ಪ್ರಸ್ತುತ ಭಾರತ ಜಾಗತಿಕ ಹೂಡಿಕೆಗೆ ವಿಶ್ವಾಸಾರ್ಹ ಮತ್ತು ಭವಿಷ್ಯದ ಸುಭದ್ರ ತಾಣವಾಗಿ ಹೊರಹೊಮ್ಮುತ್ತಿದ್ದು, ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಎರಡನೇ ದಿನದ ಶೃಂಗಸಭೆ ಇದಕ್ಕೆ ಸಾಕ್ಷಿಯಾಯಿತು.

ದಾವೋಸ್: ಪ್ರಸ್ತುತ ಭಾರತ ಜಾಗತಿಕ ಹೂಡಿಕೆಗೆ ವಿಶ್ವಾಸಾರ್ಹ ಮತ್ತು ಭವಿಷ್ಯದ ಸುಭದ್ರ ತಾಣವಾಗಿ ಹೊರಹೊಮ್ಮುತ್ತಿದ್ದು, ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಎರಡನೇ ದಿನದ ಶೃಂಗಸಭೆ ಇದಕ್ಕೆ ಸಾಕ್ಷಿಯಾಯಿತು.

ಶೃಂಗಸಭೆಯಲ್ಲಿ ಪಾಲ್ಗೊಂಡ ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರು, ವಿವಿಧ ರಾಷ್ಟ್ರಗಳ ಪ್ರತಿನಿಧಿಗಳ ಜತೆ ಭಾರತದೊಂದಿಗೆ ಹೂಡಿಕೆ ಒಪ್ಪಂದಕ್ಕೆ ಫಲಪ್ರದ ಮಾತುಕತೆ, ಚರ್ಚೆ ನಡೆಸಿದರು. ಭಾರತದ ತ್ವರಿತ, ಶುದ್ಧ ಇಂಧನ ವಿಸ್ತರಣೆಯಲ್ಲಿ ಪಾಲುದಾರರಾಗಲು ಜಾಗತಿಕ ಹೂಡಿಕೆದಾರರನ್ನು ಸೆಳೆದರು. ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನವೀಕರಿಸಬಹುದಾದ ಇಂಧನ ಮಾರುಕಟ್ಟೆಗಳಲ್ಲಿ ಭಾರತ ಪ್ರಮುಖ ಪಾತ್ರದಾರಿಯಾಗಿದೆ ಎಂದು ಜೋಶಿ ಪ್ರತಿಪಾದಿಸಿದರು.

‘ಸುಸ್ಥಿರತೆ ಮತ್ತು ಜಾಗತಿಕ ಪರಿವರ್ತನೆಗೆ ಮಾರ್ಗಗಳು’ ಕುರಿತ ದುಂಡುಮೇಜಿನ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿದ್ದ ಸಚಿವರು, ಸುಸ್ಥಿರತೆ ಬಾಹ್ಯ ಕಾಳಜಿ ಮಾತ್ರವಲ್ಲ, ಸ್ಪರ್ಧಾತ್ಮಕತೆ, ಸ್ಥಿತಿಸ್ಥಾಪಕತ್ವ ಮತ್ತು ದೀರ್ಘಕಾಲೀನ ಆರ್ಥಿಕ ಬೆಳವಣಿಗೆಯ ಕೇಂದ್ರ ಚಾಲಕವಾಗಿದೆ ಎಂದು ಒತ್ತಿ ಹೇಳಿದರು.2070ರ ವೇಳೆಗೆ ನಿವ್ವಳ-ಶೂನ್ಯ ಇಂಗಾಲ ಹೊರಸೂಸುವಿಕೆ ಸಾಧಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ ಸಚಿವ ಜೋಶಿ, ಭಾರತದ ವಿಧಾನವು ‘ವಸುಧೈವ ಕುಟುಂಬಕಂ-ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ತತ್ವದಿಂದ ಮಾರ್ಗದರ್ಶಿಸಲ್ಪಟ್ಟಿದೆ ಎಂದರು.ವಿವಿಧ ದೇಶಗಳ ನಾಯಕರೊಂದಿಗೆ ಚರ್ಚೆ:ಇದೇ ವೇಳೆ, ಸಚಿವ ಪ್ರಹ್ಲಾದ ಜೋಶಿಯವರು ವಿವಿಧ ರಾಷ್ಟ್ರಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಓಮನ್‌ ಪ್ರಧಾನಿ ಕಚೇರಿಯ ಆರ್ಥಿಕ ಸಲಹೆಗಾರ ಡಾ.