ಕನಕಗಿರಿ: ಈ ಹಿಂದೆ ಮೊಘಲರು, ಡಚ್ಚರು, ಪೋರ್ಚಗೀಸರು, ಬ್ರಿಟಿಷರು ದೇಶದ ಸಂಪನ್ಮೂಲವನ್ನು ಮೇಲಿಂದ ಮೇಲೆ ಲೂಟಿ ಮಾಡಿದರೂ ಭಾರತ ಜಾಗತೀಕರಣದಲ್ಲಿ ವಿಶ್ವಕ್ಕೆ ಮಾದರಿಯಾಗಿ ನಿಂತಿದೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿ ನಡೆದ ಹಿಂದೂ ಸಮಾಜೋತ್ಸವ ಹಾಗೂ ಶಿವಾಜಿ ಜಯಂತಿಯಲ್ಲಿ ಮಾತನಾಡಿದರು.ಒಗ್ಗಟ್ಟಿನ ಕೊರತೆಯಿಂದ ಈ ಹಿಂದೆ ನಮ್ಮ ಪೂರ್ವಜರು ದೌರ್ಜನ್ಯಕ್ಕೆ ಒಳಗಾಗಿ ಜೀವನ ನಡೆಸಿದ್ದಾರೆ. ಆದರೆ, ನಾವು ಸಂಘಟಿತರಾಗುವ ಮೂಲಕ ದೇಶ ಮುನ್ನಡೆಸಬೇಕಿದೆ. ಆರ್.ಎಸ್.ಎಸ್ ಸಂಘಟನೆಗೆ ನೂರು ವರ್ಷ ತುಂಬಿವೆ.ಆದರೆ, ಸಂಘಕ್ಕೆ ನೂರು ಎಂದಾಕ್ಷಣ ಕೆಲವರು ಕೋಮುವಾದ, ಜಾತಿವಾದದ ಮಸಿ ಬಳಿಯಲು ಮುಂದಾಗಿರುವುದು ನಾಚಿಗೇಡಿನ ಸಂಗತಿ ಎಂದರು.
ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್ ಮುಸ್ಲಿಂ ಓಲೈಕೆ ರಾಜಕಾರಣ ಮಾಡಿದ್ದರಿಂದ ದೇಶ ತುಂಡಾಯಿತು. ಇದೀಗ ವಂದೆ ಮಾತರಂ ಗೀತೆಗೂ ಕತ್ತರಿ ಹಾಕುವ ಮೂಲಕ ಕಾಂಗ್ರೆಸ್ ತನ್ನ ಹಳೇ ಚಾಳಿ ಮುಂದುವರೆಸಿದೆ. ಮಹ್ಮದ್ ಅಲಿ ಜಿನ್ನಾ ಪಾಕಿಸ್ತಾನ್ ಕೇಳಿದಾಗ ನೆಹರು, ಪಟೇಲ್ ಹಾಗೂ ಗಾಂಧೀಜಿ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡು ಸಹಿ ಮಾಡಿದ್ದರು. ಆದರೆ, ದೂರದೃಷ್ಟಿಯ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಇದಕ್ಕೆ ಒಪ್ಪಲಿಲ್ಲ. ದೇಶ ವಿಭಜನೆಯಾದರೆ, ಪಾಕಿಸ್ತಾನದ ಎಲ್ಲ ಹಿಂದೂಗಳು ಭಾರತಕ್ಕೆ ಬರಲಿ, ಭಾರತದಲ್ಲಿನ ಮುಸ್ಲಿಂರೆಲ್ಲ ಪಾಕಿಸ್ತಾನಕ್ಕೆ ಹೋಗಲಿ ಎಂದು ತಿಳಿಸಿದ್ದರು. ಆದರೆ, ಅಂದು ಅಂಬೇಡ್ಕರ್ ಹೇಳಿದಂತೆ ಕೇಳಿದ್ದರೆ ಇಂದು ಭಾರತದಲ್ಲಿ ಭಯೋತ್ಪಾದನೆ ನಡೆಯುತ್ತಿರಲಿಲ್ಲ. ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೇಲೆ ಕಲ್ಲು ಎಸೆಯುತ್ತಿರಲಿಲ್ಲ. ಕಾಶ್ಮೀರ ದಾಳಿಗಳು ನಡೆಯುತ್ತಿರಲಿಲ್ಲ ಎಂದು ಕಿಡಿಕಾರಿದರು.ಶಿವಾಜಿ 400 ವರ್ಷಗಳ ಹಿಂದೆ ಹುಟ್ಟಿ ಹಿಂದೂಧರ್ಮ ಉಳಿಯದಿದ್ದರೆ ಇಂದು ನಾವುಗಳೆಲ್ಲ ಮುಸ್ಲಿಂರಾಗುತ್ತಿದ್ದೆವು. ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದೆವು ಎಂದು ತಿಳಿಸಿದ ಅವರು, ಸುಪ್ರೀಂ ಕೋರ್ಟ್ ಆದೇಶದನ್ವಯ ಬೆಳಗ್ಗೆ 6ರ ನಂತರ ಅಜಾನ್ ಕೂಗುವುದು ಕಾನೂನು ಉಲ್ಲಂಘನೆಯಾಗಿದ್ದು ಅದನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಗೋ ರಕ್ಷಕ ಪುನೀತ್ ಕೆರೇಹಳ್ಳಿ ಮಾತನಾಡಿ, ಅಧಿಕಾರಿಗಳು ಲಂಚ ಪಡೆದು ಬಾಂಗ್ಲಾ ನಿವಾಸಿಗಳಿಗೆ ಪಾಸ್ ಪೋರ್ಟ್ ಮಾಡಿ ಕೊಟ್ಟಿದ್ದಾರೆ. ಇದನ್ನು ದೇಶದ ಪ್ರಜೆಯಾಗಿ ಹುಡುಕಿ ಕೊಟ್ಟಿದ್ದೇನೆ. ಗೋ ಹತ್ಯೆ ನಿಷೇಧ ಸಂವಿಧಾನದಲ್ಲಿದ್ದು, ಆದರೆ, ಅವರ ವಿರುದ್ಧ ಕ್ರಮವಾಗುತ್ತಿಲ್ಲ. ಬದಲಾಗಿ ಹೆಲ್ಮೆಟ್ ಧರಿಸದ, ಸೀಟ್ ಬೆಲ್ಟ್ ಹಾಕದವರನ್ನ ಹಿಡಿಯುವ ಪೊಲೀಸರು ದೇಶ ದ್ರೋಹಿಗಳನ್ನೂ ಹಿಡಿಯುವಂತಾದರೆ ದೇಶ ಸುಭದ್ರವಾಗಿರಲು ಸಾಧ್ಯ ಎಂದರು.
