ಭಾರತಕ್ಕೆ ಸೈನಿಕನ ಮನಸ್ಥಿತಿ ಚಿಂತನೆಯ ಅವಶ್ಯಕತೆಯಿದೆ: ಕ್ಯಾ. ಬ್ರಿಜೇಶ್ ಚೌಟ

| Published : Aug 15 2024, 01:46 AM IST / Updated: Aug 15 2024, 01:47 AM IST

ಸಾರಾಂಶ

ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ರೂಪಕಲಾ ಕೆ ಅವರಿಗೆ ‘ಶೀಂಟೂರು ಸನ್ಮಾನ’ ಪ್ರದಾನಿಸಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಸೈನಿಕನ ಮಾನಸಿಕತೆಯು ವಿಶೇಷವಾಗಿದ್ದು, ದೇಶದ ವಿಚಾರ ಬಂದಾಗ ಸ್ವಾರ್ಥವನ್ನು ಮರೆತು ಇಡೀ ಸಮಾಜವನ್ನು ಒಂದಾಗಿ ಕೊಂಡೊಯ್ಯುವ ಮನೋಭಾವ ಸೈನಿಕರದ್ದಾಗಿದೆ. ಒಮ್ಮೆ ಸೈನಿಕನಾದಲ್ಲಿ ಜೀವನಪೂರ್ತಿ ಆತ ಅಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳುತ್ತಾನೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಮಾಜ ವಿಫಲವಾಗಿದೆ. ಭಾರತಕ್ಕೆ ಸೈನಿಕನ ಮನಸ್ಥಿತಿಯ ಚಿಂತನೆಯ ಅವಶ್ಯಕತೆಯಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.

