ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಾಮನಗರ ಜಿಲ್ಲೆಯಿಂದ ಆಗಸ್ಟ್ 18 ರಂದು ಮಂಡ್ಯ ಜಿಲ್ಲೆಗೆ ಆಗಮಿಸಲಿರುವ ಜ್ಯೋತಿ ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸೋಣ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜ್ಯೋತಿ ರಥಯಾತ್ರೆ ಸ್ವಾಗತಿಸುವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿ, ಕರ್ನಾಟಕ ಸಂಭ್ರಮ 50 ರ ಜ್ಯೋತಿ ರಥಯಾತ್ರೆಯೂ ರಾಜ್ಯಾದ್ಯಂತ ಸಂಚರಿಸುತ್ತಿದೆ ಎಂದರು.
1973ರಲ್ಲಿ ಮೈಸೂರು ಪ್ರಾಂತ್ಯಕ್ಕೆ ಹೊಸದಾಗಿ ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿ 50 ವರ್ಷಗಳು ಕಳೆದಿವೆ. ಅದರ ಸುವರ್ಣ ಸಂಭ್ರಮಾಚಾರಣೆ ಮಾಡಲಾಗುತ್ತಿದೆ. ಈ ಸಂಬಂಧ ಜ್ಯೋತಿ ರಥ ಯಾತ್ರೆಯು ಆಗಸ್ಟ್ 18 ರಿಂದ 25 ರ ವರೆಗೆ 7 ದಿನಗಳ ಕಾಲ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದರು.ಜ್ಯೋತಿ ರಥಯಾತ್ರೆಯು ಆಗಸ್ಟ್ 18ರಂದು - ಮದ್ದೂರು, 19ರಂದು - ನಾಗಮಂಗಲ, 20ರಂದು - ಕೆ.ಆರ್.ಪೇಟೆ, 21 ರಂದು - ಪಾಂಡವಪುರ, 22ರಂದು - ಶ್ರೀರಂಗಪಟ್ಟಣ, 23 ರಂದು - ಮಂಡ್ಯ, 24 ರಂದು - ಮಳವಳ್ಳಿ ತಾಲೂಕಿನಲ್ಲಿ ಸಂಚರಿಸಲಿದೆ. ಆಗಸ್ಟ್ 25 ರಂದು ಚಾಮರಾಜನಗರ ಜಿಲ್ಲೆ ತಲುಪಲಿದೆ ಎಂದರು.
ಸ್ಥಳೀಯ ಆಡಳಿತಾಧಿಕಾರಿಗಳು, ಕಸಾಪ ಪದಾಧಿಕಾರಿಗಳು, ಗ್ರಾಪಂ ಪಿಡಿಒಗಳು, ಜನ ಪ್ರತಿನಿಧಿಗಳು, ಕನ್ನಡ ಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಸಂಬಂಧಪಟ್ಟ ಸಭೆ ನಡೆಸಿ ಎಲ್ಲರೂ ಒಟ್ಟಾಗಿ ಸೇರಿಕೊಂಡು ಜ್ಯೋತಿ ರಥ ಯಾತ್ರೆಯನ್ನು ಬರಮಾಡಿಕೊಂಡು ಯಶಸ್ವಿಯಾಗಿ ಸ್ವಾಗತಿಸೋಣ ಎಂದರು.ಜ್ಯೋತಿ ರಥಯಾತ್ರೆ ಸಂಚರಿಸುವ ಮಾರ್ಗದಲ್ಲಿ ಗ್ರಾಪಂ, ತಾಲೂಕು ಕಚೇರಿಗಳು ಹಬ್ಬದ ರೀತಿ ಮಾರ್ಗವನ್ನು ಶೃಂಗರಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಬೇಕು. ಸರ್ಕಾರ ನಿಗಧಿಪಡಿಸಿರುವ ರೂಟ್ ಮ್ಯಾಪ್ ನಲ್ಲಿಯೇ ಸಂಚರಿಸಬೇಕು. ಯಾವುದೇ ಬದಲಾವಣೆಗೆ ಅವಕಾಶವಿಲ್ಲ ಎಂದರು.
ಜಿಲ್ಲೆಯ ಎಲ್ಲಾ ತಾಲೂಕಿನ ಪುರಸಭೆಗಳು, ಶಾಲಾ ಕಾಲೇಜುಗಳು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜ್ಯೋತಿ ರಥ ಯಾತ್ರೆಯ ಸಂಭ್ರಮಾಚಾರಣೆಯಲ್ಲಿ ಪಾಲ್ಗೊಳ್ಳಬೇಕು. ರಥವು ಸಂಚಾರಿಸುವ ಸ್ಥಳದಲ್ಲೆಲ್ಲ ಕನ್ನಡ ಘೋಷಣೆಗಳು, ಡೊಳ್ಳು ಕುಣಿತ ಮೆರವಣಿಗೆ, ವಿವಿಧ ಕಲಾತಂಡಗಳು ತಮ್ಮ ಕಲಾಪ್ರದರ್ಶನದೊಂದಿಗೆ ಪಾಲ್ಗೊಳ್ಳುವಂತೆ ಕಾರ್ಯಕ್ರಮ ಆಯೋಜಿಸಬೇಕು ಎಂದರು.ಸಭೆಯಲ್ಲಿ ಎಸಿ ಶಿವಮೂರ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಕೃಷ್ಣಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ ಸಿದ್ದಲಿಂಗೇಶ್, ಪಾಂಡವಪುರ ಎಸಿ ನಂದೀಶ್, ಪಿಯುಡಿಡಿ ಸಿ.ಚೆಲುವಯ್ಯ, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕಿ ಡಾ.ರೋಹಿಣಿ, ತಹಸೀಲ್ದಾರ್ ಗ್ರೇಡ್ - 2 ವಸಂತಕುಮಾರ್, ಮುಖಂಡರಾದ ಸುಜಾತ ಕೃಷ್ಣ, ಬಿ.ಎಂ.ಅಪ್ಪಾಜಪ್ಪ, ಆನಂದ್, ಅರುಣ ಕುಮಾರಿ, ನಾಗರಾಜು ಉಪಸ್ಥಿತರಿದ್ದರು.