ಹೆಬ್ಬಾಳದ ಶ್ರೀನಾಗಭೂಷಣ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶರಣೆಗೌಡ ಬೂದಗುಂಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರಟಗಿಯ ಮರುಳ ಸಿದ್ದೇಶ್ವರಶ್ರೀಗಳು, ಹಿರಿಯರಾದ ಗುರುಸಿದ್ದಪ್ಪ ಹಾದಿಮನಿ, ಹನುಮಂತಪ್ಪ ರಾಟಿ ಇತರರಿದ್ದರು.ಮೆರವಣಿಗೆಗೆ ಬಿಗಿ ಬಂದೋಬಸ್ತ್: ಪಟ್ಟಣದ ಶಿವಾಜಿ ವೃತ್ತದಿಂದ ಆರಂಭವಾದ ಮೆರವಣಿಗೆ ಪೊಲೀಸ್ ಬಿಗಿ ಭದ್ರತೆಯಲ್ಲಿ ನಡೆಯಿತು.
ಕಳಸ ಕುಂಭದೊಂದಿಗೆ ಮಹಿಳೆಯರು ಹಾಗೂ ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಕಲಾ ತಂಡಗಳು ಮೆರವಣಿಗೆಗೆ ಶೋಭೆ ತಂದವು. ರಾಜ್ಯ ಹೆದ್ದಾರಿಯಿಂದ ಶ್ರೀಕನಕಾಚಲಪತಿ ದೇವಸ್ಥಾನದವರೆಗೂ ನಡೆದ ಮೆರವಣಿಗೆಯುದ್ದಕ್ಕೂ ಹಾಗೂ ಪ್ರಮುಖ ವೃತ್ತಗಳು, ದೇಗುಲ, ಮಸೀದಿಗಳ ಬಳಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಖುದ್ದು ಹೆಚ್ಚುವರಿ ಎಸ್ ಪಿ ಸಹಿತ ಇಬ್ಬರು ಡಿವೈಎಸ್ ಪಿ ಮೆರವಣಿಗೆಯ ಮೇಲೆ ಹದ್ದಿನ ಕಣ್ಣಿಟ್ಟು, ಪೊಲೀಸ್ ಬಂದೋಬಸ್ತ್ ಒದಗಿಸಿದ್ದು, ಕನಕಗಿರಿಯಲ್ಲಿ ಹೊಸ ಇತಿಹಾಸ ದಾಖಲೆಯಾದಂತಾಯಿತು.ಪುನೀತ್ ಕೆರೆಹಳ್ಳಿಗೆ ತಡೆ, ಆಕ್ರೋಶ: ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ನಿಮ್ಮ ಹೆಸರಿಲ್ಲ. ಏಕಾಏಕಿ ವೇದಿಕೆಗೆ ಬಿಡಿ ಎಂದರೆ ಆಗುವುದಿಲ್ಲ. ಇದು ಕಾನೂನಿನ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ಪುನೀತ್ ಕೆರೆಹಳ್ಳಿಯವರನ್ನು ವೇದಿಕೆಗೆ ಬಿಡದೆ ಅಡ್ಡಗಟ್ಟಿದರು. ಇದರಿಂದ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನು ಗಮನಿಸಿದ ಪ್ರಮೋದ್ ಮುತಾಲಿಕರು ವೇದಿಕೆ ಇಳಿದು ಪೊಲೀಸರೊಂದಿಗೆ ಮಾತನಾಡಿ, ಸಂವಿಧಾನದಲ್ಲಿ ಎಲ್ಲರೂ ವೇದಿಕೆ ಮೇಲೆ ಕುಳಿತುಕೊಳ್ಳಬಹುದು.ಗೋ ರಕ್ಷಕ ಪುನೀತನಿಗೆ ಅವಕಾಶ ಕೊಡಿ ಎಂದಾಗ ಡಿವೈಎಸ್ಪಿ ಜೆ.ಎಸ್ ನ್ಯಾಮಗೌಡ ಹಾಗೂ ಪಿಐ ವಿ.ನಾರಾಯಣ್ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಪುನೀತ್ ಕೆರೆಹಳ್ಳಿ ಅವರಿಗೆ ವೇದಿಕೆಗೆ ಅವಕಾಶ ಮಾಡಿಕೊಡಲಾಯಿತು.