ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ರದ್ದುಪಡಿಸುವುದು ಸೇರಿದಂತೆ ನಾಲ್ಕು ಪ್ರಮುಖ ಬೇಡಿಕೆ ಗಳನ್ನು ಮುಂದಿಟ್ಟುಕೊಂಡು ಗುರುವಾರ ಇಂಡಿಯಾ ಮೈತ್ರಿಕೂಟದಿಂದ ದೇಶಾದ್ಯಂತ ಹೋರಾಟ ಹಮ್ಮಿಕೊಂಡಿದ್ದು ಬೀದರಿನಲ್ಲಿ ಕೂಡ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಬೀದರ್
ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ರದ್ದುಪಡಿಸುವುದು ಸೇರಿದಂತೆ ನಾಲ್ಕು ಪ್ರಮುಖ ಬೇಡಿಕೆ ಗಳನ್ನು ಮುಂದಿಟ್ಟುಕೊಂಡು ಗುರುವಾರ ಇಂಡಿಯಾ ಮೈತ್ರಿಕೂಟದಿಂದ ದೇಶಾದ್ಯಂತ ಹೋರಾಟ ಹಮ್ಮಿಕೊಂಡಿದ್ದು ಬೀದರಿನಲ್ಲಿ ಕೂಡ ಪ್ರತಿಭಟನೆ ನಡೆಸಲಾಯಿತು.ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಎಸ್ಐಆರ್ ಪ್ರಕ್ರಿಯೆ ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಎಸ್ಐಆರ್ ಪ್ರಕ್ರಿಯೆ ಪ್ರಜಾ ಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ಹಾಗೂ ಪಾರದರ್ಶಕತೆ ಇಲ್ಲದೆ ನಡೆಸಲಾಗುತ್ತಿದ್ದು ಕೂಡಲೆ ಇದನ್ನು ರದ್ದು ಪಡಿಸಬೇಕೆಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್ ಮಾತನಾಡಿ, ಈ ಹಿಂದೆ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಪ್ರಧಾನಮಂತ್ರಿ, ಪ್ರತಿಪಕ್ಷದ ನಾಯಕ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿ ಸದಸ್ಯರಾಗಿದ್ದರು. ಆದರೆ ಈಗಿನ ವ್ಯವಸ್ಥೆಯಲ್ಲಿ ಮುಖ್ಯ ನ್ಯಾಯಮೂರ್ತಿಯವರ ಬದಲಿಗೆ ಕೇಂದ್ರ ಗೃಹ ಸಚಿವರನ್ನು ಸೇರಿಸಿರುವುದು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ನೇಮಕಾತಿ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಆದ್ದರಿಂದ ಹಿಂದಿನ ವ್ಯವಸ್ಥೆಯನ್ನು ಮರುಸ್ಥಾಪಿಸುವಂತೆ ಕಾಯ್ದೆಗೆ ತಿದ್ದುಪಡಿ ತರಬೇಕು. ಮುಖ್ಯ ಚುನಾವಣಾ ಆಯುಕ್ತರಿಗೆ ನೀಡಿರುವ ಕಾನೂನು ವಿನಾಯಿತಿ ರದ್ದುಗೊಳಿಸಬೇಕು. ದೇಶದ ಪ್ರತಿಯೊಬ್ಬರೂ ಕಾನೂನಿನ ಮುಂದೆ ಹೊಣೆಗಾರರಾಗಿರುವಂತೆ ಚುನಾವಣಾ ಆಯುಕ್ತರೂ ತಮ್ಮ ಕಾರ್ಯಗಳಿಗೆ ಹೊಣೆಗಾರರಾಗಿರಬೇಕು ಎಂದು ಒತ್ತಾಯಿಸಿದರು. