ಸಾರಾಂಶ
೭೫ನೇ ಗಣರಾಜ್ಯೋತ್ಸವ
ಕನ್ನಡಪ್ರಭ ವಾರ್ತೆ ಆಲೂರುಭಾರತ ಜಾಗತಿಕ ಮಟ್ಟದಲ್ಲಿ ಪ್ರಬಲವಾಗಿ ಮುಂದುವರೆದ ರಾಷ್ಟ್ರವಾಗಿ ಹೊಮ್ಮುತ್ತಿದೆ ಎಂದು ಶಾಸಕ ಸಿಮೆಂಟ್ ಮಂಜು ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ೭೫ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಯುವಕರು ಕೃಷಿ, ಕೈಗಾರಿಕೆ ಹಾಗೂ ಸ್ವಂತ ಉದ್ದಿಮೆಗಳನ್ನು ಮಾಡಿಕೊಂಡು ಸ್ವಾವಲಂಬನೆ ಜೀವನವನ್ನು ನಡೆಸಬೇಕು. ತಾಲೂಕಿನಲ್ಲಿ ಕೈಗಾರಿಕೆಗಳು ತೆರೆಯದ ಕಾರಣ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ತಾಲೂಕಿನಲ್ಲಿ ದೊಡ್ಡ ಉದ್ದಿಮೆದಾರರು ಕೈಗಾರಿಕೆಗಳನ್ನು ನಿರ್ಮಾಣ ಮಾಡಲು ಮುಂದಾದರೆ ನಿರುದ್ಯೋಗ ಯುವಜನರಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ ಎಂದರು.ತಹಸೀಲ್ದಾರ್ ನಂದಕುಮಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ್ದು, ಜಾತ್ಯತೀತವಾದ ಸಂವಿಧಾನ ಮತ್ತು ಪ್ರಾಕೃತಿಕ ಸಂಪತ್ತನ್ನು ಹೊಂದಿದೆ. ಕೃಷಿ, ಕೈಗಾರಿಕೆ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಇಂದಿನ ಯುವಕರು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ವಿಜ್ಞಾನ, ಸಂಶೋಧನೆ, ಬಾಹ್ಯಕಾಶ, ವೈದ್ಯಕೀಯ, ರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಇತರೆ ರಾಷ್ಟ್ರಗಳಿಗಿಂತ ಶಕ್ತಿಶಾಲಿಯಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಕೃಷಿ ಕ್ಷೇತ್ರ ಸಾಧನೆಗಾಗಿ ಡಿ.ಎಸ್.ಜಯಣ್ಣ, ಕೃಷಿ ಕ್ಷೇತ್ರ ಗೋಪಾಲಕೃಷ್ಣ, ಸಾಹಿತ್ಯ ಕ್ಷೇತ್ರ ಎಂ.ಚಂದ್ರಕಲಾ, ಕ್ರೀಡೆ ಸಿ.ಜೆ.ಭವ್ಯ, ಮಾಧ್ಯಮ ಎಚ್.ಎಂ.ಧರಣೇಂದ್ರ ಮತ್ತು ಜಾನಪದ ಕಲೆ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜ. ೨೯ ರಂದು ಮುಂಬೈನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಎಂ. ಶಿವಣ್ಣ, ವೇದಾವತಿ, ಸೋಮೇಶ್, ಆನಂದ್‌ರಾಜ್, ಕೇಶವಯ್ಯ, ಶೋಭ ರವರನ್ನು ಸನ್ಮಾನಿಸಲಾಯಿತು.ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಇಲಾಖೆ ಅಧಿಕಾರಿಗಳು, ಜನಪ್ರತಿನಿದಿಗಳು, ಗಣ್ಯರು ಉಪಸ್ಥಿತರಿದ್ದರು.
ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳು, ರಾಷ್ಟ್ರೀಕೃತ ಬ್ಯಾಂಕುಗಳು, ಆಟೋ ನಿಲ್ದಾಣ, ಪೊಲೀಸ್ ಠಾಣೆ, ಕ.ಸಾ.ಪ ಭವನ ಮತ್ತು ಎಲ್ಲ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.ಆಲೂರಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ೭೫ ನೇ ಗಣ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಶಾಸಕ ಸಿಮೆಂಟ್ ಮಂಜು, ತಹಸೀಲ್ದಾರ್ ನಂದಕುಮಾರ್, ಜನಪ್ರತಿನಿದಿಗಳು, ಮುಖಂಡರು ಭಾಗವಹಿಸಿದ್ದರು.