ಪಾಕ್‌ ವಿರುದ್ಧ ಭಾರತ ತಾಕತ್ತು ಪ್ರದರ್ಶನ ಮರೆಯುವಂತಿಲ್ಲ

| Published : Jul 27 2024, 12:52 AM IST

ಪಾಕ್‌ ವಿರುದ್ಧ ಭಾರತ ತಾಕತ್ತು ಪ್ರದರ್ಶನ ಮರೆಯುವಂತಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಯೋಧರ ಕಾರ್ಗಿಲ್ ವಿಜಯೋತ್ಸವದಲ್ಲಿ ಸಂಭ್ರಮ ಎಷ್ಟಿದೆಯೋ, ನೋವುಗಳೂ ಅಷ್ಟೇ ಇವೆ ಎಂದು ಮಾಜಿ ಸೈನಿಕ ವಾಸಪ್ಪ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಕಾರ್ಗಿಲ್ ವಿಜಯೋತ್ಸವ ಸಂಭ್ರಮಾಚರಣೆಯಲ್ಲಿ ಮಾಜಿ ಸೈನಿಕ ವಾಸಪ್ಪ ಹೇಳಿಕೆ ।

- ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಭಾ ಭವನದಲ್ಲಿ ರಕ್ತದಾನ ಶಿಬಿರ, ದಾನಿಗಳಿಗೆ ಸನ್ಮಾನ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ದೇಶದ ಯೋಧರ ಕಾರ್ಗಿಲ್ ವಿಜಯೋತ್ಸವದಲ್ಲಿ ಸಂಭ್ರಮ ಎಷ್ಟಿದೆಯೋ, ನೋವುಗಳೂ ಅಷ್ಟೇ ಇವೆ ಎಂದು ಮಾಜಿ ಸೈನಿಕ ವಾಸಪ್ಪ ಹೇಳಿದರು.

ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಭಾ ಭವನದಲ್ಲಿ ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷದ ನಿಮಿತ್ತ ಶ್ರೀ ರಾಘವೇಂದ್ರ ಸೇವಾ ಟ್ರಸ್ಟ್, ಚೇತನಾ ಟ್ರಸ್ಟ್, ದಿಡ್ಡಿ ಆಂಜನೇಯ ಸ್ವಾಮಿ ಸಂಸ್ಕೃತಪಾಠ ಶಾಲೆ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಶತೃರಾಷ್ಟ್ರದ ವಿರುದ್ಧ ಭಾರತ ಗೆದ್ದು ಜಗತ್ತಿನೆದುರು ತನ್ನ ತಾಕತ್ತು ಪ್ರದರ್ಶನ ಮಾಡಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಆದರೆ, ಇಂತಹ ಯುದ್ಧ ಸನ್ನಿವೇಶದಿಂದ ಅಪಾರ ಪ್ರಮಾಣದ ದೇಶದ ಸಂಪನ್ಮೂಲ ಮತ್ತು ಅತ್ಯಮೂಲ್ಯವಾದ ಜೀವಗಳ ಹಾನಿಯಾಗುತ್ತದೆ ಎಂಬುದನ್ನೂ ನಾವು ಮರೆಯಬಾರದು ಎಂದರು.

ಭಾರತದ ಸೈನಿಕರು ದೇಶದ ರಕ್ಷಣೆಯಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಎಂತಹ ಕಷ್ಟವಾದ ಸನ್ನಿವೇಶವನ್ನು ಎದುರಿಸುವ ಛಾತಿ ಈಗ ನಮ್ಮ ಎಲ್ಲ ಸೇನೆಗಳಿಗೂ ಇದೆ. ಭಾರತದ ಸೈನ್ಯ ಈಗ ಮತ್ತಷ್ಟು ಆಧುನೀಕರಣಗೊಂಡಿದೆ. ಕಾರ್ಗಿಲ್ ವಿಜಯೋತ್ಸವದ ಈ ಸಂದರ್ಭ ಆ ಯುದ್ಧದಲ್ಲಿ ವೀರಮರಣ ಅಪ್ಪಿದ ಮತ್ತು ಆಜೀವ ಪರ್ಯಂತ ಅಂಗವಿಕಲರಾದ ಸೈನಿಕರನ್ನು ಮತ್ತು ಯುದ್ಧದಲ್ಲಿ ಭಾಗಿಯಾದ ಸೈನಿಕರ ಹೋರಾಟವನ್ನು ನಾವು ಸ್ಮರಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಆರ್. ಮಹೇಶ್ ಮಾತನಾಡಿ, ಸೈನಿಕರು ಗಡಿಯಲ್ಲಿ ದೇಶ ಕಾಯುತ್ತಿರುವುದರಿಂದಲೇ ನಾವಿಲ್ಲಿ ನೆಮ್ಮದಿಯಿಂದ ಬದುಕುವಂತಾಗಿದೆ. ಕಾರ್ಗಿಲ್ ಯುದ್ಧದ ಸಂದರ್ಭ ದೇಶವನ್ನು ಮುನ್ನಡೆಸಿದ ಅಟಲ್‌ಜೀ ನೇತೃತ್ವ ಕೂಡ ಈ ವಿಜಯದಲ್ಲಿ ಪಾತ್ರವಹಿಸಿದೆ ಎಂದರು.

