ಬಸವಣ್ಣರ ವಚನ ಪಠಿಸಿ ಕಾರ್ಯಕ್ರಮ ಆರಂಭ: ಸಚಿವ ಎಂಬಿಪಾ

| Published : Jan 27 2024, 01:20 AM IST

ಸಾರಾಂಶ

ಬಸವಣ್ಣರ ವಚನ ಪಠಿಸಿ ಕಾರ್ಯಕ್ರಮ ಆರಂಭಿಸುವ ಬಗ್ಗೆ ಶೀಘ್ರದಲ್ಲಿಯೇ ಸಿಎಂ ಸಿದ್ದರಾಮಯ್ಯ ಜತೆಗೆ ಚರ್ಚೆ ಮಾಡುವುದಾಗಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಸವಣ್ಣನವರ ಆಶಯಕ್ಕೆ ಅನುಗುಣವಾಗಿ ನಮ್ಮ ಸರ್ಕಾರವಿದ್ದು, ಬಸವಣ್ಣನವರ ವಚನಗಳನ್ನು ಪಠಿಸುವ ಮೂಲಕವೇ ಸರ್ಕಾರದ ಕಾರ್ಯಕ್ರಮಗಳನ್ನು ಆರಂಭಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನುಡಿದಂತೆ ನಡೆಯುವ ಈ ಸರ್ಕಾರದ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಆ ಮೂಲಕ ಬಸವಣ್ಣನವರು ಕಂಡ ಸಮಸಮಾಜ ನಿರ್ಮಾಣದ ಕನಸು ಸಾಕಾರಗೊಳಿಸಲಾಗುತ್ತಿದೆ ಎಂದರು.

ಬಸವಣ್ಣನವರು ನಾಡು ಕಂಡ ನಿಜವಾದ ಧರ್ಮ ಮತ್ತು ಸಮಾಜ ಸುಧಾರಕ, 12ನೇ ಶತಮಾನದ ಶ್ರೇಷ್ಠ ಸಂತ. ಹೀಗಾಗಿ ಮಹಾತ್ಮ ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಾಗಿದೆ. ಇನ್ಮುಂದೆ ಸರ್ಕಾರದ ಪ್ರತಿ ಕಾರ್ಯಕ್ರಮಗಳಲ್ಲಿ ಬಸವಣ್ಣನವರ ವಚನ ಪಠಿಸುವ ಮೂಲಕ ಕಾರ್ಯಕ್ರಮ ಆರಂಭಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ವಿಜಯಪುರ ಜಿಲ್ಲೆಯ ಹೆಮ್ಮೆ. ಅಲ್ಲದೇ, ಸಿದ್ದರಾಮಯ್ಯ ಸರ್ಕಾರ ಬಸವಣ್ಣನವರ ಆಶಯಕ್ಕೆ ಅನುಗುಣವಾಗಿ ನಡೆಯುತ್ತಿರುವುದು ಕೂಡ ಹೆಮ್ಮೆಯ ವಿಚಾರವೇ. ಬಸವಣ್ಣನವರ ಆಶಯವೇ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಹೀಗಾಗಿ ಸಂವಿಧಾನ ಮತ್ತು ಬಸವಣ್ಣನವರ ಆಶಯವೇ ಕಾಂಗ್ರೆಸ್‌ನ ಆಶಯ. ಹೀಗಾಗಿ ವಿಜಯಪುರ ವಿಮಾನ ನಿಲ್ದಾಣಕ್ಕೂ ಬಸವಣ್ಣನವರ ಹೆಸರಿಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಘೋಷಿತ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗಿದೆ. ರಾಜ್ಯದ ಶೇ.80 ರಷ್ಟು ಜನರಿಗೆ ಈ ಸೌಲಭ್ಯಗಳು ಸಿಗುತ್ತಿವೆ. ಶೀಘ್ರದಲ್ಲಿಯೇ ನೂತನ ಕೈಗಾರಿಕೆ ನೀತಿ ಜಾರಿಗೊಳಿಸುವ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ ದಾವೋಸ್‌ನಲ್ಲಿ ನಡೆದ ಆರ್ಥಿಕ ಶೃಂಗಸಭೆ ಸೇರಿದಂತೆ ಜಾಗತಿಕ ಮಟ್ಟದ ಹಲವು ಸಭೆಗಳಲ್ಲಿ ಭಾಗವಹಿಸಿ ಮಹತ್ವದ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.

ಶೆಟ್ಟರ್ ಬಿಜೆಪಿ ಸೇರಿದ್ದು ಪಕ್ಷಕ್ಕೆ ಹಾನಿ ಇಲ್ಲ:

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ. ಅಲ್ಲದೇ ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಶೆಟ್ಟರ ಹಾದಿಯಲ್ಲಿ ಸಾಗುವುದಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಿಂದ ಜಗದೀಶ ಶೆಟ್ಟರ ಅವಮಾನಿತರಾಗಿದ್ದರು. ಆಗ ನಾನು, ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಹಲವರು ಜಗದೀಶ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಶ್ರಮಿಸಿದ್ದೆವು. ವಿಧಾನಸಭೆ ಟಿಕೆಟ್ ಕೊಟ್ಟ ಬಳಿಕ ಸೋತರೂ ಅವರನ್ನು ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತ್ತು. ಇಷ್ಟೆಲ್ಲ ಗೌರವ ನೀಡಿದರೂ ಏಕಾಏಕಿ ಬಿಜೆಪಿ ಸೇರ್ಪಡೆಯಾಗಿರುವುದು ಏಕೆಂದು ಗೊತ್ತಿಲ್ಲ. ಜಗದೀಶ್ ಶೆಟ್ಟರ್ ನಡೆ ಬಗ್ಗೆ ನಾವು ಪ್ರತಿಕ್ರಿಯಿಸುವುದಕ್ಕಿಂತ ಜನರೇ ನಿರ್ಧಾರ ಮಾಡುತ್ತಾರೆ. ಜನ ಏನನ್ನುತ್ತಾರೆ ಎನ್ನುವುದು ಅವರೇ ತಿಳಿದುಕೊಳ್ಳಲಿ ಎಂದರು.

ಜಗದೀಶ ಶೆಟ್ಟರ್ ಅವರಿಗೆ ಬಿಜೆಪಿ ಏನು ಹೇಳಿದೆ, ಏನು ಭರವಸೆ ನೀಡಿದೆ, ಯಾವ ಒತ್ತಡ ಹಾಕಿದೆ ಎಂಬುದು ಗೊತ್ತಿಲ್ಲ. ವಾಸ್ತವ ಏನಿದೆ ಎಂಬುದನ್ನು ಶೆಟ್ಟರ್ ಅವರೇ ಬಹಿರಂಗ ಮಾಡಬೇಕು ಎಂದು ಆಗ್ರಹಿಸಿದರು.

ಒಬ್ಬರು ಹೋಗಿದ್ದಾರೆ ಎಂದ ಮಾತ್ರಕ್ಕೆ ಮತ್ತೊಬ್ಬರ ಹೆಸರನ್ನು ತಳುಕು ಹಾಕುವುದು ತರವಲ್ಲ ಎಂದು ಹೇಳಿದರು.