ದೇಶ, ವಿದೇಶಗಳು ಅನುಕರಿಸುತ್ತಿರುವ ಹಾಗೂ ವಿಶ್ವವೇ ನಮ್ಮತ್ತ ತಿರುಗಿ ನೋಡುವಂತೆ ಮಾಡಿದ ನಮ್ಮ ಹಿರಿಯರು ನೀಡಿದ ಯೋಗ ಜ್ಞಾನ ಅಮೃತಕ್ಕೆ ಸಮಾನವಾಗಿದೆ. ಅದನ್ನು ಕೊಟ್ಟ ನಮ್ಮ ಋಷಿ ಮುನಿಗಳು ನಮ್ಮ ಹೆಮ್ಮೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ಕನ್ನಡಪ್ರಭ ವಾರ್ತೆ ಮುಧೋಳ
ದೇಶ, ವಿದೇಶಗಳು ಅನುಕರಿಸುತ್ತಿರುವ ಹಾಗೂ ವಿಶ್ವವೇ ನಮ್ಮತ್ತ ತಿರುಗಿ ನೋಡುವಂತೆ ಮಾಡಿದ ನಮ್ಮ ಹಿರಿಯರು ನೀಡಿದ ಯೋಗ ಜ್ಞಾನ ಅಮೃತಕ್ಕೆ ಸಮಾನವಾಗಿದೆ. ಅದನ್ನು ಕೊಟ್ಟ ನಮ್ಮ ಋಷಿ ಮುನಿಗಳು ನಮ್ಮ ಹೆಮ್ಮೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.ತಾಲೂಕಿನ ನಾಗರಾಳ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಗ್ರಾಪಂ, ಶಾಲಾ ಕಾಲೇಜು ಒಕ್ಕೂಟ, ಮಾಧವಾನಂದ ಶಾಲೆ ಸಂಯುಕ್ತಾಶ್ರಯದಲ್ಲಿ ಶನಿವಾರ ಜರುಗಿದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾರ್ಥ ಮತ್ತು ಹಣದ ಲಾಲಸೆಯಿಂದ ಹಾಲು, ಹಣ್ಣು, ತರಕಾರಿಗಳನ್ನು ವಿಷಯುಕ್ತ ಮಾಡುತ್ತಿರುವುದರಿಂದ ಪರಿಸ್ಥಿತಿ ಹತೋಟಿ ಮೀರಿ ಬದುಕು ಬರ್ಭರವಾಗುತ್ತಿದೆ, ಇದರಿಂದ ಶೇ.30ರಷ್ಟು ಜನರಿಗೆ ಕ್ಯಾನ್ಸರ್ ಆವರಿಸಿದೆ. ಯುವ ಜನತೆ ತಂಬಾಕು ಉತ್ಪನ್ನಗಳಿಂದ ದೂರವಿರಬೇಕು. ಯೋಗ ಮಾತ್ರ ಈಗ ಬೆಳಕಾಗಿ ಕಾಣುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತೆ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರಲ್ಲಿ ಪರಿಹಾರಕ್ಕಾಗಿ ಮನವಿ ಮಾಡಿ, ಸಾಧಕಿ ವಿಜಯಲಕ್ಷ್ಮೀ ಅವರನ್ನು ಕರೆಸಿರುವ ಆರ್.ಟಿ. ಪಾಟೀಲರ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.
ರೈತ ಮುಖಂಡ ಸುಭಾಷ ಶಿರಬೂರ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನನಗೂ ಸಾರಾಯಿ ಬಂದ್ ಮಾಡುವ ಯೋಚನೆ ಬಂದಿದೆ. ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ರಾಜ್ಯ ಮಟ್ಟದಲ್ಲಿ ಸಾರಾಯಿ ಬಂದ್ ಆಗುವುದೇ ಇದಕ್ಕೆ ಪರಿಹಾರ ಎಂದು ಹೇಳಿದರು.ವಿಶೇಷ ಅತಿಥಿಯಾಗಿ ಆಗಮಿಸಿದ್ದ ಕ್ಯಾನ್ಸರ್ ತಜ್ಞೆ ಪದ್ಮಶ್ರೀ ಪುರಸ್ಕೃತೆ ಡಾ.ವಿಜಯಲಕ್ಷ್ಮೀ ದೇಶಮಾನೆ ಮಾತನಾಡಿ, ಯೋಗರಾಜ ವಿದ್ಯೆ, ಯೋಗಿ ಪತಂಜಲಿ ಪರಿಚಯಿಸಿದರು. ಪ್ರಧಾನಿ ಮೋದಿ ಮನೆಮನೆಗೂ ತಲುಪಿಸುತ್ತಿದ್ದಾರೆ. ಗಳಿಸಿದ್ದೆಲ್ಲಾ ವೈದ್ಯರಿಗೆ ಹೋಗದಿರಲು ಯೋಗ ಪರಿಹಾರ. ಸಾತ್ವಿಕ ಆಹಾರ ಅನಿವಾರ್ಯ. ನಮ್ಮ ಹಾಗೂ ದೇಶದ ಸದೃಢತೆಗಾಗಿ ನಿತ್ಯ ಯೋಗ ಅಗತ್ಯ ಎಂದು ಹೇಳಿದರು.
