ಸಾರಾಂಶ
ಹುಬ್ಬಳ್ಳಿ:
ಭಾರತ ಇಂದು ಏಷ್ಯಾದ ಪ್ರಮುಖ ಉತ್ಪಾದನಾ ಹಬ್ ಆಗಿ ಸ್ಥಾನ ಗಿಟ್ಟಿಸಿಕೊಂಡಿದೆ. ಜಗತ್ತಿನ ಅನೇಕ ರಾಷ್ಟ್ರಗಳು ನಮ್ಮ ಡಿಜಿಟಲ್ ವ್ಯವಸ್ಥೆ, ಆಡಳಿತ ಬದ್ಧತೆ ಮತ್ತು ಯುವ ಕಾರ್ಯಪಡೆಯ ಕೌಶಲ್ಯ ಕಂಡು ಉದ್ದಿಮೆ ತೆರೆಯಲು ಭಾರತಕ್ಕೆ ಲಗ್ಗೆ ಇಡುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಧಾರವಾಡದ ಬೇಲೂರ ಕೈಗಾರಿಕಾ ಪ್ರದೇಶದಲ್ಲಿ ಶುಕ್ರವಾರ ನಿಡೇಕ್‌ನ ದಿ ಆರ್ಚರ್ಡ್ ಹಬ್ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ವಿಶ್ವಪ್ರಸಿದ್ಧ ಉತ್ಪಾದನಾ ಕೇಂದ್ರವಾಗುವತ್ತ ಸಾಗಿದೆ. ಪ್ರಧಾನಿ ಅವರು ಘೋಷಿಸಿದ ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ಕೇವಲ ಘೋಷಣೆಯಲ್ಲ ಭಾರತದ ಪ್ರಗತಿಯ ನೋಟಕ್ಕೆ ಪ್ರತೀಕವಾಗಿದೆ ಎಂದರು.
ಮೋದಿ ಸರ್ಕಾರ ಕೈಗೊಂಡ ಸುಧಾರಣೆ, ಜಿಎಸ್‌ಟಿ ಸರಳೀಕೃತ ವ್ಯವಸ್ಥೆ, ಡಿಜಿಟಲೀಕರಣದ ಪರಿಣಾಮ ಇಂದು ವಿಶ್ವದ ಅತಿದೊಡ್ಡ ಕಂಪನಿಗಳು ತಮ್ಮ ಉತ್ಪಾದನಾ ನೆಲೆಯಾಗಿ ಭಾರತವನ್ನು ಅರಸಿಕೊಂಡು ಬರುತ್ತಿವೆ. ಆ್ಯಪಲ್, ಸ್ಯಾಮ್‌ಸಂಗ್, ಎಲ್‌ಜಿ, ಟೊಯೋಟಾ ಹೀಗೆ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಉತ್ಪಾದನೆ ಮಾಡುತ್ತಿವೆ. ಪ್ರಸ್ತುತದಲ್ಲಿ ಭಾರತ ಕೇವಲ ಬಳಕೆ ಮಾರುಕಟ್ಟೆ ಮಾತ್ರವಲ್ಲ, ಉತ್ಪಾದನಾ ನೆಲೆ ಮತ್ತು ರಫ್ತು ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಹೇಳಿದರು.ಅವಳಿ ಎಂಜಿನ್:
ಜಪಾನಿನ ತಂತ್ರಜ್ಞಾನ ಮತ್ತು ಭಾರತೀಯ ಉತ್ಪಾದನಾ ಶಕ್ತಿ ಜತೆಯಾಗಿ "ಆರ್ಚರ್ಡ್ ಹಬ್ " ಆಗಿ ರೂಪುಗೊಂಡಿದೆ. ಹುಬ್ಬಳ್ಳಿ-ಧಾರವಾಡ ಕೇವಲ ಅವಳಿ ನಗರಗಳಲ್ಲ, ಕರ್ನಾಟಕದ ಬೆಳವಣಿಗೆಯ ಅವಳಿ ಎಂಜಿನ್‌ಗಳು. ಜಪಾನಿನ ನಿಡೇಕ್ ಕಂಪನಿ ಇಲ್ಲಿ ಹೆಚ್ಚಿನ ಹೂಡಿಕೆಗೆ ಆದ್ಯತೆ ನೀಡಿರುವುದು ನಿಜಕ್ಕೂ ಶ್ಲಾಘನೀಯ. 50 ಎಕರೆ ಪ್ರದೇಶದಲ್ಲಿ ₹600 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವಿಶ್ವ ದರ್ಜೆಯ ಈ ವಿಶಾಲ ಕ್ಯಾಂಪಸ್ ಉತ್ತರ ಕರ್ನಾಟಕದ ಅತಿ ದೊಡ್ಡ ಕ್ಯಾಂಪಸ್‌ಗಳಲ್ಲಿ ಒಂದಾಗಿದೆ ಎಂದರು.6 ಕಾರ್ಖಾನೆಗಳು ಮತ್ತು ತರಬೇತಿ ಕೇಂದ್ರದೊಂದಿಗೆ ಈಗಾಗಲೇ 400ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಿದೆ ಮತ್ತು ಶೀಘ್ರದಲ್ಲೇ 1000ಕ್ಕೂ ಹೆಚ್ಚು ಜನರಿಗೆ ನೇರವಾಗಿ, ಅನೇಕರಿಗೆ ಪರೋಕ್ಷವಾಗಿ ಜೀವನೋಪಾಯ ಕಲ್ಪಿಸಲಿದೆ. ನಿಡೇಕ್‌ನಂತಹ ಜಾಗತಿಕ ನಾಯಕತ್ವದ ಕಂಪನಿ ಪ್ರಮುಖ ಉತ್ಪಾದನಾ ಕೇಂದ್ರಕ್ಕಾಗಿ ಹುಬ್ಬಳ್ಳಿಯನ್ನು ಆಯ್ಕೆ ಮಾಡಿದ್ದು, ಹುಬ್ಬಳ್ಳಿ, ಧಾರವಾಡ, ಗದಗ ಮತ್ತು ನೆರೆಯ ಜಿಲ್ಲೆಗಳ ಯುವಕರು ಉದ್ಯೋಗಾವಕಾಶಕ್ಕೆ ಬೆಂಗಳೂರು, ಪುಣೆಯನ್ನೇ ಅವಲಂಬಿಸುವುದು ತಪ್ಪುತ್ತಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಸಚಿವ ಎಂ.ಬಿ. ಪಾಟೀಲ್, ನಿಡೇಕ್ ಅಧ್ಯಕ್ಷ ಹಿರೋಷಿ ಕೋಬೆ, ಇಂಧನ ವ್ಯವಹಾರ ಘಟಕದ ಅಧ್ಯಕ್ಷ ಮೈಕೆಲ್ ಬ್ರಿಗ್ಸ್, ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಆಯುಕ್ತೆ ಗುಂಜನ್ ಕೃಷ್ಣ, ನಿಡೇಕ್ MOEN ಇಂಡಿಯಾ ಎಂಡಿ ಗಿರೀಶ್ ಡಿ. ಕುಲಕರ್ಣಿ, ಕಾರ್ಯತಂತ್ರ ಮತ್ತು ವ್ಯವಹಾರದ ನಿರ್ದೇಶಕ ಸ್ವಪ್ನಿಲ್ ದೇಥೆ ಸೇರಿದಂತೆ ಹಲವರಿದ್ದರು.ಸೂರ್ಯಘರ್ ಅಳವಡಿಕೆಯಲ್ಲಿ ರಾಜ್ಯ ಹಿಂದೆ:
ರಾಜ್ಯ ಸರ್ಕಾರ ಇನ್ನೂ ಹಸಿರು ಹೈಡ್ರೋಜನ್ ನೀತಿಯನ್ನು ಘೋಷಿಸಿಲ್ಲ. ಪರಿಣಾಮ ರಾಜ್ಯದಲ್ಲಿ 21 ಜಿಲ್ಲೆಗಳು ಪ್ರಧಾನಮಂತ್ರಿ ಸೂರ್ಯಘರ್ ಘಟಕಗಳ ಅಳವಡಿಕೆಯಿಂದ ಹಿಂದುಳಿದಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.ಸೂರ್ಯಘರ್ ಯೋಜನೆಯ ಶೇ. 85ರಷ್ಟು ಸ್ಥಾಪನೆಗಳು ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿವೆ. ಆದರೆ, ಇಲ್ಲಿ 21 ಜಿಲ್ಲೆಗಳು ತೀರಾ ಹಿಂದುಳಿದಿವೆ. ರಾಜ್ಯದಲ್ಲಿ ಸೂರ್ಯಘರ್ ಅಳವಡಿಕೆ ಮತ್ತು ಸ್ಥಾಪನಾ ಪರಿವರ್ತನೆ ಅನುಪಾತ ಕಡಿಮೆಯಿದೆ. ರಾಷ್ಟ್ರೀಯ ಸರಾಸರಿ ಶೇ. 20ಕ್ಕೆ ಹೋಲಿಸಿದರೆ ಸರಿಸುಮಾರು ಶೇ. 4ರಷ್ಟಿದೆ. ಚೆಸ್ಕಾಂ, ಹೆಸ್ಕಾಂನಂತಹ ಪ್ರಮುಖ ಏಸ್ಕಾಂಗಳು ಶೇ. 3ಕ್ಕಿಂತ ಕಡಿಮೆ ದಕ್ಷತೆ ಹೊಂದಿವೆ. ರಾಜ್ಯ ಮತ್ತು ರಾಷ್ಟ್ರೀಯ ಸರಾಸರಿಗಳಿಗಿಂತ ಬಹಳ ಕಡಿಮೆ ಅನುಪಾತದಲ್ಲಿದೆ. ಇನ್ನು ಸರ್ಕಾರಿ ಕಟ್ಟಡಗಳ ಮೇಲಿನ ಸೌರಶಕ್ತಿಯಲ್ಲಿ 435 MWನಲ್ಲಿ ಕೇವಲ 15 MW ಮಾತ್ರ ಸಾಧಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
;Resize=(128,128))
;Resize=(128,128))
;Resize=(128,128))