ಸರ್ಕಾರಿ ಕಲಾ ಮತ್ತು ವಾಣಿಜ್ಯ ಸ್ನಾತಕೋತ್ತರ ಸ್ವಾಯತ್ತ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಮಹೇಶ್ ಎಂ ಅವರು ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಮತ್ತು ಸಮಾನತೆ ಸಿಗಬೇಕು, ಯುವಜನರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಪ್ರಜಾ ಪ್ರಭುತ್ವದಲ್ಲಿ ಬಲಿಷ್ಠವಾದ ದೇಶ ಎಂದರೆ ನಮ್ಮ ಭಾರತ. ಮಹಿಳೆಯರಿಗೆ ಸಮಾಜದಲ್ಲಿ ಸಮಾನವಾಗಿ ನ್ಯಾಯ ಕೊಡಿಸಿದರೆ ಪ್ರಜಾಪ್ರಭುತ್ವಕ್ಕೆ ಒಂದು ಮೆರುಗು ಇರುತ್ತದೆ ಎಂದು ಸಂಸದರಾದ ಶ್ರೇಯಸ್ ಎಂ ಪಟೇಲ್ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಏನಾದರೂ ಸಾಧನೆ ಮಾಡಬಹುದು ಎಂದು ಇಡೀ ಪ್ರಪಂಚಕ್ಕೆ ಸಾರಿದವರು ಡಾ.ಬಿ.ಆರ್ ಅಂಬೇಡ್ಕರ್ ಎಂದು ತಿಳಿಸಿದರು.
ಸಮಾಜದಲ್ಲಿ ಪ್ರಜಾಪ್ರಭುತ್ವವಾಗಿ ಜೀವಿಸುತ್ತಿದ್ದೇವೆ ಅಂದರೆ ಅದಕ್ಕೆ ಮುಖ್ಯ ಕಾರಣ ಡಾ. ಬಿ.ಆರ್ ಅಂಬೇಡ್ಕರ್ ಅವರು ಎಂದು ಹೇಳಿದರು.ಪ್ರಜಾಪ್ರಭುತ್ವ ಎಂದರೆ ಮತದಾನ ಮತ್ತು ಚುನಾವಣೆ ಮಾತ್ರವಲ್ಲ, ಪ್ರಜಾಪ್ರಭುತ್ವ ಒಂದು ಸಮಾಜದ ಜವಾಬ್ದಾರಿ, ಸಮಾಜದಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಒಂದು ಬೆಲೆ ಇರುತ್ತದೆ ಎಂದು ತಿಳಿಸಿದರು.
ಭಾರತ ಸಂವಿಧಾನದ ಮತ್ತು ಪ್ರಜಾಪ್ರಭುತ್ವದ ಮೇಲೆ ಯುವಜನರಿಗೆ ಇರುವ ಬೇಡಿಕೆಗಳನ್ನು ನೆರವೇರಿಸಲು ಯುವ ಸಂಸತ್ ಸಭೆಯನ್ನು ಆಯೋಜಿಸಿದ್ದಾರೆ, ಯುವಜನರು ನಮ್ಮ ದೇಶದ ಪ್ರಜೆಗಳು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ಅವರು ಮಾತನಾಡಿ, ನಮ್ಮ ದೇಶ ಹೇಗೆ ಇರಬೇಕು, ಯಾವ ರೀತಿಯಲ್ಲಿ ಆಡಳಿತ ನಡೆಸಬೇಕು, ಪ್ರಜೆಗಳ ಹಕ್ಕುಗಳು ಏನು ಎಂಬ ಎಲ್ಲಾ ಮಾಹಿತಿಯನ್ನು ಸಂವಿಧಾನದಲ್ಲಿ ತಿಳಿದುಕೊಳ್ಳಬಹುದು ಎಂದು ತಿಳಿಸಿದರು.
ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು, ನಮ್ಮ ದೇಶದ ರಾಜಕೀಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದು, ಪ್ರಜೆಗಳೇ ನಮ್ಮ ದೇಶದ ನಾಯಕರನ್ನು ಆಯ್ಕೆ ಮಾಡುತ್ತಾರೆ ಎಂದ ಅವರು, ಪ್ರಜಾಪ್ರಭುತ್ವಕ್ಕೆ ಗೌರವ ನೀಡುವುದರ ಜೊತೆಗೆ ಪಾಲನೆ ಮಾಡಬೇಕು ಎಂದು ತಿಳಿಸಿದರು.ನಮ್ಮ ದೇಶದ ಪ್ರಜೆ ಆಗಬೇಕು ಎಂದರೆ ಮೊದಲಿಗೆ ಮತದಾರರ ಗುರುತಿನ ಚೀಟಿ ಪಡೆದಿರಬೇಕು, ಗುರುತಿನ ಚೀಟಿಯನ್ನು ಪಡೆದು ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯಕ್ಕಾಗಿ ಹೋರಾಟ ಮಾಡಬೇಕು, ಸಮಾನ ಸ್ಥಾನಮಾನ ಮತ್ತು ಅವಕಾಶಗಳು ನಮ್ಮ ಸಂವಿಧಾನದ ಮೂಲ ಮಂತ್ರಗಳು ಎಂದರು.
ನಾವು ಮಾಡಿರುವಂತಹ ಆಡಳಿತಾತ್ಮಕ ವ್ಯವಸ್ಥೆಗೆ ನಾವು ಗೌರವ ನೀಡಿ ಪಾಲನೆ ಮಾಡಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಿಳಿದುಕೊಳ್ಳಬೇಕು ಎಂದರೆ ಸಂವಿಧಾನದ ಪೀಠಿಕೆಯನ್ನು ಓದಬೇಕು ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಂ ಶುಕ್ಲಾ ಅವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮುಖವಾದ ಕೇಂದ್ರ ಬಿಂದು ಎಂದರೆ ನಾಗರಿಕರು ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಮಾಡುವವರನ್ನು ಆಯ್ಕೆ ಮಾಡುವುದೇ ಸಮಾಜದ ಪ್ರಜೆಗಳು, ಅಧಿಕಾರಿಗಳ ಮೊದಲ ಆದ್ಯತೆ ಜನರ ಸಮಸ್ಯೆಗಳನ್ನು ಬಗೆಹರಿಸುವುದಾಗಿದೆ, ಶಿಕ್ಷಣ ಪ್ರತಿಯೊಬ್ಬರ ಹಕ್ಕು ಮತ್ತು ಜವಾಬ್ದಾರಿ ಆಗಿದೆ, ಬೇರೆ ದೇಶಗಳಿಗಿಂತ ನಮ್ಮ ದೇಶ ತುಂಬಾ ಅಭಿವೃದ್ಧಿ ಹೊಂದಿದೆ ಎಂದು ಹೇಳಿದರು.ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ತಿಳಿಯಬೇಕು ಎಂದರೆ ಚೆನ್ನಾಗಿ ಓದಬೇಕು ಮತ್ತು ಒಳ್ಳೆಯ ಶಿಕ್ಷಣವನ್ನು ಪಡೆಯಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಸರಳವಾಗಿ ತಿಳಿಯಬೇಕು ಎಂದರೆ ಸಂವಿಧಾನವನ್ನು ಓದಬೇಕು ಎಂದರು.
ಸರ್ಕಾರಿ ಕಲಾ ಮತ್ತು ವಾಣಿಜ್ಯ ಸ್ನಾತಕೋತ್ತರ ಸ್ವಾಯತ್ತ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಮಹೇಶ್ ಎಂ ಅವರು ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಮತ್ತು ಸಮಾನತೆ ಸಿಗಬೇಕು, ಯುವಜನರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.ಪ್ರಜಾಪ್ರಭುತ್ವ ಎಂದರೆ ಕೇವಲ ಮತದಾನ ಮಾಡುವುದಲ್ಲ, ದೇಶದ ಬಗ್ಗೆ ಕಾಳಜಿ ವಹಿಸುವುದು ಮತ್ತು ತಪ್ಪುಗಳನ್ನು ಪ್ರಶ್ನಿಸುವುದಾಗಿದೆ, ದೇಶದ ಸಂವಿಧಾನದ ಪೀಠಿಕೆಯಲ್ಲಿಯೇ ನಮ್ಮ ದೇಶದ ಪ್ರಜಾಪ್ರಭುತ್ವದ ಹಿರಿಮೆ, ಶಕ್ತಿ ಹಾಗೂ ಅದರ ಶ್ರೇಷ್ಠ ಗುಣಗಳು ಅಡಗಿವೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ದೂದ್ ಫೀರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.