ಜ್ಞಾನ ಸಂಪತ್ತಿನಲ್ಲಿ ಭಾರತ ವಿಶ್ವಗುರು

| Published : Aug 12 2024, 01:02 AM IST

ಸಾರಾಂಶ

ಜ್ಞಾನ ಸಂಪತ್ತಿನಲ್ಲಿ ಭಾರತ ವಿಶ್ವಗುರುವಾಗಿದೆ. ಭಾರತೀಯ ಜ್ಞಾನ ಪರಂಪರೆಯನ್ನು ಇಂದಿನ ಜ್ಞಾನ ಪರಂಪರೆಯ ಜೊತೆಗೆ ಸಮನ್ವಯಗೊಳಿಸಿ, ನಮ್ಮ ಸಮಸ್ಯೆ, ಸವಾಲುಗಳು ಮತ್ತು ಜ್ಞಾನಶಾಖೆಗಳಿಗೆ ಹೊಸ ಬೆಳಕನ್ನು ನೀಡಬೇಕಾದ ಅಗತ್ಯತೆ ಇದೆ ಎಂದು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜ್ಞಾನ ಸಂಪತ್ತಿನಲ್ಲಿ ಭಾರತ ವಿಶ್ವಗುರುವಾಗಿದೆ. ಭಾರತೀಯ ಜ್ಞಾನ ಪರಂಪರೆಯನ್ನು ಇಂದಿನ ಜ್ಞಾನ ಪರಂಪರೆಯ ಜೊತೆಗೆ ಸಮನ್ವಯಗೊಳಿಸಿ, ನಮ್ಮ ಸಮಸ್ಯೆ, ಸವಾಲುಗಳು ಮತ್ತು ಜ್ಞಾನಶಾಖೆಗಳಿಗೆ ಹೊಸ ಬೆಳಕನ್ನು ನೀಡಬೇಕಾದ ಅಗತ್ಯತೆ ಇದೆ ಎಂದು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಹೇಳಿದರು.

ಅವರು ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಂಶೋಧನಾ ಅಭಿವೃದ್ಧಿ ಘಟಕ ಮತ್ತು ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ನಡೆದ ಬಹುಶಿಸ್ತಿಯ ಸಂಶೋಧನೆಯಲ್ಲಿ ಭಾರತೀಯ ಜ್ಞಾನ ಸಂಪತ್ತು ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸಮ್ಮೇಳನ ಬಹಳ ಸಕಾಲಿಕ ಉಪಯುಕ್ತವಾದ ಸಮ್ಮೇಳನವಾಗಿದೆ. 2020ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಾರಂಭವಾದಾಗಿಂದ ಈ ಭಾರತೀಯ ಜ್ಞಾನ ಪರಂಪರೆಯ ಪುನರ್ ನಿರೂಪಣೆ ಇದರ ಪುನರ್ ಮಾನನ ಬಗ್ಗೆ ಸಾಕಷ್ಟು ಪ್ರಯತ್ನಗಳು ಹಾಗೂ ಸರಕಾರದ ಹಾಗೂ ಸಂಘ ಸಂಸ್ಥೆಗಳ ಮಟ್ಟದಲ್ಲಿ ಬೇರೆ ಶೈಕ್ಷಣಿಕ ವೇದಿಕೆಗಳಲ್ಲಿ ನಡೆಯುತ್ತಾ ಇದೆ. ಈ ಚರ್ಚೆಯ ಮೂಲ ಉದ್ದೇಶ ಭಾರತೀಯ ಜ್ಞಾನ ಪರಂಪರೆಯನ್ನು ಇವತ್ತಿನ ಜ್ಞಾನ ಪರಂಪರಗೆ ಹೇಗೆ ಸಮನ್ವಯ ಮಾಡಿ ನಮ್ಮ ಸಮಸ್ಯೆಗಳಿಗೆ ನಮ್ಮ ಸವಾಲುಗಳಿಗೆ ನಮ್ಮ ಬೇರೆ ಬೇರೆ ಜ್ಞಾನ ಶಾಖೆಗಳಿಗೆ ಹೊಸ ಆಯಾಮ ಹೊಸ ಬೆಳಕು ಕೊಡುವ ಸಾಧ್ಯತೆಗಳನ್ನು ಪರಿಶೀಲನೆ ಮಾಡುವುದಾಗಿದೆ ಎಂದರು.

