ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಗಣಿತಶಾಸ್ತ್ರಕ್ಕೆ ಭಾರತದ ಕೊಡುಗೆ ಅಪಾರವಾಗಿದೆ. ಭಾರತೀಯ ಸಂಖ್ಯಾ ಪದ್ಧತಿ ಮತ್ತು ಶೂನ್ಯ ಕೊಡುಗೆ ಪರಿಣಾಮ, ಗಣಿತ ಶಾಸ್ತ್ರ ಇಷ್ಟೆಲ್ಲಾ ಬೆಳವಣಿಗೆ ಹೊಂದಿದೆ. ರೋಮನ್ ಸಂಖ್ಯಾ ಪದ್ಧತಿ ಅನೇಕ ನೂನ್ಯತೆಯಿಂದ ಕೂಡಿದೆ. ಆದರೆ ಭಾರತೀಯ ಗಣಿತಶಾಸ್ತ್ರ ಅನಂತದವರೆಗೆ (ಇನ್ಫಿನಿಟಿ) ಎಣಿಕೆ ಹೊಂದಿದೆ. ಭಾರತದ ಆರ್ಯುವೇದ, ಯೋಗ, ವಾಸ್ತುಶಿಲ್ಪದ ಜ್ಞಾನ ಪರಂಪರೆಯು ವಿಶ್ವದ ಪ್ರಗತಿಯಲ್ಲಿ ಅನನ್ಯ ಕೊಡುಗೆ ನೀಡಿದೆ ಎಂದು ಇಸ್ರೋ ಅಧ್ಯಕ್ಷ ಡಾ.ಎಸ್. ಸೋಮನಾಥ ಹೇಳಿದರು.ನಗರದ ಪ್ರಬುದ್ಧ ಭಾರತ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ದೀನ ದಯಾಳ ಪೀಠದ ಸಹಯೋಗದಲ್ಲಿ ಕೆಎಲ್‌ಇ ಸೆಂಟನರಿ ಕನ್ವೆನ್ಷನ್ ಸೆಂಟರ್‌ದಲ್ಲಿ ಶುಕ್ರವಾರ ಜರುಗಿದ ಎರಡು ದಿನದ ಏಕಾತ್ಮ ಮಾನವದರ್ಶನ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತ ಪ್ರಾಚೀನ ಕಾಲದಿಂದಲೂ ವಿಜ್ಞಾನದ ತಳಹದಿ ಮೇಲೆ ಬೆಳವಣಿಗೆ ಕಂಡಿದೆ. ಲೋಹಶಾಸ್ತ್ರ ದಲ್ಲಿ ಭಾರತ ಅಗಾಧ ಸಾಧನೆ ಮೆರೆದಿದೆ. 2500 ವರ್ಷಗಳ ಹಿಂದೆಯೇ ಇಲ್ಲಿನ ವಾಸ್ತುಶಿಲ್ಪ, ನಗರೀಕರಣ ವ್ಯವಸ್ಥೆ, ಅಡಳಿತ ವಿಕೇಂದ್ರೀಕರಣ, ಆರ್ಥಿಕತೆ ಎಲ್ಲ ಕ್ಷೇತ್ರದಲ್ಲೂ ಉತ್ತಮ ಪ್ರಾಬಲ್ಯ ಹೊಂದಿತ್ತು. ಆದರೂ 600 ವರ್ಷದ ಗುಲಾಮಗಿರಿಯಲ್ಲಿ ಆಡಳಿತದಲ್ಲಿ ಭಾರತ ತನ್ನ ಮೂಲ ಜ್ಞಾನ ಪರಂಪರೆಯ ಅಡಿಪಾಯಕ್ಕೆ ಯಾವುದೆ ಬಗೆಯ ಧಕ್ಕೆ ಉಂಟಾಗದ ಕಾರಣ ಭಾರತ ಕಳೆದ 4-5 ದಶಕಗಳಲ್ಲಿ ಅನೇಕ ವೈಜ್ಞಾನಿಕ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತ ಪ್ರಫುಲ್ ಕೇತ್ಕರ್ ಮಾತನಾಡಿ, ಭೂಮಿ ಚಪ್ಪಟೆಯಾಗಿಲ್ಲ, ಸೌರಮಂಡಲ ಸೂರ್ಯ ಕೇಂದ್ರಿತವಾಗಿದೆ ಎಂದೆಲ್ಲಾ 16ನೇ ಶತಮಾನದಲ್ಲಿ ಪಾಶ್ಚಿಮಾತ್ಯರು ತಿಳಿಸುವ ಮೊದಲೇ, ಭಾರತೀಯ ಋಷಿಮುನಿಗಳು ಭೂಮಿ ಗೋಲಾಕರವಾಗಿದೆ ಎಂದು ತಿಳಿಸಿ, ಅದರ ಅಧ್ಯಯನ ಮಾಡುವ ವಿಷಯಕ್ಕೆ ಭೂಗೋಳ ಎಂದು ಕರೆಯಲಾಗುತ್ತಿತ್ತು. ಪ್ರಾಚೀನ ಕಾಲದಿಂದಲೂ ಅದನ್ನು ಗುರುಕುಲದಲ್ಲಿ ಪಾಠ ಹೇಳಿ ಕೊಡಲಾಗುತ್ತಿತ್ತು. ಭಾರತ ಮೊದಲಿನಿಂದಲೂ ವೈಜ್ಞಾನಿಕ ಚಿಂತನೆ ಹೊಂದಿದೆ ಎಂದು ಅಭಿಪ್ರಾಯಪಟ್ಟರು.