ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿ ಕೊಟ್ಟ ಪರಿಣಾಮ ದೇಶ ಅಭಿವೃದ್ಧಿಯತ್ತ ಸಾಗುವ ಜೊತೆಗೆ ಎಲ್ಲಾ ವರ್ಗಗಳಿಗೆ ನ್ಯಾಯ ಲಭಿಸುತ್ತಿದೆ ಎಂದು ವಕೀಲ ಮಹೇಂದ್ರ ತಿಳಿಸಿದರು.ನಗರದ ಮಲ್ಲಯ್ಯನಪುರ ಗ್ರಾಮದಲ್ಲಿ ಪರಿವರ್ತನಾ ಸೇವಾ ಟ್ರಸ್ಟ್ ವತಿಯಿಂದ ೭೫ನೇ ವರ್ಷದ ಗಣರಾಜ್ಯೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು
ಅಂಬೇಡ್ಕರ್ ಸಾಕಷ್ಟು ನೋವುಗಳನ್ನು ಉಂಡು ನನ್ನ ಜನ ಹಾಗೂ ಸಮುದಾಯ ಅಭಿವೃದ್ಧಿ ಹೊಂದಬೇಕು. ಅವರು ನನ್ನಂತೆ ಕಷ್ಟ ಪಡುವುದು ಬೇಡ ಎಂದು ಉನ್ನತ ಶಿಕ್ಷಣ ಪಡೆದು, ಸಂವಿಧಾನ ರಚನೆ ಮಾಡಿ. ನಮ್ಮೆಲ್ಲರಿಗೂ ಹಕ್ಕುಗಳನ್ನು ನೀಡಿದ ಫಲವಾಗಿ ಇಂದು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ. ಅವರ ಆಶಯ ಇನ್ನು ಸಹ ಈಡೇರಬೇಕಾಗಿದೆ.ಅವರು ಕೊಟ್ಟ ಸಂವಿಧಾನ ಸಮರ್ಪಕವಾಗಿ ಜಾರಿಯಾಗಿದ್ದರೆ, ಭಾರತ ದೇಶ ಅಭಿವೃದ್ಧಿಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಮೊದಲ ಪಟ್ಟಿಯಲ್ಲಿರುತ್ತಿತ್ತು. ಜಾತಿ ವ್ಯವಸ್ಥೆ ಹೋಗಿ ಎಲ್ಲರು ಸಮಾನರು ಎಂಬ ಭಾವನೆ ಮೂಡಿ, ದೇಶದ ಸಂಪತ್ತು ಎಲ್ಲರಿಗೂ ಸಹ ಸಮಾನವಾಗಿ ಹಂಚಿಕೆಯಾಗುತ್ತಿತ್ತು ಎಂದರು. ಇಂಥ ಮಹಾನಾಯಕನ ಬಗ್ಗೆ ನಮ್ಮ ಸಮುದಾಯ ಇನ್ನು ಹೆಚ್ಚಿನ ರೀತಿಯಲ್ಲಿ ತಿಳಿದುಕೊಳ್ಳಬೇಕಾಗಿದೆ. ಅವರನ್ನು ಗೌರವಿಸುವುದರೆ ಎಂದರೆ ಬೀದಿಯಲ್ಲಿ ನಿಂತು ಕೂಗುವುದಲ್ಲ. ಶಿಕ್ಷಣವನ್ನು ಪಡೆದುಕೊಳ್ಳುವಾಗ ಮೂಲಕ ಅಧಿಕಾರ ನಡೆಸುವ ಜಾಗದಲ್ಲಿ ನಾವಿರಬೇಕು.
ಮಹಿಳೆಯರಿಗೆ ಸ್ವಾತಂತ್ರ್ಯ ನೀಡುವ ಮೂಲಕ ಸ್ತ್ರೀ ಸ್ವಾತಂತ್ರ್ಯವನ್ನು ಕೊಟ್ಟರು. ಅಂಬೇಡ್ಕರ್ ಕೇವಲ ದಲಿತರ ಆಸ್ತಿಯಲ್ಲ. ಅವರು ಸಂವಿಧಾನ ದತ್ತವಾಗಿ ಎಲ್ಲಾ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ದಲಿತರಿಗೆ ಮೀಸಲಾತಿಯನ್ನು ಕಲ್ಪಿಸಿಕೊಟ್ಟರು. ಅಂಬೇಡ್ಕರ್ ಅನಾರೋಗ್ಯದ ನಡುವೆಯು ಬಹಳ ಕಷ್ಟ ಪಟ್ಟು ಸಂವಿಧಾನವನ್ನು ರಚನೆ ಮಾಡಿಕೊಟ್ಟಿದ್ದಾರೆ. ಯುವ ಪೀಳಿಗೆಗೆ ಅದನ್ನು ಉಳಿಸಿಕೊಟ್ಟು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.ಶಿಕ್ಷಕ ಮದನ್ ಮಾತನಾಡಿ, ಮಹಿಳೆಯರಿಗೆ ಶೇ. ೫೦ ರಷ್ಟು ಮೀಸಲಾತಿ ಬೇಕು ಎಂದು ಹೋರಾಟ ಮಾಡಿದವರು ಅಂಬೇಡ್ಕರ್. ಸಂವಿಧಾನ ದತ್ತವಾಗಿ ಹಿಂದು ಕೋಡ್ ಬಿಲ್ ಜಾರಿ ಮಾಡಿ, ಮಹಿಳೆಯರಿಗೆ ಎಲ್ಲಾ ರಂಗದಲ್ಲಿಯೂ ಮೀಸಲಾತಿ ಕಲ್ಪಿಸಿದ್ದರು ಎಂದರು.
ಕಾರ್ಯಕ್ರಮದಲ್ಲಿ ಶಿವಪುರ ಗ್ರಾಪಂ ಸದಸ್ಯ ಎಂ.ಸಿ. ಮಹದೇವಮ್ಮ, ಶಿವಣ್ಣ, ಶೋಭಾ, ಸಂಪತ್ತುಕುಮಾರ್, ನಾಗಯ್ಯ, ರಮೇಶ್, ಚಂದ್ರಶೇಖರ್, ಚಿಕ್ಕನಾಗಯ್ಯ, ಪತ್ರಕರ್ತ ವಿ. ಗಂಗಾಧರ್, ರಮೇಶ್, ಪರಿವರ್ತನಾ ಸೇವಾ ಟ್ರಸ್ಟ್‌ನ ಅಧ್ಯಕ್ಷ ಹರ್ಷ, ಕಾರ್ಯದರ್ಶಿ ಮಹೇಶ್, ಕಿರಣ್, ಲಿಂಗರಾಜು, ರಘು, ಶೃಂಗಾರ, ನಿಂಗರಾಜು, ಲಿಖಿತ್, ಕಿರಣ್‌ಕುಮಾರ್, ಪದಾಧಿಕಾರಿಗಳು ಹಾಗೂ ಮಲ್ಲಯ್ಯನಪುರ ಗ್ರಾಮಸ್ಥರು ಉಪಸ್ಥಿತರಿದ್ದರು. ಶಿಕ್ಷಕ ಲಿಂಗರಾಜು ಕಾರ್ಯಕ್ರಮ ನಿರೂಪಿಸಿದರು.