ಕುಂಚೂರ ಸವಿತಾ ಪೀಠದ ಸವಿತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕರ್ನಾಟಕದಲ್ಲಿ 2010ರಲ್ಲಿ 16 ಸಾವಿರ ಇದ್ದ ಕ್ಯಾನ್ಸರ್ ರೋಗಿಗಳ ಸಂಖ್ಯೆ ಈಗ 9 ಲಕ್ಷ ದಾಟಿದೆ. ಕ್ಯಾನ್ಸರ್ ನಿರ್ಮೂಲನೆಗಾಗಿ ನಿತ್ಯ ಹಸುವಿನ ಹಾಲು ಕುಡಿಯಬೇಕೆಂದರು.ವಿಜಯಲಕ್ಷ್ಮೀಯವರ ಅಬಲಾಶ್ರಮಕ್ಕೆ ಆರ್.ಟಿ.ಪಾಟೀಲ ₹1 ಲಕ್ಷ ದೇಣಿಗೆ ನೀಡಿದರು. ಮಾಧವಾನಂದ ಶಿ.ಸಂ. ಅಧ್ಯಕ್ಷ ಆರ್.ಟಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು, ಗ್ರಾಪಂ ಅಧ್ಯಕ್ಷೆ ಪಾರ್ವತಿ ತೇಲಿ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಎಸ್ಪಿ ಪ್ರಸನ್ನಕುಮಾರ ದೇಸಾಯಿ, ಜಿಪಂ ಉಪ ಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಶೇಖರಯ್ಯಮಠ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಎಸಿ ಶ್ವೇತಾ ಬೀಡಿಕರ, ಆಹಾರ ಇಲಾಖೆ ಡಿಡಿ ಶ್ರೀಶೈಲ ಕಂಕಣವಾಡಿ, ಜಿಪಂ ಅಧಿಕಾರಿ ಉಕ್ಕಲಿ, ಡಿವೈಎಸ್ಪಿ ಸೈಯದ್ ಜಮೀರ್ ರೋಷನ್, ತಹಸೀಲ್ದಾರರಾದ ಮಹಾದೇವ ಸಣಮುರಿ, ಸದಾಶಿವ ಮಕ್ಕೋಜಿ, ತಾಪಂ ಇಒ ಉಮೇಶ ಸಿದ್ನಾಳ, ಸಮಾಜ ಕಲ್ಯಾಣ ಇಲಾಖೆಯ ಮೋಹನ್ ಕೋರಡ್ಡಿ, ಸಿಪಿಐ ಮಹಾದೇವ ಶಿರಹಟ್ಟಿ, ಬಿಇಒ ಎಸ್.ಎಂ. ಮುಲ್ಲಾ, ಪ್ರತ್ರಕರ್ತ ನಾರಾಯಣಗೌಡ ಉತ್ತಂಗಿ, ಅಶೋಕ ಕಿವಡಿ, ಡಾ.ಶಿವಾನಂದ ಕುಬಸದ, ರಮೇಶ ನಿಡೋಣಿ ಇತರರಿದ್ದರು.
ದೈಹಿಕ ಶಿಕ್ಷಕರಾದ ಎನ್.ಎಸ್.ನಾಗ್ವೇಕರ್ ಮತ್ತು ಯೋಗ ಶಿಕ್ಷಕರಾದ ರಾಘವೇಂದ್ರ ನೀಲನ್ನವರ ಯೋಗ ಮಾರ್ಗದರ್ಶನ ಮಾಡಿದರು. ಒಕ್ಕೂಟಗಳ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಹುನ್ನೂರ ನಿರೂಪಿಸಿದರು.