ನಾಲ್ಕನೇ ಸರ್ವಶಕ್ತ ಸೈನ್ಯ ಪಡೆ ಹೊಂದಿದೆ ಭಾರತ

| Published : Feb 18 2025, 12:32 AM IST

ಸಾರಾಂಶ

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸುವ ಕರಾಳ ದಿನವನ್ನು ಆಚರಿಸುವುದು ಬಿಟ್ಟು ಪ್ರೇಮಿಗಳ ದಿನವನ್ನಾಗಿ ಸಂಭ್ರಮಾಚರಣೆ ಮಾಡುತ್ತಿರುವುದು ಈ ದೇಶದ ದುರಂತ ಎಂದು ದೇಶಭಕ್ತ ಬಳಗದ ಅಧ್ಯಕ್ಷ ಡಾ. ಸಂತೋಷ್ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ಬೇಲೂರು

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸುವ ಕರಾಳ ದಿನವನ್ನು ಆಚರಿಸುವುದು ಬಿಟ್ಟು ಪ್ರೇಮಿಗಳ ದಿನವನ್ನಾಗಿ ಸಂಭ್ರಮಾಚರಣೆ ಮಾಡುತ್ತಿರುವುದು ಈ ದೇಶದ ದುರಂತ ಎಂದು ದೇಶಭಕ್ತ ಬಳಗದ ಅಧ್ಯಕ್ಷ ಡಾ. ಸಂತೋಷ್ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಬೇಲೂರು ದೇಶಭಕ್ತರ ಬಳಗ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಯುಕ್ತಾಶ್ರಯದಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ಶ್ರದ್ಧಾಂಜಲಿ ಸಮರ್ಪಿಸಿ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಹರೆಯದ ಹುಡುಗ, ಹುಡುಗಿಯರು ಈ ದಿನವನ್ನು ಪ್ರೇಮಿಗಳ ದಿನವೆಂದು ಆಚರಿಸುತ್ತಾರೆ. ಆದರೆ ದೇಶಪ್ರೇಮಿಗಳಾದ ನಾವು ದೇಶಭಕ್ತರ ಬಳಗದ ಮೂಲಕ ಈ ದಿನವನ್ನು ಕರಾಳ ದಿನವಾಗಿ ಆಚರಿಸುತ್ತಿದ್ದು, ಮೋಸ ಕೃತ್ಯದಿಂದ ಪೈಶಾಚಿಕವಾಗಿ ನಮ್ಮ ಸೈನಿಕರನ್ನು ಬರ್ಬರ ಹತ್ಯೆ ಮಾಡಿರುವುದನ್ನು ಖಂಡಿಸುತ್ತೇವೆ. ಭಾರತ ಮಾತೆ ಎಂದು ಬಂಜೆಯಲ್ಲ, ಇಂತಹ ಸಾವಿರಾರು ವೀರ ಪುತ್ರರು ಭಾರತ ಮಾತೆಯ ಹೊಟ್ಟೆಯಲ್ಲಿ ಹುಟ್ಟಿ ಬಂದಿದ್ದಾರೆ, ಹುಟ್ಟಿ ಬರುತ್ತಾರೆ. ರಾಷ್ಟ್ರದಲ್ಲಿಯೇ ನಮ್ಮ ಸೈನಿಕ ಶಕ್ತಿ ಅತ್ಯಂತ ದೊಡ್ಡದಾಗಿದ್ದು ನಾಲ್ಕನೆಯ ಸರ್ವಶಕ್ತ ಸೈನ್ಯ ಪಡೆಯನ್ನು ಹೊಂದಿದೆ. ಆರ್ಥಿಕವಾಗಿಯೂ ನಾವು ಐದನೇ ಸ್ಥಾನದಲ್ಲಿದ್ದು, 2027ಕ್ಕೆ ಆರ್ಥಿಕತೆಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆ ಇಡುತ್ತಿದ್ದೇವೆ. ಹಾಗಾಗಿ ನಾವು ಎಲ್ಲರೂ ನಮ್ಮ ಸೈನಿಕರನ್ನು ಹುರಿದುಂಬಿಸಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೈನ್ಯವನ್ನು ಸೇರುವಂತೆ ಪ್ರೇರೇಪಿಸಬೇಕು ಎಂದು ನುಡಿದರು.

ದೇಶಭಕ್ತರ ಬಳಗದ ಕಾರ್ಯದರ್ಶಿ ಮಹೇಶ್ ಮಾತನಾಡಿ. ಬಹುಸಂಖ್ಯೆಯ ನಮ್ಮ ವೀರ ಯೋಧರ ಪಡೆ ನಮ್ಮಲ್ಲಿದ್ದು, ನಾವು ಚಿಂತಿಸುವ ಅಗತ್ಯವಿಲ್ಲ. ಆದರೆ ನಮ್ಮ ದೇಶದ ಒಳಗೂ ಹೊರಗೂ ಶತ್ರುಗಳಿದ್ದಾರೆ. ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳು ಅತ್ಯಂತ ಅಪಾಯಕಾರಿ. ಅವರನ್ನು ನಿರ್ದಾಕ್ಷಿಣ್ಯವಾಗಿ ದಂಡಿಸಬೇಕು ಮತ್ತು ಗಮನಿಸಬೇಕು ಎಂದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವರಿಷ್ಠರಾದ ಉಪನ್ಯಾಸಕ ವೀರಭದ್ರಪ್ಪ ಮಾತನಾಡಿ, ಯುವ ಜನಾಂಗದಲ್ಲಿ ದೇಶಭಕ್ತಿ ಮೂಡಿಸಬೇಕು ಮತ್ತು ದೇಶಕ್ಕಾಗಿ ನಿಸ್ವಾರ್ಥ ಸೇವೆ ಮತ್ತು ಬಲಿದಾನಕ್ಕೆ ಸಿದ್ದರಾಗುವಂತೆ ಅವರನ್ನು ಅಣಿಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಿದ್ದೇಗೌಡ, ಮಲ್ಲಿಕಾರ್ಜುನ ಮೆಡಿಕಲ್ ಸುಬ್ರಮಣ್ಯ. ಪವನ್ ಗ್ಲಾಸ್ ಪ್ರಕಾಶ್. ಯುವ ಸಾಹಿತಿ ನಿರಂಜನ್. ಎಬಿವಿಪಿ ಕಾರ್ಯಕರ್ತೆ ಸುಶ್ಮಿತ ಕುಮಾರಿ ವಿದ್ಯಾ, ಶ್ರೀಮತಿ ರಾಜೇಶ್ವರಿ.. ಪ್ರಾಧ್ಯಾಪಕ ಧನಂಜಯ. ಯುವಕವಿ ನಿರಂಜನ್ , ಸುಲೇಮಾನ್, ಮೆಡಿಕಲ್ ಸ್ಟೋರ್ ಚೈತ್ರ, ಆಶಾ ಇದ್ದರು.