ದಿಡ್ಡಿ ಆಂಜನೇಯಸ್ವಾಮಿ ಸಂಸ್ಕೃತ ಪಾಠ ಶಾಲೆ ಮುಖ್ಯ ಶಿಕ್ಷಕ ಮನೋಹರ ಜೋಯಿಸ್ ಮಾತನಾಡಿ, ರಕ್ತದಾನದ ಮೂಲಕ ದೇಶದ ಸೈನಿಕರ ವಿಜಯೋತ್ಸವ ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಸದ್ಯ ಡೆಂಘೀ ಜ್ವರ ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ರಕ್ತದಾನದ ಅಗತ್ಯತೆ ಮನಗಂಡು ಈ ಸೇವಾ ಕಾರ್ಯ ಆಯೋಜಿಸಿದೆ ಎಂದರು.

ಶ್ರೀ ರಾಘವೇಂದ್ರ ಸೇವಾ ಟ್ರಸ್ಟ್‌ನ ವಾದಿರಾಜ ಕಮರೂರು, ಸಿ.ಸತ್ಯನಾರಾಯಣ ರಾವ್, ಗುರುದತ್ತ, ಸುಧೀಂದ್ರ, ಮಧ್ವೇಶ, ರಾಘವೇಂದ್ರ ನಾಡಿಗ್, ಸ್ವಯಂ ಸೇವಕರಾದ ಗುರುಶಂಕರ, ಭರತ, ತೇಜಸ್‌ಕುಮಾರ್, ಬಿಜೆಪಿ ಮುಖಂಡರಾದ ಎ.ಬಿ. ಹನುಮಂತಪ್ಪ, ಕೆ.ವಿ.ಚನ್ನಪ್ಪ, ಯುವಕರಾದ ಅವಿನಾಶ, ಅರವಿಂದ ಮೊದಲಾದವರಿದ್ದರು.

ಇದೇ ಸಂದರ್ಭದಲ್ಲಿ ಹೊನ್ನಾಳಿ ತಾಲೂಕು ಮಾಜಿ ಸೈನಿಕರ ಸಂಘದ ಸದಸ್ಯರು ಆಗಮಿಸಿ ಯುವಕರ ಸೇವಾಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸೈನಿಕರನ್ನು ಜಯಘೋಷದೊಂದಿಗೆ ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು.

ಶಿವಮೊಗ್ಗ ರೋಟರಿ ರಕ್ತದಾನ ಕೇಂದ್ರದ ಸಿಬ್ಬಂದಿ ಹಾಜರಿದ್ದು ರಕ್ತದಾನಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು. ಶಿಬಿರದಲ್ಲಿ ಒಟ್ಟು 47 ಯೂನಿಟ್ ರಕ್ತ ಸಂಗ್ರಹವಾಯಿತು. ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಣೆಯಿಂದ ಸತತವಾಗಿ ಭಾಗಿಯಾಗುತ್ತಿರುವ ಹರೀಶ್ ಅಣ್ಣಿಗೇರಿ ದಂಪತಿಗೆ ರೋಟರಿ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.

- - - -26ಎಚ್.ಎಲ್.ಐ3:

ಕಾರ್ಗಿಲ್ ವಿಜಯೋತ್ಸವ ಅಂಗವಾಗಿಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮಠದ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಶಿಬಿರದಲ್ಲಿ ರಕ್ತದಾನ ಮಾಡಿದ ದಾನಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.