ಅವರು ಸವಣೂರು ವಿದ್ಯಾಗಂಗೋತ್ರಿಯ ವಿದ್ಯಾಚೇತನ ಸಭಾಂಗಣದಲ್ಲಿ ಬುಧವಾರ ಎಸ್.ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್ ಪ್ರವರ್ತಿತ, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸ್ಥಾಪಕ ಶೀಂಟೂರು ನಾರಾಯಣ ರೈಯವರ ೧೩ನೇ ವರ್ಷದ ಸ್ಥಾಪಕರ ದಿನಾಚರಣೆ, ಶೀಂಟೂರು ಸ್ಮೃತಿ, ಶಿಷ್ಯ ವೇತನ ವಿತರಣೆ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ, ಸನ್ಮಾನ ನೆರವೇರಿಸಿ ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ಸೈನಿಕನ ಮನಸ್ಥಿತಿಯನ್ನು ಬೆಳೆಸಿಕೊಂಡಲ್ಲಿ ಅವರ ಮುಂದಿನ ಭವಿಷ್ಯ ಉತ್ತಮವಾಗಲಿದೆ. ನಮ್ಮ ಸಂಸ್ಕೃತಿಯು ಶ್ರೇಷ್ಠವಾಗಿದೆ. ಅದಕ್ಕಾಗಿ ಭಾರತ ವಿಶ್ವಗುರುವಾಗಿದೆ. ಮುಂದಿನ ೨೫ ವರ್ಷಗಳಲ್ಲಿ ಭವಿಷ್ಯದ ಭಾರತ ಅಮೃತಕಾಲವಾಗಲಿದೆ. ಅದನ್ನು ಸಶಕ್ತಗೊಳಿಸುವ ತಾಕತ್ತು ನಮ್ಮಲ್ಲಿರಬೇಕು. ಅಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಕಳೆದುಕೊಳ್ಳಬಾರದು. ಸ್ವಾತಂತ್ರ್ಯ ಪೂರ್ವದಲ್ಲಿ ಸೈನಿಕರಾಗಿದ್ದ ಶೀಂಟೂರು ನಾರಾಯಣ ರೈ ಅವರ ಹೆಸರಿನಲ್ಲಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ವಿದ್ಯಾದಾನ ಮಾಡುತ್ತಿರುವುದು ಪ್ರೇರಣಾದಾಯಿಯಾಗಿದೆ ಎಂದರು. ಶೀಂಟೂರು ಸಂಸ್ಮರಣೆ ಮಾಡಿದ ಕಸಾಪ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು, ಶೀಂಟೂರು ನಾರಾಯಣ ರೈಗಳು ಯೋಧ, ಶಿಕ್ಷಕ, ಸಹಕಾರಿ, ಕೃಷಿಕ ಹೀಗೆ ಓರ್ವನೇ ವ್ಯಕ್ತಿ ಹಲವು ಕ್ಷೇತ್ರಗಳಲ್ಲಿನ ಸಾಧನೆಗಳ ಸಾಧಕರಾಗಿದ್ದರು. ಪುತ್ತೂರಿನ ಬೋರ್ಡು ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಶಿಕ್ಷಕರ ದತ್ತಿನಿಧಿಯನ್ನು ಆರಂಭಿಸಿದ ಹೆಗ್ಗಳಿಗೆ ಶೀಂಟೂರು ನಾರಾಯಣ ರೈಗಳಿಗೆ ಸಲ್ಲುತ್ತದೆ ಎಂದರು. ಈ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ರೂಪಕಲಾ ಕೆ ಅವರಿಗೆ ‘ಶೀಂಟೂರು ಸನ್ಮಾನ’ ಪ್ರದಾನಿಸಿ ಗೌರವಿಸಲಾಯಿತು. ಸೇನೆಗೆ ನೀಡುವ ಗೌರವಾರ್ಥ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳಾದ ಮಹಮ್ಮದ್ ಝಯಾನ್, ಮನ್ವಿತ್ ಎಚ್. ಆಚಾರ್ಯ, ಕೃಪಾಲಿ ಎಸ್.ಡಿ., ಜಶ್ವಿತ್ ಕೆ., ಆಝ್ಮಿಯತ್ ಸಫಾ, ಕೆ. ಯಶಸ್ವಿ ರೈ, ಯಶ್ವಿನಿ ಪಿ.ಆರ್., ಶಿಲ್ಪಾ ಎನ್ ಮತ್ತು ಶೀಲಾ ಕೆ.ಡಿ. ಅವರಿಗೆ ‘ಶೀಂಟೂರು ಶಿಷ್ಯ ವೇತನ’ ನೀಡಿ ಪುರಸ್ಕರಿಸಲಾಯಿತು. ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದ.ಕ. ಮತ್ತು ಉಡುಪಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ನಡುಮನೆ, ಉದ್ಯಮಿ ಮಲಾರ್‌ಬೀಡು ರವೀಂದ್ರನಾಥ ಆಳ್ವ, ಗುಜರಾತ್‌ನ ಗ್ರೀನ್ ಹೀರೋ ಆಫ್ ಇಂಡಿಯಾದ ಫಾರೆಸ್ಟ್ ಕ್ರಿಯೇಟರ್‌ನ ಸಹ ಸ್ಥಾಪಕ ಡಾ. ಆರ್ ಕೆ.ನಾಯರ್ ಮಾತನಾಡಿದರು. ವೇದಿಕೆಯಲ್ಲಿ ಸವಣೂರು ಎಸ್.ಎನ್.ಆರ್.ರೂರಲ್ ಎಜ್ಯುಕೇಶನ್ ಟ್ರಸ್ಟ್‌ನ ವಿಶ್ವಸ್ಥರಾದ ಎನ್. ಸುಂದರ ರೈ ನಡುಮನೆ, ಎನ್. ಸುಧಾಕರ ರೈ, ರಶ್ಮಿ ಅಶ್ವಿನ್ ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಕೆ, ವಿದ್ಯಾರಶ್ಮಿ ಸ್ವತಂತ್ರ ಪ.ಪೂ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಮತ್ತಿತರರು ಉಪಸ್ಥಿತರಿದ್ದರು.

ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸಹಕಾರಿ ರತ್ನ ಸವಣೂರು ಕೆ.ಸೀತಾರಾಮ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಎನ್.ಜಯಪ್ರಕಾಶ್ ರೈ ವಂದಿಸಿದರು. ಉಪನ್ಯಾಸಕಿ ಪ್ರತಿಭಾ ಎಸ್ ನಿರೂಪಿಸಿದರು.