ಚನ್ನಪಟ್ಟಣ: ಕೊಲ್ಲಿ ಯುದ್ಧ ಜಾಗತಿಕವಾಗಿ ಸಾಕಷ್ಟು ಸಮಸ್ಯೆ ತಂದೊಡ್ಡಿದ್ದು, ಬಾಂಬ್ ದಾಳಿಯಿಂದ ತೈಲ ಘಟಕಗಳು ಸ್ಫೋಟಗೊಂಡಿವೆ. ಬೇರೆ ದೇಶಕ್ಕೆ ಹೋಲಿಕೆ ಮಾಡಿದರೆ, ನಮ್ಮ ದೇಶ ಕೊಲ್ಲಿ ಯುದ್ಧದ ಪರಿಸ್ಥಿತಿಯನ್ನು ರಾಜತಾಂತ್ರಿಕವಾಗಿ ಅಚ್ಚುಕಟ್ಟಾಗಿ ನಿಭಾಯಿಸಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು

ಚನ್ನಪಟ್ಟಣ: ಕೊಲ್ಲಿ ಯುದ್ಧ ಜಾಗತಿಕವಾಗಿ ಸಾಕಷ್ಟು ಸಮಸ್ಯೆ ತಂದೊಡ್ಡಿದ್ದು, ಬಾಂಬ್ ದಾಳಿಯಿಂದ ತೈಲ ಘಟಕಗಳು ಸ್ಫೋಟಗೊಂಡಿವೆ. ಬೇರೆ ದೇಶಕ್ಕೆ ಹೋಲಿಕೆ ಮಾಡಿದರೆ, ನಮ್ಮ ದೇಶ ಕೊಲ್ಲಿ ಯುದ್ಧದ ಪರಿಸ್ಥಿತಿಯನ್ನು ರಾಜತಾಂತ್ರಿಕವಾಗಿ ಅಚ್ಚುಕಟ್ಟಾಗಿ ನಿಭಾಯಿಸಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ತಾಲೂಕಿನ ರಾಂಪುರ ಗ್ರಾಮದಲ್ಲಿ ಸಿಎಸ್‌ಆರ್ ಅನುದಾನದಲ್ಲಿ ನಿರ್ಮಿಸಿರುವ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂದಿಗ್ಧ ಪರಿಸ್ಥಿಯಲ್ಲಿ ನಮ್ಮ ಪ್ರಧಾನಿ ಹಾಗೂ ವಿದೇಶಾಂಗ ಸಚಿವರು, ಇರಾನ್ ಅಧ್ಯಕ್ಷರು, ಕತಾರ್ ಅಧ್ಯಕ್ಷರು ಸೇರಿದಂತೆ ಎಲ್ಲರೊಂದಿಗೆ ಮಾತನಾಡಿದ್ದಾರೆ. ಹರ್ಮುಜ್‌ ಜಲಸಂಧಿ ಮೂಲಕ ಮೂರು ಹಡಗುಗಳನ್ನು ಭಾರತಕ್ಕೆ ಬಿಡಲಾಗುತ್ತಿದೆ. ೨೧ ಹಡಗುಗಳು ಕಾಯುತ್ತ ನಿಂತಿವೆ. ಜಾಗತಿಕ ಸಮಸ್ಯೆ ವೇಳೆಯಲ್ಲಿ ನಮ್ಮ ದೇಶ ಉತ್ತಮ ರಾಜತಾಂತ್ರಿಕ ನಡೆ ಅನುಸರಿಸಿದೆ ಎಂದು ಹೇಳಿದರು.

ನಮ್ಮ ಜನ ಸೂರ್ಯಘರ್ ಯೋಜನೆಯನ್ನು ಬಳಸಿಕೊಂಡು ಹೆಚ್ಚು ಸೋಲಾರ್ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಬೇರೆ ರಾಜ್ಯಗಳಲ್ಲಿ ಹೆಚ್ಚು ಸೋಲಾರ್ ಬಳಕೆಯಲ್ಲಿದೆ. ಸರ್ಕಾರ ಸೌರ ಫಲಕ ಅಳವಡಿಸಲು ಒಂದು ಕಿಲೋ ವ್ಯಾಟ್‌ಗೆ ೪೮ ಸಾವಿರ ಹಾಗೂ ಮೂರು ಕಿ.ವ್ಯಾಟ್‌ಗೆ ೭೮ ಸಾವಿರದವರೆಗೆ ಸಬ್ಸಿಡಿ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಹೆಚ್ಚಿನ ರೀತಿಯಲ್ಲಿ ಸೋಲಾರ್ ಬಳಕೆ ಮಾಡಬೇಕಿದೆ ಎಂದು ತಿಳಿಸಿದರು.

ರೆಸ್ಟ್‌ವೇಗೆ ಸ್ಥಳ ಗುರುತು: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಎಲ್ಲೂ ವಿಶ್ರಾಂತಿ ಸ್ಥಳ ಇಲ್ಲ. ಈ ಹಿನ್ನೆಲೆಯಲ್ಲಿ ಎಕ್ಸ್‌ಪ್ರೆಸ್ ವೇನಲ್ಲಿ ಚನ್ನಪಟ್ಟಣದ ಬಳಿ ವಿಶ್ರಾಂತಿ ಸ್ಥಳ ನಿರ್ಮಿಸಲು ೮.೫ ಎಕರೆ ಜಾಗವನ್ನು ಗುರುತಿಸಲಾಗಿದೆ. ಈ ಕುರಿತು ಹೆದ್ದಾರಿ ಪ್ರಾಧಿಕಾರಕ್ಕೆ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ರೆಸ್ಟ್ ಏರಿಯಾ ನಿರ್ಮಿಸಲು ಪತ್ರ ಬರೆಯಲಾಗಿದೆ. ರೆಸ್ಟ್ ಏರಿಯಾದಲ್ಲಿ ಟಾಯ್ಸ್ ಪಾರ್ಕ್, ಸಿಲ್ಕ್ ಮ್ಯೂಸಿಯಂ, ಪೆಟ್ರೋಲ್ ಬಂಕ್ ನಿರ್ಮಾಣವಾಗಲಿದ್ದು, ಇದಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ ಎಂದರು.