ಪ್ರಗತಿಪರ ಎಂದು ತಮ್ಮನ್ನು ತಾವು ಹೇಳಿಕೊಳ್ಳುವ ಅಮೆರಿಕ, ರಷ್ಯಾ ಮತ್ತು ಯುರೋಪಿನ ಬಹಳಷ್ಟು ದೇಶಗಳು ಪ್ರತಿಪಾದಿಸುವ ಬಂಡವಾಳಶಾಹಿ ಮತ್ತು ಕಮ್ಯೂನಿಸಂ ಈ ಎರಡೂ ಸಂಗತಿಗಳು ಭಾರತದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗೆ ಹೊಂದುವುದಿಲ್ಲ. ಆದರೆ, ಭಾರತವನ್ನು ಭಾಷೆ, ಭೌಗೋಳಿಕ, ಸಾಂಸ್ಕೃತಿಕ ಭಿನ್ನತೆಯ ನೆಪ ಮಾಡಿ ಭಾರತವನ್ನು ಒಂದು ರಾಷ್ಟ್ರ ಎಂಬ ಕಲ್ಪನೆಯನ್ನು ಭಾರತೀಯರಲ್ಲಿ ಮೂಡಿಸಲು ಪಾಶ್ಚಾತ್ಯ ಶಕ್ತಿಗಳು ಅವಕಾಶ ನೀಡುತ್ತಿಲ್ಲ. ಆದರೂ ನೂರಾರು ಭಿನ್ನತೆ ಹೊರತಾಗಿಯೂ ಭಾರತ ಮತ್ತು ಭಾರತೀಯರು ಏಕಾತ್ಮವಾಗಿ ಒಗ್ಗೂಡಿರುವುದು ಕಂಡು ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಆರ್‌ಸಿಯು ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ ಮಾತನಾಡಿದರು. ಪ್ರಬುದ್ಧ ಭಾರತದ ಸಂಯೋಜಕಿ ಡಾ.ಅಲ್ಕಾ ಕಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಆರ್‌ಸಿಯು ಪಂಡಿತ ದೀನದಯಾಳ ಪೀಠ ಏಕತ್ಮಾ ಮಾನವದರ್ಶನ ವಿಚಾರ ಸಂಕಿರಣದ ಸಂಶೋಧನಾ ಲೇಖನಗಳ ಗ್ರಂಥ ಬಿಡುಗಡೆ ಮಾಡಲಾಯಿತು.ಡಾ.ಶೋಭಿತ ಮಾಥುರ, ಪ್ರೊ.ತುಲಸಿ ತಾವರಿ, ಡಾ.ಸಂದೀಪ ನಾಯರ್, ಮಾಜಿ ಶಾಸಕ ಪಿ. ರಾಜೀವ, ಮಾಜಿ ಎಂಎಲ್‌ಸಿ ಗಣೇಶಕಾರ್ನಿಕ ಅವರಿಂದ ವಿವಿಧ ಗೋಷ್ಠಿಗಳು ಜರುಗಿದವು. ಸಂಜೆ ಸಂಸ್ಕಾರ ಭಾರತಿ ತಂಡದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.ಪಾಶ್ಚಾತ್ಯ ದೇಶಗಳಲ್ಲಿ ರಾಜರ ಆಡಳಿತದಲ್ಲಿ ಚರ್ಚ್ ಮತ್ತು ಪಾದ್ರಿಗಳ ಹಸ್ತಕ್ಷೇಪ ಬಹಳವಿತ್ತು. ಹಾಗಾಗಿ ಅಲ್ಲಿ ಸೆಕ್ಯೂಲರ್ ಎಂಬ ಪರಿಕಲ್ಪನೆ ಮತ್ತು ಮಹಿಳೆಯರಿಗೆ ಸ್ವಾತಂತ್ರ ಇರದ ಕಾರಣ ಮಹಿಳಾವಾದ ಎಂಬ ಪರಿಕಲ್ಪನೆ ಉಗಮವಾಯಿತು. ಆದರೆ, ಈ ಎಲ್ಲ ವಿಷಯಗಳು ಭಾರತದಲ್ಲಿ ವಿಜ್ಞಾನವು ತತ್ವಶಾಸ್ತ್ರ ಮತ್ತು ಆಧ್ಯಾತ್ಮದ ಜೊತೆಗೆ ಸಮನ್ವಯವಾಗಿದೆ. ಭಾರತದಲ್ಲಿ ಅನ್ವೇಷನೆಯನ್ನು ಸಮಾಜದ ಪ್ರಗತಿಗೆ ಮೀಸಲಾಗಿಡಲಾಗಿದೆ. ಆದರೆ ವಿದೇಶಗಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪೆಂಟೆಂಟ್ ಮಾದರಿಯಲ್ಲಿ ಹಣಗಳಿಕೆ ಮತ್ತು ಲಾಭದ ಅಂಶವಾಗಿದೆ.
- ಪ್ರಫುಲ್ ಕೇತ್ಕರ್ ಪತ್ರಕರ್ತ