ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವದ ಅಗತ್ಯವಿದೆ

| Published : Mar 12 2024, 02:03 AM IST

ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವದ ಅಗತ್ಯವಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂತಾರಾಷ್ಟ್ರೀಯ ಸಂಘರ್ಷ ಕೊನೆಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲು ಭಾರತವನ್ನು ಭದ್ರತಾ ಮಂಡಳಿ ಖಾಯಂ ಸದಸ್ಯರನ್ನಾಗಿ ಸೇರಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಮೂರನೇ ಮಹಾಯುದ್ಧಕ್ಕೆ ಕಾರಣವಾಗುವ ಪ್ರಮುಖ ಸಂಘರ್ಷಕ್ಕೆ ಬೆದರಿಕೆ ಹಾಕುತ್ತಿರುವ ರಾಷ್ಟ್ರಗಳ ನಡುವಿನ ಅಂತಾರಾಷ್ಟ್ರೀಯ ಸಂಘರ್ಷ ಕೊನೆಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲು ಭಾರತವನ್ನು ಭದ್ರತಾ ಮಂಡಳಿ ಖಾಯಂ ಸದಸ್ಯರನ್ನಾಗಿ ಸೇರಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಶರಣಬಸವ ವಿವಿ ಕುಲಸಚಿವ ಡಾ. ಅನಿಲಕುಮಾರ ಬಿಡವೆ ಹೇಳಿದರು.

ಶರಣಬಸವ ವಿವಿ ಅನುಭವ ಮಂಟಪದಲ್ಲಿ ಪ್ರವಾಸೋದ್ಯಮ ವಿಭಾಗ ಮತ್ತು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಜಂಟಿಯಾಗಿ ಆಯೋಜಿಸಿದ್ದ ಜಾಗತಿಕ ತಾಪಮಾನದ ಜ್ವಲಂತ ಸಮಸ್ಯೆ ಮತ್ತು ಈ ಸಮಸ್ಯೆ ನಿವಾರಿಸಲು ಅಗತ್ಯವಿರುವ ಪರಿಹಾರಗಳ ಕುರಿತು ಮಾತನಾಡಲು ವಿವಿಧ ದೇಶ ಪ್ರತಿನಿಧಿಸುವ ವಿದ್ಯಾರ್ಥಿ ಪ್ರತಿನಿಧಿಗಳಿಗಾಗಿ ಯುವ ಮಂಥನ್ ಮಾದರಿ ವಿಶ್ವಸಂಸ್ಥೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಜಗತ್ತಿನಲ್ಲಿ ಶಾಂತಿ ಕಾಪಾಡಲು ಮತ್ತು ರಾಷ್ಟ್ರಗಳ ನಡುವಿನ ಸಂಘರ್ಷ ಕೊನೆಗೊಳಿಸಲು ಭದ್ರತಾ ಮಂಡಳಿ ಕಾಯಂ ಸದಸ್ಯರಾಗಿದ್ದ 5 ಶಕ್ತಿಶಾಲಿ ರಾಷ್ಟ್ರಗಳು ಅಳವಡಿಸಿಕೊಂಡ ಅಸಹಕಾರ ಧೋರಣೆಯಿಂದಾಗಿ ರಾಷ್ಟ್ರಗಳ ನಡುವೆ ಶಾಂತಿ ಮತ್ತು ಸಂಘರ್ಷ ಕೊನೆಗೊಳಿಸುವುದು ಈಡೇರುತ್ತಿಲ್ಲ ಎಂದರು.

ಯುಎನ್‍ಒದ ಇಂತಹ ಮಾದರಿ ಸಭೆ ಆಯೋಜಿಸಲು ಎರಡೂ ವಿಭಾಗಗಳ ಈ ಕಾರ್ಯ ಶ್ಲಾಘಿಸಿದ ಅವರು, ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಬಹಳ ಅನುಕೂಲವಾಗುತ್ತದೆ ಮತ್ತು ಇಂತಹ ಸಭೆ ಆಯೋಜಿಸುವುದರಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ವಿದ್ಯಾರ್ಥಿಗಳನ್ನು ಸಶಕ್ತಗೊಳಿಸಲು ಮತ್ತು ಅವರ ಶೈಕ್ಷಣಿಕ ಸುಧಾರಣೆಗೆ ಸಾಕಷ್ಟು ಸಹಾಯವಾಗುತ್ತದೆ ಎಂದರು.

ಪ್ರವಾಸೋದ್ಯಮ ವಿಭಾಗದ ಚೇರಪರ್ಸನ್ ಡಾ. ವಾಣಿಶ್ರೀ ಸಿ.ಟಿ. ಸ್ವಾಗತಿಸಿದರು. ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ, ಕುಲಸಚಿವ (ಮೌಲ್ಯಮಾಪನ) ಡಾ. ಎಸ್.ಎಚ್.ಹೊನ್ನಳ್ಳಿ, ಪತ್ರಿಕೋದ್ಯಮ ವಿಭಾಗದ ಡೀನ್ ಟಿ.ವಿ. ಶಿವಾನಂದನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.