೧೦ ಶುದ್ಧ ನೀರಿನ ಘಟಕ:

ಇಂದು ತಾಲೂಕಿನ ಹತ್ತು ಗ್ರಾಮಗಳಲ್ಲಿ ಹಾಗೂ 2 ಬಸ್‌ ನಿಲ್ದಾಣಗಳಲ್ಲಿ 1 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಲಾಗಿದೆ. ಈಗಾಗಲೇ ಬೇಸಿಗೆ ಅರಂಭಗೊಂಡಿದ್ದು, ನೀರಿನ ಅವಶ್ಯಕತೆ ಬಹಳಷ್ಟು ಇದೆ. ಜನರ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಸಿಗಬೇಕಿದೆ. ಕುಡಿಯುವ ನೀರಿನ ಘಟಕಗಳು ಎಲ್ಲ ಕಡೆ ಆಗಬೇಕು. ಕೆಲವು ಕಡೆ ಕುಡಿಯುವ ನೀರಿನ ಕೊರತೆ ಇದೆ. ಅದಕ್ಕಾಗಿ ಇದನ್ನು ಸಿಎಸ್‌ಆರ್ ಅನುದಾನ ಶುದ್ಧ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಕುಣಿಗಲ್ ತಾಲೂಕಿನಲ್ಲಿ ಎರಡು ತಿಂಗಳ ಹಿಂದೆ ಸಿಎಸ್‌ಅರ್ ಅನುದಾನದಲ್ಲಿ ೧೦ ಶುದ್ಧ ಕುಡಿಯುವ ನೀರಿನ ಘಟಕಗಳನ್ನ ನಿರ್ಮಿಸಲಾಗಿದೆ. ನಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು ೨೫೦ ಹೈಮಾಸ್ಟ್‌ ಲೈಟ್‌ಗಳನ್ನು ಅಳವಡಿಸಲಾಗುವುದು. ಬೇಸಿಗೆಯಲ್ಲಿ ನೀರಿನ ಅಭಾವ ಸೃಷ್ಟಿಯಾಗದಂತೆ ನೋಡಿಕೊಳ್ಳಲು ಹೆಚ್ಚು ಬೋರ್‌ವೆಲ್‌ಗಳನ್ನು ಕೊರೆಸಬೇಕಿದೆ. ಕೆಲವು ಕಡೆ ಬೋರ್‌ವೆಲ್ ಇದ್ದು, ಕೆಲವು ಕೆಟ್ಟು ನಿಂತಿದೆ. ಕೆಟ್ಟು ನಿಂತಿರುವ ಬೋರ್‌ವೆಲ್‌ಗಳನ್ನು ದುರಸ್ತಿಗೊಳಿಸಬೇಕಿದೆ. ಈ ಕುರಿತು ಸಿಇಒ ಜತೆ ಚರ್ಚಿಸುತ್ತೆನೆ. ಪ್ರತಿ ಬಾರಿ ಹೊಸ ಬೋರ್‌ವಲ್‌ಗಳನ್ನು ಕೊರೆಸುವುದಕ್ಕಿಂತ ಕೆಟ್ಟು ನಿಂತಿವುಗಳನ್ನು ದುರಸ್ತಿಗೊಳಿಸಿದರೆ ಒಳ್ಳೆಯದು. ಇದು ಪಂಚಾಯಿತಿ, ಪಿಡಿಎ ಹಾಗೂ ಸಿಇಒ ಜವಬ್ದಾರಿಯಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಅವರು ಸಿಎಸ್‌ಆರ್ ಅನುದಾನದಲ್ಲಿ ತಾಲೂಕಿನ ರಾಂಪುರ, ಶೀರಗುಡ್ಡ, ಕೂಡ್ಲೂರು, ಸಂತೆಮೊಗೇನಹಳ್ಳಿ ಸೇರಿದಂತೆ ಸುಮಾರು ೧೦ ಗ್ರಾಮಗಳಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ಸಿ.ಜಯಮುತ್ತು, ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಗೋವಿಂದಳ್ಳಿ ನಾಗರಾಜು, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್ ದೇವರಾಜು, ಕುಕ್ಕೂರುದೊಡ್ಡಿ ಜಯರಾಮು, ರೇಖಾ ಉಮಾಶಂಕರ್ ಇತರರಿದ್ದರು.

ಪೊಟೋ೨೨ಸಿಪಿಟಿ೧:

ಚನ್ನಪಟ್ಟಣ ತಾಲೂಕಿನ ಸಂತೇಮೋಗೇನಹಳ್ಳಿ ದೊಡ್ಡಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಂಸದ ಡಾ.ಸಿ ಎನ್.ಮಂಜುನಾಥ್‌ ಉದ್ಘಾಟಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಗೋವಿಂದಳ್ಳಿ ನಾಗರಾಜು, ಹಾಪ್‌ಕಾಮ್ಸ್ ದೇವರಾಜು ಇತರರಿದ್ದರು.