ಸಾರಾಂಶ
ಆಪರೇಷನ್ ಸಿಂದೂರದ ಮೂಲಕ ಭಾರತವು ಉಗ್ರರ ವಿರುದ್ಧದ ತನ್ನ ನಿಲುವನ್ನು ಪ್ರಪಂಚಕ್ಕೆ ತಿಳಿಸಿದೆ ಎಂದು ಭಾರತೀಯ ವಾಯುಸೇನೆ ನಿವೃತ್ತ ಅಧಿಕಾರಿ ಡಾ. ವಿನಯ್ ವಿಠಲ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ಆಪರೇಷನ್ ಸಿಂದೂರದ ಮೂಲಕ ಭಾರತವು ಉಗ್ರರ ವಿರುದ್ಧದ ತನ್ನ ನಿಲುವನ್ನು ಪ್ರಪಂಚಕ್ಕೆ ತಿಳಿಸಿದೆ ಎಂದು ಭಾರತೀಯ ವಾಯುಸೇನೆ ನಿವೃತ್ತ ಅಧಿಕಾರಿ ಡಾ. ವಿನಯ್ ವಿಠಲ್ ತಿಳಿಸಿದರು.ನಗರದ ಎಂಜಿನಿಯರ್‌ಗಳ ಸಂಸ್ಥೆಯು ಎಸ್.ಬಿ. ಭಟ್ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಪರೇಷನ್ ಸಿಂದೂರದ ಅವಲೋಕನ ಕುರಿತು ಮಾತನಾಡಿದರು. ದೇಶದ ಬಲಿಷ್ಠ ಆರ್ಥಿಕತೆ, ವಿದೇಶಗಳೊಂದಿಗಿನ ಉತ್ತಮ ಸಂಬಂಧವು ಯುದ್ಧದ ಸಮಯದಲ್ಲಿ ನೆರವಾಗಿದೆ. ಪಾಕಿಸ್ತಾನವು ಇದಕ್ಕೆ ವ್ಯತಿರಿಕ್ತವಾಗಿದ್ದು, ಅವರ ಆಡಳಿತವನ್ನು ಅಲ್ಲಿಯ ವಿರೋಧ ಪಕ್ಷವೇ ಟೀಕೆ ಮಾಡಿದೆ ಎಂದು ಹೇಳಿದರು.
ಉಗ್ರರು ಪಿಒಕೆ ಮತ್ತು ಪಾಕಿಸ್ತಾನದ ಸುರಕ್ಷಿತ ಪ್ರದೇಶಗಳನ್ನು ಅಡಗುತಾಣಗಳನ್ನಾಗಿಸಿದ್ದರು, ಭಾರತ ಅಲ್ಲಿಗೆ ದಾಳಿ ಮಾಡಬಹುದೆಂಬ ಕಲ್ಪನೆಯೂ ಅವರಲ್ಲಿ ಇರಲಿಲ್ಲ. ಭಾರತವು ಶಕ್ತಿಯುತ ರಾಷ್ಟ್ರವಾಗಿರುವುದರಿಂದ ಉಗ್ರರ ತಾಣಗಳಿಗೆ ದಾಳಿ ಮಾಡಲು ಸಾಧ್ಯವಾಗಿದೆ ಎಂದರು.ಯುದ್ಧದ ಸಮಯದಲ್ಲಿ ತೆಗೆದುಕೊಂಡ ರಾಜಕೀಯ ನಿಲುವು, ಯುವ ಸಮುದಾಯದ ಉತ್ಸಾಹ, ಜನರಲ್ಲಿರುವ ರಾಷ್ಟ್ರೀಯತೆಯ ಭಾವನೆಗಳು ದೇಶದ ಧನಾತ್ಮಕ ಅಂಶಗಳಾಗಿವೆ. ಸೇನೆಯಲ್ಲಿರುವ ಅತ್ಯಾಧುನಿಕ ಯುದ್ಧ ಸಾಮಾಗ್ರಿಗಳು ದೇಶ ಬಲಿಷ್ಠವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಅವರು ತಿಳಿಸಿದರು.
ಈ ಹಿಂದಿನ ಯುದ್ಧಗಳಿಗೆ ಹೋಲಿಸಿದರೆ ಈ ಬಾರಿ ಹೊಸ ಬೆಳವಣಿಗೆಗಳು ನಡೆದಿವೆ. ಪಹಲ್ಗಾಂನಲ್ಲಿ ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ಮಾಡಿದ ಬಳಿಕ ಕೇಂದ್ರ ಸರ್ಕಾರವು ವ್ಯಕ್ತಪಡಿಸಿದ ರಾಜತಾಂತ್ರಿಕ ನಿಲುವುಗಳು ಪರಿಣಾಮಕಾರಿಯಾಗಿದ್ದವು. ಕಾರ್ಗಿಲ್ ಯುದ್ಧದ ಸಮಯದಲ್ಲೂ ಸಿಂಧೂ ನದಿಯ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಆದರೆ, ಈ ಬಾರಿ ಆ ಒಪ್ಪಂದ ಮುರಿದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಲಾಯಿತು ಎಂದು ಹೇಳಿದರು. ಎಂಜಿನಿಯರ್‌ಗಳ ಸಂಸ್ಥೆಯ ಅಧ್ಯಕ್ಷ ಆರ್. ದೀಪು, ಪದಾಧಿಕಾರಿಗಳಾದ ಬಿ.ಎಸ್. ಪ್ರಭಾಕರ್, ಕೆ.ಎಸ್. ಸತೀಶ್, ಬಿ.ವಿ. ರವೀಂದ್ರನಾಥ್ ಇದ್ದರು.