ಕನ್ನಡಪ್ರಭ ವಾರ್ತೆ ಮೈಸೂರು

ದೇಶದಲ್ಲಿ ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ಸಾಕಾರಗೊಳ್ಳಬೇಕು ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ಡಾ.ಎನ್‌.ಕೆ.ಲೋಲಾಕ್ಷಿ ಅಭಿಪ್ರಾಯಪಟ್ಟರು.

ನಗರದ ಜೆ.ಎಲ್.ಬಿ ರಸ್ತೆಯ ರೋಟರಿ ಭವನದಲ್ಲಿ ಮಹರ್ಷಿ ವಾಲ್ಮೀಕಿ ಸಾಹಿತ್ಯ ಪರಿಷತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ವಾಲ್ಮೀಕಿ ಜನಾಂಗ ಸಾಂಸ್ಕೃತಿಕ ಪ್ರಜ್ಞೆ ಪುಸ್ತಕ ಬಿಡುಗಡೆಗೊಳಸಿ ಅವರು ಮಾತನಾಡಿ, ತಮಿಳುನಾಡಿನ ಹೊಸ ಸರ್ಕಾರವನ್ನ ನೋಡಿದರೆ ಒಂದು ಹೆಣ್ಣು ಮಗುವಿಗೆ ಆದಂತಹ ಅನ್ಯಾಯ ಅದಕ್ಕೆ ಅನೇಕರ ತಲೆದಂಡ ಆದದ್ದು ಮಹಿಳೆಯ ಭದ್ರತೆಗೆ ನ್ಯಾಯ ಸಿಕ್ಕಿದಂತೆ. ದೇಶದ ಬೇರೆ ಬೇರೆ ಕಡೆಯೂ ಮಹಿಳೆಯರಿಗೆ ರಕ್ಷಣೆ ಬೇಕು. ವಾಲ್ಮೀಕಿ ಸಮುದಾಯ ಒಂದು ದೊಡ್ಡ ಸಾಂಸ್ಕೃತಿಕ ಪ್ರಜ್ಞೆಯಿಂದ ಹೊರಗಿದೆ. ಅವರು ಸಾಂಸ್ಕೃತಿಕ ಪ್ರಜ್ಞೆಯ ಒಳಗಡೆಗೆ ಸೇರಬೇಕಾಗಿದೆ ಎಂದರು.

ಕೇವಲ ಇದು ವಾಲ್ಮೀಕಿಯ ಸಮುದಾಯಕ್ಕೆ ಮಾತ್ರವಲ್ಲ, ಇಡೀ ಭಾರತದ ಎಲ್ಲಾ ಜನರ ಸಾಂಸ್ಕೃತಿಕ ಪ್ರಜ್ಞೆ. ಕಾಡು ನಾಡು ಬೆಸೆಯುವ ಕಾವ್ಯ ವಾಲ್ಮೀಕಿಯದು. ವಾಲ್ಮೀಕಿ ಗುಹ, ಶಬರಿ, ಬೇಡರ ಕಣ್ಣಪ್ಪ, ಏಕಲವ್ಯ, ಕಾಡಿನ ಸಾಂಸ್ಕೃತಿಕ ಪ್ರಜ್ಞೆ ಈ ಕೃತಿಯಲ್ಲಿ ಅಡಗಿದೆ. ವಾಲ್ಮೀಕಿ ರಾಮಾಯಣ ಮತ್ತು ಜನಪದ ರಾಮಾಯಣ ತಳ ಸಮುದಾಯದ ಸಾಕ್ಷಿ ಪ್ರಜ್ಞೆ, ನಿಸರ್ಗದ ಜೊತೆ ಸದಾ ಅನುಸಂಧಾನ ಮೂಲಕ ವಾಲ್ಮೀಕಿ ತಮ್ಮ ಅನುಭವದ ಮೂಲಕ ಗ್ರಹಿಸಿಕೊಂಡಿದ್ದಾರೆ. ವಾಲ್ಮೀಕಿ ಬೆವರಿನ ರೂಪಕ ಎಂದು ಪ್ರಶಾಂತ್ ನಾಯಕರು ಹೊಸ ಆಲೋಚನ ಕ್ರಮದಲ್ಲಿ ಕಟ್ಟಿ ಕೊಟ್ಟಿದ್ದಾರೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಮಾತನಾಡಿ, ಎಲ್ಲಾ ಸಾಹಿತ್ಯದ ಆದಿ ಮಾರ್ಗಕಾರ ವಾಲ್ಮೀಕಿ. ಪ್ರಜ್ಞೆ ಇಲ್ಲದವರು ಏನನ್ನು ಮಾಡಲಾರರು. ಪ್ರತಿಮೆ ಇರುತ್ತದೆ ಆದರೆ ಪ್ರಜ್ಞೆ ಇರುವುದಿಲ್ಲ. ಪ್ರತಿಭೆಯ ಬುನಾದಿಯ ಮೇಲೆ ಪ್ರಜ್ಞೆ ಕಟ್ಟಬೇಕು. ರಾಮಾಯಣ ಬೇಕು ರಾಮ ಬೇಕು ಆದರೆ ವಾಲ್ಮೀಕಿ ಬೇಡ ಎಂದರೆ ಹೇಗೆ ಎಂದು ಪ್ರಶ್ನಿಸಿದರು.


ವ್ಯಾಸ, ಕೃಷ್ಣ, ಕಾಳಿದಾಸ ಇಂಥವರನ್ನು ಸಹಿಸಿಕೊಳ್ಳಲು ಮನಸ್ಸು ಬೇಕು. ಸಂಸ್ಕೃತ ಸಾಮಾನ್ಯ ಭಾಷೆಯಾಗಿತ್ತು. ಅದಕ್ಕೆ ಮಡಿವಂತಿಕೆ ಚೌಕಟ್ಟನ್ನು ಕಟ್ಟಿ ಅಳಿವಿನಂಚಿಗೆ ತಂದರು. ಜಗತ್ತಿನಲ್ಲೇ ಇರದ ಜ್ಞಾನ ಸಂಸ್ಕೃತ ಭಾಷೆಯಲ್ಲಿದೆ. ಬ್ರಿಟಿಷರು ನಮ್ಮ ಸಂಸ್ಕೃತ ಜ್ಞಾನವನ್ನು ತೆಗೆದುಕೊಂಡು ಜಗತ್ತಿನಲ್ಲಿ ಕೀರ್ತಿ ಪಡೆದುಕೊಂಡಿದ್ದಾಗಿ ಹೇಳಿದರು.

ವಾಲ್ಮೀಕಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಂಜುಂಡಸ್ವಾಮಿ ಹರದನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಪ್ರಶಾಂತ ನಾಯಕ್, ಕನ್ನಡ ಕಲಾ ಕೂಟದ ಅಧ್ಯಕ್ಷ ಚಂದ್ರಶೇಖರ್, ಚಾಮುಂಡಿ ಬೆಟ್ಟದ ಶ್ರೀಧರ್, ಸರ್ವೇಶ್ ಕನ್ನಂಬಾಡಿ ಕುಮಾರ್, ಉದ್ಯಮಿ ನಿಂಗರಾಜು, ವಕೀಲ ಲೋಕೇಶ್, ದೇವರಾಜ್ ಪಾಳೇಗಾರ್, ಡಾ. ಅನುಸೂಯಾ ಕೆಂಪನಹಳ್ಳಿ ಮೊದಲಾದವರು ಇದ್ದರು.