ಈ ನಿಟ್ಟಿನಲ್ಲಿ ಇವತ್ತಿನ ಈ ರಾಷ್ಟ್ರೀಯ ಸಮ್ಮೇಳನ ಒಂದು ಅಭಿನಂದನ ಪ್ರಯತ್ನವಾಗಿದೆ. ಸಂಸ್ಕೃತಿ ಹಾಗೂ ಸಂಪ್ರದಾಯದಿಂದ ಕೂಡಿದ ಭಾರತೀಯ ಶಿಕ್ಷಣ ಶ್ರೀಮಂತವಾಗಿದೆ. ಜ್ಞಾನ-ವಿಜ್ಞಾನದ ಮುಖಾಮುಖಿಯ ದರ್ಶನ ಹಾಗೂ ತತ್ವಶಾಸ್ತ್ರ ಮತ್ತು ನೈತಿಕತೆಯ ಮೇಲೆ ರೂಪುಗೊಂಡಿರುವುದೇ ಭಾರತೀಯ ಶಿಕ್ಷಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಭಾರತದ ಶಿಕ್ಷಣವು ಪ್ರಾಯೋಗಿಕ ಶಿಕ್ಷಣವಾಗಿದೆ. ಮಹಿಳೆ ಇಲ್ಲದೇ ಭಾರತೀಯ ಶಿಕ್ಷಣ ಪರಿಪೂರ್ಣವಾಗಿಲ್ಲ. ಪ್ರಾಚೀನ ಕಾಲದಿಂದಲೂ ಅನೇಕ ವಿಶ್ವವಿದ್ಯಾಲಯಗಳು 64 ವಿದ್ಯೆಗಳನ್ನು ಜಗತ್ತಿಗೆ ಪರಿಚಯಿಸಿ ಅಂದಿನಿಂದ ಇಂದಿನವರೆಗೂ ವಿಶ್ವಗುರು, ವಿಶ್ವ ನಾಯಕ ಸ್ಥಾನವನ್ನು ಜ್ಞಾನಸಂಪತ್ತಿನಲ್ಲಿ ಭಾರತವು ಪಡೆದುಕೊಂಡಿದೆ. ಇಲ್ಲಿನ ಜ್ಞಾನ ಪದ್ಧತಿ ಕಲ್ಪನೆಗೂ ಮೀರಿದ್ದು, ಖಗೋಳ ಶಾಸ್ತ್ರದಿಂದ ಹಿಡಿದು ಇಂದಿನ ಕಾನೂನು ಶಾಸ್ತ್ರದವರೆಗೂ ಅಪಾರಜ್ಞಾನ ಭಾರತೀಯರು ಹೊಂದಿದ್ದಾರೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಭಾರತದ ಪ್ರಮುಖ ಎಂ.ಎನ್.ಸಿ.ಯ ಮುಖ್ಯ ಕಾರ್ಯತಂತ್ರ ಅಧಿಕಾರಿ ಸುಬ್ರಹ್ಮಣ್ಯಂ ಚಿದಂಬರಂ ಅವರು, ಭಾರತದ ಶಿಕ್ಷಣವು ಅಧ್ಯಾತ್ಮಕ್ಕೆ ಹೆಚ್ಚು ಒತ್ತು ನೀಡಿ ನಮ್ಮ ನಂಬಿಕೆ, ಆಚಾರ, ವಿಚಾರ ಸಂಸ್ಕೃತಿ ಹಾಗೂ ನೈತಿಕ ನಿಯಮಗಳನ್ನು ಜೀವಂತವಾಗಿ ಉಳಿಸಿವೆ. 500 ವರ್ಷದ ಹಿಂದಿನ ರೀತಿ-ನೀತಿಗಳು ಬೇರೆಯಾಗಿವೆ. ಇಂದು ನಾವು ವಾಸ್ತವಿಕವಾಗಿ ಇರುವ ಸಮಾಜವು ಬಹಳಷ್ಟು ಬದಲಾವಣೆ ಹೊಂದಿದೆ ಎಂದು ತಿಳಿಸಿದರು.