ಸೈದ್ ಮೊಹಮ್ಮದ್ ಅಹ್ಮದ್ ಅಲ್ ಸಕ್ರಿ ಅವರೊಂದಿಗೆ ಸಭೆ ನಡೆಸಿ, ಭಾರತ-ಓಮನ್ ಸಿಇಪಿಎ ಮತ್ತು ಅಂತಾರಾಷ್ಟ್ರೀಯ ಸೌರ ಒಕ್ಕೂಟ ಮತ್ತು ಒನ್ ಸನ್ ಒನ್ ವರ್ಲ್ಡ್ ಒನ್ ಗ್ರಿಡ್ ಬಗ್ಗೆ ಚರ್ಚೆ ನಡೆಸಿದರು.ಬೆಲ್ಜಿಯಂ ಉಪ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳು, ಯುರೋಪಿಯನ್ ವ್ಯವಹಾರಗಳು ಮತ್ತು ಅಭಿವೃದ್ಧಿ ಸಹಕಾರ ಸಚಿವ ಮ್ಯಾಕ್ಸಿಮ್ ಪ್ರೆವೋಟ್ ಅವರೊಂದಿಗೆ ಸಹ ಮಹತ್ವದ ಸಭೆ ನಡೆಸಿ, ಭಾರತ-ಬೆಲ್ಜಿಯಂ ಪಾಲುದಾರಿಕೆ ಬಗ್ಗೆ ಪುನರುಚ್ಚರಿಸಿದರು.ಕುವೈತ್‌ನ ವಿದ್ಯುತ್, ನೀರು ಮತ್ತು ನವೀಕರಿಸಬಹುದಾದ ಇಂಧನ ಸಚಿವ ಸುಬೈಹ್ ಅಬ್ದುಲ್ ಅಜೀಜ್ ಅಲ್-ಮುಖೈಝೀಮ್ ಅವರೊಂದಿಗೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆ ಸಂಬಂದ ಚರ್ಚಿಸಿದರು.(ಬಾಕ್ಸ್‌):ಇಂಡಿಯಾ ಪೆವಿಲಿಯನ್ ಉದ್ಘಾಟನೆ:ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆ ಸಭೆ ವೇಳೆ ಪ್ರಮುಖವಾಗಿ ‘ಇಂಡಿಯಾ ಪೆವಿಲಿಯನ್’ ಸಹ ಉದ್ಘಾಟನೆಗೊಂಡಿತು. ಸಚಿವ ಪ್ರಹ್ಲಾದ ಜೋಶಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಮತ್ತು ರಾಜ್ಯದ ಬೃಹತ್‌ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ವಿವಿಧ ರಾಜ್ಯಗಳ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಮತ್ತು ಸಚಿವರು ಭಾಗವಹಿಸಿದ್ದು ವಿಶೇಷವಾಗಿತ್ತು.ಇಂಡಿಯಾ ಪೆವಿಲಿಯನ್ ಉದ್ಘಾಟನೆ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ''''ದಿ ಇಂಡಿಯಾ ಸ್ಟೋರಿ'''' ಹೆಸರಿನ ಹಸಿರು ಹೂಡಿಕೆ ಕೈಪಿಡಿ ಸಹ ಬಿಡುಗಡೆ ಮಾಡಿದರು.

ದೇಶದ ಬೆಳವಣಿಗೆಗೆ ಕರ್ನಾಟಕ ಆಧಾರಸ್ತಂಭ; ಎಂಬಿಪಾ:

‘ಭಾರತದ ಅಭಿವೃದ್ಧಿಯ ಕಥೆ ಒಟ್ಟಾಗಿ ಹೆಜ್ಜೆಯಿಡುವ ಕಥೆಯೂ ಹೌದು. ಈ ಬೆಳವಣಿಗೆಯಲ್ಲಿ ಬಲಿಷ್ಠ ಆಧಾರಸ್ತಂಭವಾಗಿರುವುದಕ್ಕೆ ಕರ್ನಾಟಕ ಹೆಮ್ಮೆಪಡುತ್ತದೆ. ಸರ್ಕಾರದ ನೀತಿಗಳು ಮಾತ್ರ ಕರ್ನಾಟಕವನ್ನು ವಿಶೇಷವಾಗಿಸಿಲ್ಲ. ಇಲ್ಲಿನ ಜನ, ಸಂಸ್ಥೆಗಳು ಮತ್ತು ನಾವೀನ್ಯತೆಯ ಸಂಸ್ಕೃತಿಯೂ ನಾಡನ್ನು ವಿಶೇಷವಾಗಿಸಿವೆ’ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.

ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮಾವೇಶದ ವೇಳೆ ಮಾತನಾಡಿದ ಅವರು, ‘ಕರ್ನಾಟಕ ದೇಶದ ಐಟಿ ರಾಜಧಾನಿ, ಆದರೆ ಅದು ಅಲ್ಲಿಗೆ ನಿಲ್ಲುವುದಿಲ್ಲ. ನಾವು ಏರೋಸ್ಪೇಸ್ ಮತ್ತು ರಕ್ಷಣಾ, ಯಂತ್ರೋಪಕರಣ ಮತ್ತು ನವೋದ್ಯಮ ರಾಜಧಾನಿಯೂ ಆಗಿದ್ದೇವೆ. ದೇಶದ ಬೆಳವಣಿಗೆಗೆ ಕರ್ನಾಟಕ ಆಧಾರಸ್ತಂಭವಾಗಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ’ ಎಂದರು. ಕೋಕಾ-ಕೋಲಾ ಜತೆ ಚರ್ಚೆ:ಭಾರತದ ಆಹಾರ ಸಂಸ್ಕರಣಾ ವಲಯಕ್ಕೆ ಕೋಕಾ-ಕೋಲಾ ಸಂಸ್ಥೆ 25,760 ಕೋಟಿ ರು. ಹೂಡಿಕೆ ಯೋಜನೆಯನ್ನು ಪ್ರಕಟಿಸಿದ್ದು, ಈ ಹಿನ್ನೆಲೆ ಕರ್ನಾಟಕದಲ್ಲಿ ಅವರ ಯೋಜನೆಗಳನ್ನು ವಿಸ್ತರಿಸುವ ಕುರಿತು ಕಂಪನಿಯ ಉಪಾಧ್ಯಕ್ಷರೊಂದಿಗೆ ಎಂ.ಬಿ. ಪಾಟೀಲ್‌ ನೇತೃತ್ವದ ನಿಯೋಗ ಚರ್ಚೆ ನಡೆಸಿತು. ಇದಕ್ಕಾಗಿ ವಿಜಯಪುರವನ್ನು ಪ್ರಮುಖ ಕೈಗಾರಿಕಾ ಕೇಂದ್ರವಾಗಿ ಪರಿಗಣಿಸುವಂತೆ ಪ್ರಸ್ತಾಪಿಸಿತು. ಯುಪಿಎಲ್‌, ಟಾಟಾ ಗ್ರೂಪ್‌ ಜತೆ ಚರ್ಚೆ: ಯುಪಿಎಲ್‌ ಸಂಸ್ಥೆಯ ಅಧ್ಯಕ್ಷ ಜೈ ಶ್ರಾಫ್ ಅವರೊಂದಿಗೆ ಕರ್ನಾಟಕದ ಕೃಷಿ ಬೆಳವಣಿಗೆಯ ಬಗ್ಗೆ ಸಚಿವರು ಮಹತ್ವದ ಮಾತುಕತೆ ನಡೆಸಿದರು. ಟಾಟಾ ಗ್ರೂಪ್ ಅಧ್ಯಕ್ಷರಾದ ನಟರಾಜನ್ ಹಾಗೂ ಟಾಟಾ ಎಲೆಕ್ಟ್ರಾನಿಕ್ಸ್ ಸಿಇಒ ಡಾ. ರಣಧೀರ್ ಠಾಕೂರ್ ಅವರೊಂದಿಗೆ ಸಚಿವ ಪಾಟೀಲ್ ತಂಡ ಸಭೆ ನಡೆಸಿತು. ಹೂಡಿಕೆಗೆ ಎನ್‌ಎಫ್‌ಡಬ್ಲ್ಯು ಆಸಕ್ತಿ:ಪ್ಲಾಸ್ಟಿಕ್‌ ರಹಿತ, ಸಸ್ಯಾಧಾರಿತ ಚರ್ಮ, ಬಟ್ಟೆ ಮೊದಲಾದವನ್ನು ಅಭಿವೃದ್ಧಿಪಡಿಸುತ್ತಿರುವ ನ್ಯಾಚುರಲ್ ಫೈಬರ್ ವೆಲ್ಡಿಂಗ್ (ಎನ್‌ಎಫ್‌ಡಬ್ಲ್ಯು) ಕಂಪನಿ ಜೊತೆ ಸಭೆ ನಡೆಸಲಾಯಿತು. ಇದು ಭಾರತದಲ್ಲಿ ತನ್ನ ಘಟಕಗಳನ್ನು ವಿಸ್ತರಿಸುವ ಕುರಿತು ತೀವ್ರ ಆಸಕ್ತಿ ವ್ಯಕ್ತಪಡಿಸಿತು.