ಹಕ್ಕು, ಕರ್ತವ್ಯ ಅರಿತು ದೇಶದ ಪ್ರಗತಿಗೆ ಶ್ರಮಿಸಿ: ತಹಸೀಲ್ದಾರ್‌ ವಿ. ಕಾರ್ತೀಕ್‌

| Published : Jan 27 2024, 01:20 AM IST

ಹಕ್ಕು, ಕರ್ತವ್ಯ ಅರಿತು ದೇಶದ ಪ್ರಗತಿಗೆ ಶ್ರಮಿಸಿ: ತಹಸೀಲ್ದಾರ್‌ ವಿ. ಕಾರ್ತೀಕ್‌
Share this Article
  • FB
  • TW
  • Linkdin
  • Email

ಸಾರಾಂಶ

ನಾವೆಲ್ಲರೂ ಭಾರತದ ಸಂವಿಧಾನದ ಆಶಯಗಳಿಗೆ ಧಕ್ಕೆ ತರದಂತೆ ನಡೆದುಕೊಳ್ಳಬೇಕು. ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಪಾಲಿಸುವ ಜತೆಗೆ ಒಗ್ಗಟ್ಟಾಗಿರಬೇಕು.

ಹೂವಿನಹಡಗಲಿ: ಭಾರತದ ದೇಶದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಲಿಷ್ಠವಾಗಿರಲು ಸಂವಿಧಾನವೇ ಕಾರಣವಾಗಿದೆ ಎಂದು ತಹಸೀಲ್ದಾರ್‌ ವಿ. ಕಾರ್ತೀಕ್‌ ತಿಳಿಸಿದರು.

ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತವು ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿ, ಚಿಂತನೆಯ ಫಲವಾಗಿ ನಾವಿಂದು ಜಗತ್ತಿಗೆ ಮಾದರಿಯಾದ ಸಂವಿಧಾನವನ್ನು ಹೊಂದಿದ್ದೇವೆ. ಪರಕೀಯರ ಆಳ್ವಿಕೆಗೆ ಒಳಪಟ್ಟಿದ್ದ ಭಾರತ ಕೇವಲ 75 ವರ್ಷಗಳಲ್ಲಿ ಜಗತ್ತಿನ ಶ್ರೇಷ್ಠ ರಾಷ್ಟ್ರವಾಗಲು ಸಂವಿಧಾನವೇ ಮೂಲ ಕಾರಣವಾಗಿದೆ. ಸಂವಿಧಾನ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಸಮಾನ ರೀತಿಯಲ್ಲಿ ತಿಳಿದು ಎಲ್ಲರೂ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೃಷ್ಣನಾಯ್ಕ, ನಾವೆಲ್ಲರೂ ಭಾರತದ ಸಂವಿಧಾನದ ಆಶಯಗಳಿಗೆ ಧಕ್ಕೆ ತರದಂತೆ ನಡೆದುಕೊಳ್ಳಬೇಕು. ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಪಾಲಿಸುವ ಜತೆಗೆ ಒಗ್ಗಟ್ಟಾಗಿರಬೇಕು. ದೇಶ ಮತ್ತು ದೇಶದ ಪ್ರಜೆಗಳ ಪ್ರಗತಿಗಾಗಿ ಯುವಶಕ್ತಿಯು ದೇಶಾಭಿಮಾನವನ್ನು ಹೊಂದುವ ಮೂಲಕ ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಪಣ ತೊಡಬೇಕಿದೆ ಎಂದರು.

ನಿವೃತ್ತ ಎಸಿಪಿ ಪಂಪಾಪತಿ ಮಾತನಾಡಿ, ದೇಶದಲ್ಲಿ ಮಹಿಳಾ ಮೀಸಲಾತಿ ಮತ್ತು ಮತದಾನದ ಹಕ್ಕನ್ನು ಸಂವಿಧಾನ ಕಲ್ಪಿಸಿದೆ. ಭಾರತ ಪ್ರಜೆಗಳೆಲ್ಲರಿಗೂ ಸಮಾನವಾದ ಅವಕಾಶಗಳನ್ನು ಮೀಸಲಾತಿಗಳಿಗನುಗುಣವಾಗಿ ಕಲ್ಪಿಸಿಕೊಡಲಾಗಿದೆ. ಯುವ ಶಕ್ತಿಯು ಇರುವ ಅವಕಾಶಗಳನ್ನು ಬಳಿಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳುವ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸಬೇಕಿದೆ ಎಂದರು.

ಎನ್‌ಸಿಸಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಿಬಿಆರ್ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಅಮರೇಗೌಡ ಎನ್. ಪಾಟೀಲ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿದಕ್ಕಾಗಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಜಿಪಂ ಯೋಜನಾಧಿಕಾರಿ ಅಶೋಕ ತೋಟದ, ತಾಪಂ ಇಒ ಜಯರಾಮ ಎಂ. ಚವ್ಹಾಣ್, ಸಿಪಿಐ ಸುಧೀರ್ ಕುಮಾರ್ ಬೆಂಕಿ, ಪುರಸಭೆ ಮುಖ್ಯಾಧಿಕಾರಿ ಪಚ್ಚಿ ಮಲ್ಲೇಶ್ ಸೇರಿದಂತೆ ಇತರರಿದ್ದರು.