ಸಾರಾಂಶ
ಹುಬ್ಬಳ್ಳಿ: ಪೋಕ್ರಾನ್ ಪರಮಾಣು ಪರೀಕ್ಷೆ ನಂತರ 1998ರಲ್ಲಿ ಭಾರತದ ಮೇಲೆ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳು ಅನೇಕ ರೀತಿಯ ನಿರ್ಬಂಧ ಹೇರಿದ್ದವು. ಕಾಲಕ್ರಮೇಣ ಅವು ತೆರವಾದವು. ಈಗ ಅಮೇರಿಕ ಅದೇ ರೀತಿಯ ತೆರಿಗೆ ಹೇರಿದೆ. ಆದರೆ, ನಮ್ಮ ದೇಶದ ರೈತರು, ಮೀನುಗಾರರು, ಹೈನುಗಾರರ ರಕ್ಷಣೆ ನನ್ನ ಜವಾಬ್ದಾರಿ ಎಂದು ನಮ್ಮ ದೇಶದ ಪ್ರಧಾನಿ ಹೇಳುವ ಮೂಲಕ ಅಭಯ ನೀಡಿದ್ದಾರೆ ಎಂದು ಆರ್‌ಎಸ್‌ಎಸ್ ನ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತದ ಪ್ರಚಾರ ವಿಭಾಗದ ಪ್ರಮುಖ ಅರುಣಕುಮಾರ ಹೇಳಿದರು.
ಇಲ್ಲಿನ ವಾಸವಿ ಕಲ್ಯಾಣ ಮಹಲ್‌ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಶನಿವಾರ ಆಯೋಜಿಸಲಾಗಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ರಾಷ್ಟ್ರಗಳು ಶತ್ರುವೂ ಅಲ್ಲ, ಮಿತ್ರರೂ ಅಲ್ಲ. ನಿರ್ಬಂಧ, ತೆರಿಗೆ ಹೇರಿಕೆಯಂತಹ ಬಿಕ್ಕಟ್ಟುಗಳು ಸಾಮಾನ್ಯ. ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತ ಈ ಸಮಸ್ಯೆ ಎದುರಿಸಲು ಶಕ್ತವಾಗಿದೆ ಎಂದರು.
ಚದುರಂಗ ಆಟದಲ್ಲಿ ಅನೇಕ ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಮ್ಯಾಗ್ನಸ್ ಕಾರ್ಲಸನನ್ನು ಸೋಲಿಸಿದ್ದು ಭಾರತದ ಚಿಗುರು ಮೀಸೆಯ ಯುವಕ ಪ್ರಜ್ಞಾನಂದ ಗುಕೇಶ. ಇಂತಹ ಅನೇಕ ಯುವ ಸಾಧಕರು ನಮ್ಮಲ್ಲಿದ್ದಾರೆ. ಆಪರೇಷನ್ ಸಿಂದೂರ ನಂತರ ಭಾರತದ ಬಗ್ಗೆ ಜಗತ್ತಿಗಿದ್ದ ಭಾವನೆ ಬದಲಾಗಿದೆ. ಉಗ್ರರ ಅಡಗು ತಾಣಗಳ ಮೇಲಿನ ಕರಾರುವಾಕ್ ದಾಳಿ, ಪಾಕಿಸ್ತಾನ ಹಾರಿಸಿದ ಕ್ಷಿಪಣಿಗಳನ್ನು ಆಗಸದಲ್ಲೇ ಹೊಡೆದುರುಳಿಸಿದ ಭಾರತ ನೈಪುನ್ಯತೆ ವೃದ್ಧಿಸಿರುವುದನ್ನು ಜಗತ್ತೇ ಮನಗಂಡಿದೆ ಎಂದರು.ಸಂಘಕ್ಕೆ ನೂರು ವರ್ಷ ಆಗಿದೆ. ಸಂಘ ಇಲ್ಲದೆ ಹೋಗಿದ್ದರೆ ದೇಶದಲ್ಲಿ ಜಾತಿ, ಭಾಷೆ-ಭಾಷೆಗಳ ಆಧಾರದಲ್ಲಿ ಹಿಂದೂಗಳು ಹಂಚಿ ಹೋಗುತ್ತಿದ್ದರು ಎಂದ ಅವರು, ಜಾತಿ ಪದ್ಧತಿ ಮೂಲದಿಂದ ಕಿತ್ತು ಹಾಕಬೇಕಿದೆ ಎಂದು ಹೇಳಿದರು.
ಲೈಫ್‌ಟ್ರೋನ್ಸ್ ಇನೋ ಇಕ್ವಿಪ್‌ಮೆಂಟ್ ಪ್ರೈ.ಲಿಮಿಟೆಡ್‌ನ ಮಾಲೀಕ, ಡಾ. ಕಿರಣ ರಾಜಶೇಖರ ಕಂಠಿ ಮಾತನಾಡಿ, ಮಕ್ಕಳು ಮತ್ತು ಯುವಕರು ಮೊಬೈಲ್ ಗೀಳಿನಿಂದ ಹೊರಬರಬೇಕಿದೆ. ನಮ್ಮ ಸಂಸ್ಕೃತಿಯ ಸಾರ ಅರಿತು ಜೀವನ ನಡೆಸಿದರೆ ಬಾಳು ಬಂಗಾರವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಗಣವೇಷಧಾರಿಗಳು ಪರಸ್ಪರ ರಾಕಿ ಕಟ್ಟಿಕೊಂಡು ರಕ್ಷಾ ಬಂಧನದ ಶುಭಾಶಯ ಕೋರಿದರು. ಈ ವೇಳೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಮಹೇಶ್ ಟೆಂಗಿನಕಾಯಿ, ಶ್ರೀರಾಮಸೇನೆ ಮುಖ್ಯಸ್ಥ ಸುಭಾಸಸಿಂಗ ಜಮಾದಾರ, ಜಯತೀರ್ಥ ಕಟ್ಟಿ, ಮಾಜಿ ಶಾಸಕ ಅಶೋಕ ಕಾಟವೆ, ತೋಟಪ್ಪ ನಿಡಗುಂದಿ, ಬಸವರಾಜ ಕುಂದಗೋಳ ಮಠ, ವಿವೇಕ ಮೊಕಾಸಿ, ಕಿರಣ ಗುಡ್ಡದಕೇರಿ ಮತ್ತಿತರರು ಉಪಸ್ಥಿತರಿದ್ದರು.