ಮೆನ್ಜೀಸ್ ಏವಿಯೇಷನ್ 83 ಕೋಟಿ ರು. ಹೂಡಿಕೆ:ಮೆನ್ಜೀಸ್ ಏವಿಯೇಷನ್ ಕಂಪನಿಯ ಕಾರ್ಯಾಧ್ಯಕ್ಷರಾದ ಹಸ್ಸನ್ ಎಲ್. ಹೌರಿ ಅವರೊಂದಿಗೆ ಸಭೆ ನಡೆಸಲಾಯಿತು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮೆನ್ಜೀಸ್‌ನ ಜಾಗತಿಕ ಕಾರ್ಗೋ ವ್ಯವಹಾರದಲ್ಲಿ ಶೇ.10ರಷ್ಟು ಪಾಲು ಹೊಂದಿದೆ. ಇದರ ಮುಂದುವರಿದ ಭಾಗವಾಗಿ ಕಂಪನಿಯು ಇನ್ನೂ ಸುಮಾರು 83 ಕೋಟಿ ರು. ಹೂಡಿಕೆ ಮಾಡುವ ಬಗ್ಗೆ ಚರ್ಚಿಸಲಾಯಿತು. ‘ಇಂದಿನ ಭಾರತವು ಗತಿಶೀಲ, ಮಹತ್ವಾಕಾಂಕ್ಷಿ ಮತ್ತು ಜಾಗತಿಕವಾಗಿ ತೊಡಗಿಸಿಕೊಂಡಿರುವ ರಾಷ್ಟ್ರವನ್ನು ಪ್ರತಿಬಿಂಬಿಸುತ್ತದೆ. ಇದು ಹಲವು ವರ್ಷಗಳ ನಿರಂತರ ಪ್ರಯತ್ನ, ಸ್ಥಿತಿಸ್ಥಾಪಕತ್ವ ಮತ್ತು ಸುಧಾರಣೆಗಳ ಫಲಿತಾಂಶವಾಗಿದೆ. ಪಿ.ವಿ. ನರಸಿಂಹ ರಾವ್ ಅವರಿಂದ ಪ್ರಾರಂಭಿಸಿ, ಮನಮೋಹನ್ ಸಿಂಗ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಈಗ ಪ್ರಧಾನಿ ನರೇಂದ್ರ ಮೋದಿಯವರವರೆಗೆ ಭಾರತದ ಪ್ರಗತಿಯ ಪಯಣ ಮುಂದುವರಿದಿದೆ. ಕೇಂದ್ರ ಮತ್ತು ರಾಜ್ಯಗಳು ಒಟ್ಟಿಗೆ ಕೆಲಸ ಮಾಡುವ ಒಕ್ಕೂಟ ವ್ಯವಸ್ಥೆಯಲ್ಲಿ ಭಾರತದ ಶಕ್ತಿ ಅಡಗಿದೆ’ ಎಂದರು.‘ಉತ್ತರ ಕರ್ನಾಟಕದಲ್ಲಿ ಮೆಕ್ಕೆಜೋಳ ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತಿದ್ದು, ವಾರ್ಷಿಕ ಸುಮಾರು 300 ಕೋಟಿ ರು. ವ್ಯವಹಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಯುಪಿಎಲ್‌ ತನ್ನ ಕೆಲಸವನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿದೆ. ಹೊಸ ನೀರಾವರಿ ತಂತ್ರಜ್ಞಾನ ತರಲು ಮತ್ತು ಎಥನಾಲ್ ಘಟಕ ಸ್ಥಾಪಿಸಲು ಆಸಕ್ತಿ ತೋರಿದೆ’ ಎಂದು ತಿಳಿಸಿದರು.