ಉನ್ನತ ಶಿಕ್ಷಣದ ಮುಖ್ಯ ಸಲಹೆಗಾರರಾದ ಡಾ.ಮೀನಾ ಚಂದಾವರಕರ, ಆಡಳಿತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಸದಸ್ಯರಾದ ಎಸ್.ಆರ್.ಮನಹಳ್ಳಿ, ಐಕ್ಯೂಎಸಿ ಸಂಯೋಜಕ ಪಿ.ಕೆ. ಚೌಗುಲಾ ಹಾಗೂ ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಅವಿತಾ ಮಾರಿಹಾಳ ಉಪಸ್ಥಿತರಿದ್ದರು. ಸಮಾವೇಶದಲ್ಲಿ ಸಂಶೋಧನಾ ಲೇಖನಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಉಪ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಅವರನ್ನು ಮಹಾವಿದ್ಯಾಲಯದಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರಾಚಾರ್ಯ ಎಸ್.ಜೆ.ಒಡೆಯರ ಸ್ವಾಗತಿಸಿದರು. ಪಿ.ಕೆ.ಚೌಗಲಾ ವಂದಿಸಿದರು, ಪಲ್ಲವಿ ಪಾತ್ರೋಟ ಹಾಗೂ ಎಸ್.ಎಸ್.ಮುರಗೋಡ್ ಕಾರ್ಯಕ್ರಮ ನಿರೂಪಿಸಿದರು.

ನಂತರದ ಮೊದಲ ಗೋಷ್ಠಿಯಲ್ಲಿ ಸ್ಥಳೀಯ ಭಾರತೀಯ ನಿರ್ವಹಣೆ ಪ್ರಾಚೀನ ಗ್ರಹಿಕೆ ಕುರಿತು ಎಂ.ಎನ್.ಸಿಯ ಮುಖ್ಯ ಕಾರ್ಯತಂತ್ರ ಅಧಿಕಾರಿ ಸುಬ್ರಮಣ್ಯಂ ಚಿದಂಬರಂ ಉಪನ್ಯಾಸ ನೀಡಿದರು. ಆಹಾರ ಸಂರಕ್ಷಣೆ ಹಾಗೂ ಪೋಷಣೆ ವಿಭಾಗದ ಮುಖ್ಯಸ್ಥೆ ಪ್ರೊ.ರೇಣುಕಾ ಮೇಟಿ, ಗೋಷ್ಠಿ 2ರಲ್ಲಿ ಪ್ರಾಚೀನ ಗಿಡ ಮೂಲಿಕೆಗಳು ಔಷಧೀಯ ಮತ್ತು ಆಹಾರದ ಮೌಲ್ಯಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ದೇಶ ಹಾಗೂ ವಿದೇಶದ 54 ಜನರಿಂದ ಸಂಶೋಧನಾ ಪ್ರಬಂಧ ಮಂಡಿಸಲಾಯಿತು.

---

ಕೋಟ್‌

ಇಂದಿನ ಆಧುನಿಕತೆಯ ತಂತ್ರಜ್ಞಾನದ ಯುಗದಲ್ಲಿ ಹೆಚ್ಚಿನ ಸಾಧನೆಗಾಗಿ ವಿದ್ಯಾರ್ಥಿಗಳು ತಮ್ಮ ಕ್ರಿಯಾಶೀಲರಾಗಿ ತಮ್ಮ ಕೌಶಲ್ಯಗಳ ಮೂಲಕ ಉದ್ಯೋಗವಂತರಾಗಬೇಕು.

-ಗುರುಬಸವ ಸೂಳಿಬಾವಿ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