ಸಾರಾಂಶ
ಮುಂಡರಗಿ: ಕಲಕೇರಿಯಂತಹ ಒಂದು ಗ್ರಾಮದಲ್ಲಿ ಜಾತಿ, ಮತ, ಪಂಥ ಎನ್ನದೆ ಹಿಂದೂ, ಮುಸ್ಲಿಂ ಎಲ್ಲರೂ ಒಟ್ಟಾಗಿ ಉರೂಸ್ ಆಚರಿಸುತ್ತಿರುವುದನ್ನು ನೋಡಿದರೆ ಭಾರತ ದೇಶ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವುದನ್ನು ತೋರಿಸಿಕೊಡುತ್ತದೆ ಎಂದು ಹುನಗುಂದ ಶಾಸಕ ಹಾಗೂ ಕರ್ನಾಟಕ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ವಿಜಯಾನಂದ ಕಾಶಪ್ಪನವರ ಹೇಳಿದರು.
ಅವರು ಸೋಮವಾರ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಹಜರತ್ ಸೈಯ್ಯದ್ ಬಾಷಾ ರಹಮತುಲ್ಲಾ ಅಲೈ ಉರುಸಿನ ಕಾರ್ಯಕ್ರಮದ ಅಂಗವಾಗಿ ಜರುಗಿದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.ಭಾರತ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಇಲ್ಲಿ ಎಲ್ಲ ಜಾತಿ ಜನಾಂಗದವರು, ಎಲ್ಲ ಭಾಷೆಗಳವರು ಇದ್ದಾರೆ. ಕಲಕೇರಿಯ ಈ ನೆಲದಲ್ಲಿ ಶರಣರು, ಸಂತರು, ಸೂಫಿ ಸಂತರು ನಡೆದಾಡಿದ್ದಾರೆ. ಈ ಪುಣ್ಯ ಭೂಮಿಯಲ್ಲಿ ಯಾವುದೇ ಭೇದ ಭಾವವಿಲ್ಲದೆ ಎಲ್ಲರೂ ಒಂದೇ ತಂದೆ-ತಾಯಿಯ ಮಕ್ಕಳಾಗಿದ್ದೇವೆ ಎನ್ನುವುದಕ್ಕೆ ಇಂದಿನ ಈ ಧರ್ಮಸಭೆಯ ವೇದಿಕೆಯೇ ಸಾಕ್ಷಿಯಾಗಿದೆ ಎಂದರು.
ಉರೂಸ್ ಎಂದರೆ ಅಲ್ಪಸಂಖ್ಯಾತರಿಗೆ, ಜಾತ್ರೆ ಎಂದರೆ ಇತರೆ ಕೆಲವು ಜಾತಿಯವರಿಗೆ ಎನ್ನುವ ಮಾತಿಗೆ ವಿರೋಧ ಎನ್ನುವಂತೆ ಎಲ್ಲ ಜಾತಿ ಜನಾಂಗದವರು ಕೂಡಿ ಭಾವೈಕ್ಯತೆಯಿಂದ ಹಜರತ್ ಸೈಯ್ಯದ್ ಬಾಷಾ ರಹಮತುಲ್ಲಾ ಅಲೈ ಉರೂಸ್ ಆಚರಿಸುತ್ತಿರುವುದು ವಿಶೇಷ. ಇಂತಹ ಕಾರ್ಯಗಳು ಭಾರತದಲ್ಲಿ ಮಾತ್ರ ಜರುಗುತ್ತವೆ. ಪ್ರಪಂಚದ ಇನ್ಯಾವುದೇ ದೇಶಗಳಲ್ಲಿ ಇಂತದ್ದನ್ನು ನೋಡಲು ಸಾಧ್ಯವಿಲ್ಲ. ವಿವಿಧತೆಯಲ್ಲಿ ಏಕತೆ, ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ಎನ್ನುವ ತತ್ವದ ಅಡಿಯಲ್ಲಿ ನಡೆದು ಬಂದಿರುವ ನಮ್ಮ ಭಾರತದ ನೆಲದಲ್ಲಿ ನೆಲೆಸಿರುವ ನಾವುಗಳೇ ಧನ್ಯರು ಎಂದರು.ಕಲಕೇರಿ ಅಂಜುಮನ್ ಎ ಇಸ್ಲಾಂ ಕಮಿಟಿ ಅಧ್ಯಕ್ಷ ಜಹೀರ್ ಮುಲ್ಲಾ ಮಾತನಾಡಿ, ಕಲಕೇರಿ ಗ್ರಾಮದ ಈ ಉರೂಸ್ ಕಾರ್ಯಕ್ರಮ ಸುತ್ತಮುತ್ತಲಿನ ಎಲ್ಲ ಗ್ರಾಮಗಳ ಎಲ್ಲ ಜಾತಿ, ಜನಾಂಗದ ಜನತೆ ಬಂದು ಆಚರಿಸುತ್ತಿದ್ದಾರೆ. ಇದೊಂದು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕಾರ್ಯಕ್ರಮವಾಗಿದೆ. ನಮ್ಮ ಹಿರಿಯರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ನಾವು ಇಂದಿನ ಹಿರಿಯರು ಸೇರಿಕೊಂಡು ಕಾರ್ಯಕ್ರಮ ಆಚರಿಸುತ್ತಾ ಬಂದಿದ್ದೇವೆ ಎಂದರು.
ಬೆಳಗಟ್ಟಿ ಹಜರತ್ ಮುಸ್ತಫಾಖಾದ್ರಿ ಸಾಹೇಬ್, ಕಲಕೇರಿ-ವಿರೂಪಾಪುರದ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ದರ್ಗಾ ಕಮಿಟಿ ಅಧ್ಯಕ್ಷ ಎಂ.ಯು. ಮಕಾಂದಾರ ಅಧ್ಯಕ್ಷತೆ ವಹಿಸಿದ್ದರು. ಕಲಕೇರಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಿದೇವಿ ನಾಯ್ಕರ್, ಧಾರವಾಡ ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ, ರಾಜ್ಯ ಕೆಪಿಸಿಸಿ ಸದಸ್ಯ ಎಸ್.ಡಿ. ಮಕಾಂದಾರ್, ಪುರಸಭೆ ಸದಸ್ಯ ನಾಗರಾಜ ಹೊಂಬಳಗಟ್ಟಿ, ಮುತ್ತನಗೌಡ ಪಾಟೀಲ, ಅಂದಪ್ಪ ಮೇಟಿ, ರಮೇಶ ಹುಳಕಣ್ಣವರ, ಮಲ್ಲಣ್ಣ ದೇಸಾಯಿ, ಬಸವರಾಜ ದೇಸಾಯಿ, ಆಸಿಂಫೀರ್ ಲಕ್ಷ್ಮೇಶ್ವರ, ಬಾಬಾಜಾನ್ ಅಳವಂಡಿ, ಜಾಫರಸಾಬ್ ಮಕಾಂದಾರ, ನನ್ನೇಸಾಬ್ ಖತೀಬ್, ಸನಾವುಲ್ಲಾ ಮಕಾಂದಾರ ಎಂ.ಎ.ಮಾಳೇಕೊಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ದೌಲತಸಾಬ್ ಶಿರೋಳ ಸ್ವಾಗತಿಸಿ, ಶಾಬುದ್ದೀನ್ ನದಾಫ ನಿರೂಪಿಸಿದರು.