ಅರಿಯಬೇಕು ಮತ್ತು ಬರುವ ರೋಗಿಗಳಿಗೆ ಅದನ್ನು ನೀಡಬೇಕು ಆದರೆ ತಕ್ಷಣವೇ ಗುಣಮುಖವಾಗಿಸುವ ಅವಸರದಲ್ಲಿ ಅಲೋಪತಿ ನೀಡುತ್ತಾ ಬರುತ್ತಿರುವುದು ಕಳವಳಕಾರಿಯಾದ ಸಂಗತಿಯಾಗಿದೆ ಎಂದರು. ಆಯುರ್ವೇದದ ಜೌಷಧಿ ಪದ್ಧತಿಗಳು ಪೂರ್ಣ ಪ್ರಮಾಣದ ಆರೋಗ್ಯಕರ ಮತ್ತು ದೇಹಕ್ಕೆ ದುಷ್ಪರಿಣಾಮಗಳನ್ನುಂಟು ಮಾಡದ ಜೌಷಧಿ ಪದ್ಧತಿಯಾಗಿದ್ದು ಅದನ್ನು ಉಳಿಸಿಬೆಳಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.

ಪ್ರಾಂಶುಪಾಲ ಶ್ರೀಪತಿ ನಾಗೋಳ್ ಮಾತನಾಡಿ, ವರ್ಷಪೂರ್ತಿ ನಮ್ಮ ಕಾಲೇಜಿನಲ್ಲಿ ವಿವಿಧ ಚಟುವಟಿಕೆಗಳು, ಸಂವಾದಗಳು, ಕಾಲೇಜು ಮತ್ತು ವಿದ್ಯಾರ್ಥಿಗಳ ಸಮನ್ವಯತೆಯಿಂದ ಅತ್ಯುತ್ತಮ ಫಲಿತಾಂಶ ಬರುತ್ತಿದ್ದು, ನಾವೆಲ್ಲರೂ ಅದನ್ನು ಪಾಲಿಸಿಕೊಂಡು ಬೆಳೆಸಿಕೊಂಡು ಹೋದಾಗ ಮಾತ್ರ ಮಲ್ಲಾಡಿಹಳ್ಳಿಯ ಖ್ಯಾತಿ ನಾಡಿನಾದ್ಯಂತ ಹೆಚ್ಚುತ್ತದೆ ಎಂದರು.

ಅಖಿಲ ಭಾರತ ಶಿಕ್ಷಣ ಮಂಡಲದ ಸಂಘಟನಾ ಕಾರ್ಯದರ್ಶಿ ಶಂಕರಾನಂದ ಬಿ.ಆರ್.ಅನಾಥ ಸೇವಾಶ್ರಮದ ಕಾರ್ಯದರ್ಶಿ ಎಸ್.ಕೆ.ಬಸವರಾಜನ್, ವಿಶ್ವಸ್ತರಾದ ಕೆ.ಡಿ.ಬಡಿಗೇರ, ಎಲ್.ಎಸ್.ಶಿವರಾಮಯ್ಯ, ಶ್ರೀನಿವಾಸ್, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಪ್ರೊ.ಸಾಬಣ್ಣ ತಲವಾರ್, ಚಿತ್ರದುರ್ಗ ಜಿಲ್ಲಾ ಆಯುಷ್ ಅಧಿಕಾರಿ ಚಂದ್ರಕಾಂತ್ ನಾಗಸಮುದ್ರ ಆಶ್ರಮದ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.