ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಒಬ್ಬ ಸಮರ್ಥ ಪ್ರಧಾನಿ ಇರುವ ಕಾರಣ ಕೋವಿಡ್ ಸಮಯದಲ್ಲಿ ಸಾಕಷ್ಟು ಸಾವು ನೋವುಗಳು ತಪ್ಪಿಸಲಾಯಿತು. ಒಬ್ಬ ಸಮರ್ಥ ನಾಯಕ ಇರುವ ಕಾರಣ 2014ರ ನಂತರ ಭಾರತ ಸದೃಢವಾಗಿ ಬೆಳೆದಿದೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.ಲೋಕಸಭಾ ಚುನಾವಣೆ ಪ್ರಚಾರಾರ್ಥವಾಗಿ ನಗರದ ಉದ್ಯಮಭಾಗದ ವಿಶ್ವಕರ್ಮ ಸೇವಾ ಸಂಘದಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಆಡಳಿತದ 10 ವರ್ಷದಲ್ಲಿ ದೇಶವನ್ನು ಬಲಿಷ್ಠಪಡಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ದೇಶದಲ್ಲಿಯೇ ಮಾಸ್ಕ್, ವಾಕ್ಸಿನ್ ತಯಾರಿಸಲು ಉತ್ತೇಜನ ನೀಡಿದರು.ಜನರಿಗೆ ಮೂರು ಡೋಸ್ ಉಚಿತವಾಗಿ ಲಸಿಕೆ ನೀಡಿದ್ದರಿಂದ ಸಾಕಷ್ಟು ಸಾವು ನೋವು ತಪ್ಪಿಸಲಾಯಿತು ಎಂದು ಹೇಳಿದರು.
ನಮ್ಮಲ್ಲಿ ಒಬ್ಬ ಸಮರ್ಥ ನಾಯಕ ಇರುವ ಕಾರಣ ಇದೆಲ್ಲವೂ ಸಾಧ್ಯ ಆಗಿದೆ. ದೇಶಕ್ಕೆ ಶಾಂತಿ ನೆಮ್ಮದಿ, ದೇಶಕ್ಕೆ ಭದ್ರತೆ ಸಿಕ್ಕಿದೆ. ದೇಶಕ್ಕೆ ಮೋದಿಯವರು ಅಗತ್ಯವಾಗಿದ್ದಾರೆ. ಜಗತ್ತಿನಲ್ಲಿ ಇರುವ ಎಲ್ಲಾ ರಾಷ್ಟ್ರಗಳಲ್ಲೂ ನರೇಂದ್ರ ಮೋದಿಯವರ ಬಗ್ಗೆ ಗೌರವ ಇದೆ. ಮೋದಿಯವರು ಉತ್ತಮವಾದ ಆರ್ಥಿಕ ನೀತಿ, ವಿದೇಶಿ ನೀತಿ ರೂಪಿಸಿದ್ದರಿಂದ ದೇಶ ಪ್ರಗತಿ ಕಂಡಿದೆ ಎಂದು ಹೇಳಿದರು.ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಮೈಕ್ರೋ ಇಂಡಸ್ಟ್ರೀಸ್, ಸ್ಮಾಲ್ ಸ್ಕೇಲ್ ಇಂಡಸ್ಟ್ರಿ ಯನ್ನು ಒಟ್ಟುಗೂಡಿಸಿ ಸಂಘಟನೆ ಮಾಡುವ ಕೆಲಸ ವಿಶ್ವಕರ್ಮ ಸೇವಸ ಸಂಘ ಮಾಡಿದೆ. ಸಣ್ಣ ಸಣ್ಣ ಕೈಗಾರಿಗೆ ಹೋಗಿ ಅಲ್ಲಿರುವ ಮಾಲೀಕರು, ಕಾರ್ಮಿಕರು, ಸಿಬ್ಬಂದಿ ಹೀಗೆ ಸುಮಾರು 16 ಸಾವಿರ ಜನರ ಸೇರಿಸಿ ಸಂಘಟನೆ ಮಾಡಲಾಗಿದೆ. ರಾಜ್ಯದಲ್ಲಿಯೇ ಮೊದಲ ಸಲ ಸಣ್ಣ ಸಣ್ಣ ಕೈಗಾರಿಕೆಗಳನ್ನು ಒಟ್ಟುಗೂಡಿಸಿ ಅವರಿಗೆ ಸಹಾಯ ಮಾಡುವ ಮೂಲಕ ವಿಶ್ವಕರ್ಮ ಸೇವಾ ಸಂಘಟನೆ ಉತ್ತಮ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಅಭಯ ಪಾಟೀಲ, ಸಂಘದ ಅಧ್ಯಕ್ಷ ರಮೇಶ , ಪ್ರಮುಖರಾದ ಸಂದೀಪ ಮಂಡೂಳಕರ, ರಾಜು ಸುತಾರ, ನಾಮದೇವ ಸುತಾರ, ಗೀತಾ ಸುತಾರ, ನೇಹಾ ದೇಸೂರಕರ, ವಿಲಾಸ ಲೋಹಾರ ಹಾಗೂ ಇತರರು ಉಪಸ್ಥಿತರಿದ್ದರು.