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಇಂಡಿಯಾ ಮೈತ್ರಿ ಕೂಟದ ಹೋರಾಟ ದೆಹಲಿಯಿಂದ ಹಳ್ಳಿ ವರೆಗೆ ನಿರಂತರವಾಗಿ ನಡೆಯಲಿದೆ ಎಂದ ಅವರು ಪಕ್ಷದ ಸೂಚನೆಯಂತೆ ಮುಂದಿನ ಐದು ದಿನಗಳಲ್ಲಿ ಬೀದರ್ ಜಿಲ್ಲೆಯ 12 ಬ್ಲಾಕ್ಗಳಲ್ಲಿಯೂ ಪ್ರತಿಭಟನೆ ನಡೆಸಲಾಗುವುದು. ನಂತರ ಒಂದು ವಾರದ ಅಂತರದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಹೋರಾಟ ಹಮ್ಮಿಕೊಳ್ಳಲಾಗುವುದು. ನಮ್ಮ ನಾಲ್ಕು ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಎಚ್ಚರಿಸಿದರು.ಬಿಜೆಪಿ ಹಾಗೂ ಆರ್ಎಸ್ಎಸ್ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳು, ಸಂವಿಧಾನ ಮತ್ತು ಮತದಾನದ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಹೋರಾಟದ ಮುಖ್ಯ ಉದ್ದೇಶವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಕಾ.ಬಾಬುರಾವ್ ಹೊನ್ನಾ, ವಿಠಲ್ ದಾಸ್ ಪ್ಯಾಗೆ, ಕಾ.ಸಂತೋಷ ಚಿಟಗುಪ್ಪಾ, ಕಾ.ರೇಷ್ಮಾ ಕುಂದೆ, ಓಂಪ್ರಕಾಶ್ ರೊಟ್ಟೆ ಸೇರಿದಂತೆ ಇನ್ನಿತರರು ಮಾತನಾಡಿದ್ದರು.ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಮಾಜಿ ಎಂಎಲ್ಸಿಗಳಾದ ಕೆ. ಪುಂಡಲಿಕರಾವ, ಅರವಿಂದ ಅರಳಿ, ಅಮೃತರಾವ ಚಿಮಕೋಡೆ, ಬಸವರಾಜ ಮಾಳಗೆ, ಪಂಡಿತ ಚಿದ್ರಿ, ಮಹ್ಮದ ನಿಜಾಮೋದ್ದಿನ್, ಗುರುನಾಥ ಗಡ್ಡೆ, ದತ್ತು ಮೂಲಗೆ, ಗೀತಾ ಚಿದ್ರಿ, ಶ್ರೀಕಾಂತ್ ಸ್ವಾಮಿ, ಡಾ. ಮಕ್ಸುದ್ ಚಂದಾ, ಗೋವರ್ಧನ್ ರಾಠೋಡ್, ಪರವೇಜ್ ಕಮಲ್, ಸಂತೋಷ ಜೊಳದಾಬಕೆ, ಅಬ್ದುಲ್ ಸತ್ತಾರ ಮಂದಕನಳ್ಳಿ, ಬಸವರಾಜ ಭತಮುರಗೆ, ಎಂ.ಎ ಸಮಿ, ನಾಸೀರ ಖಾದ್ರಿ, ಜಾರ್ಜ ಫರ್ನಾಂಡಿಸ್, ಹಣಮಂತ ಮಲ್ಕಾಪೂರೆ, ಮೊಹ್ಮದ ಯುಸೂಫ, ಅಶೋಕ ಚವ್ಹಾಣ, ಅಜಮತ್ ಪಟೇಲ್, ವೈಜಿನಾಥ ಯನಗುಂದಾ, ಅನೀಲ್ ಜಾಧವ, ಮಾರುತಿ ಮಾಸ್ಟರ್, ಜಗದೀಶ ಬಿರಾದಾರ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಮುಖಂಡರು ಕಾಂಗ್ರೆಸ್, ಸಿಪಿಎಂ ಕಾರ್ಯಕರ್ತರು ಭಾಗವಹಿಸಿದ್ದರು.