ಭಾರತವನ್ನು ವಿಶ್ವದ ಶ್ರೇಷ್ಠ ರಾಷ್ಟ್ರವಾಗಿಸಬೇಕು: ಸಹಕಾರ ಸಚಿವ ರಾಜಣ್ಣ

| Published : Jan 27 2024, 01:16 AM IST

ಭಾರತವನ್ನು ವಿಶ್ವದ ಶ್ರೇಷ್ಠ ರಾಷ್ಟ್ರವಾಗಿಸಬೇಕು: ಸಹಕಾರ ಸಚಿವ ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಐಕ್ಯತೆಯೊಂದಿಗೆ ದೇಶದ ಸಮಗ್ರತೆ ಉಳಿಸುತ್ತಾ ಭಾರತವನ್ನು ವಿಶ್ವದ ಶ್ರೇಷ್ಠ, ಬಲಿಷ್ಠ ರಾಷ್ಟ್ರವಾಗಿಸಲು ಶ್ರಮಿಸಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಅಭಿಪ್ರಾಯಪಟ್ಟರು. ಹಾಸನ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

೭೫ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಹೇಳಿಕೆ । ಭಾರತ ಜಗತ್ತಿನಲ್ಲಿ ಶ್ರೀಮಂತ ಸಂಸ್ಕೃತಿ ಹೊಂದಿದೆ ಕನ್ನಡಪ್ರಭ ವಾರ್ತೆ ಹಾಸನ

ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ಜಗತ್ತಿನ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರ. ಭಾಷೆ, ಬಾಳ್ವೆ, ಉಡುಗೆ ತೊಡುಗೆಯಲ್ಲಿ ಎಷ್ಟು ಭಿನ್ನತೆ ಇದ್ದರೂ ಭಾವನಾತ್ಮಕವಾಗಿ ನಾವೆಲ್ಲರೂ ಒಂದಾಗಿ ಸಾಗುತ್ತಿದ್ದೇವೆ. ಮುಂದೆಯೂ ಹೀಗೆ ಐಕ್ಯತೆಯೊಂದಿಗೆ ದೇಶದ ಸಮಗ್ರತೆ ಉಳಿಸುತ್ತಾ ಭಾರತವನ್ನು ವಿಶ್ವದ ಶ್ರೇಷ್ಠ, ಬಲಿಷ್ಠ ರಾಷ್ಟ್ರವಾಗಿಸಲು ಶ್ರಮಿಸಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಹಾಕಿ ಮೈದಾನದಲ್ಲಿ ಶುಕ್ರವಾರ ನಡೆದ ೭೫ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಮಹಾತ್ಮ ಗಾಂಧೀಜಿ, ಬಾಲಗಂಗಾಧರ ತಿಲಕ್, ಲಾಲ್ ಬಹುದ್ದೂರ್ ಶಾಸ್ತ್ರಿ, ವೀರ ಸಾವರ್ಕರ್, ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರಬೋಸ್, ಸರೋಜಿನಿ ನಾಯ್ಡು, ಜವಾಹರ್‌ಲಾಲ್ ನೆಹರು ಸೇರಿದಂತೆ ನೂರಾರು ನೇತಾರರ ನೇತೃತ್ವದಲ್ಲಿ ಲಕ್ಷಾಂತರ ಚಳುವಳಿಗಾರರು ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಭಾರತದಲ್ಲಿ ಸಂವಿಧಾನವೇ ಸರ್ವೊಚ್ಚವಾದುದು, ನಮ್ಮ ಸಂವಿಧಾನದ ಮೂಲ ತತ್ವಗಳು, ಆಶಯಗಳು ಮತ್ತು ಸಿದ್ಧಾಂತಗಳನ್ನು ಸಾರಾಂಶ ರೂಪದಲ್ಲಿ ತಿಳಿಸುವ ಸಂವಿಧಾನದ ಪ್ರಸ್ತಾವನೆಯನ್ನು ಪ್ರತಿ ಭಾರತೀಯರು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.

ಸಂವಿಧಾನದ ಆಶಯಗಳನ್ನು ಜನ ಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರಾಜ್ಯದ ೩೧ ಜಿಲ್ಲೆಗಳಲ್ಲಿ ಜ.೨೬ ರಿಂದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಿದೆ. ಅದರಂತೆ ಹಾಸನ ಜಿಲ್ಲೆಯಲ್ಲಿಯೂ ಇಂದು ಜಾಥಾಕ್ಕೆ ಚಾಲನೆ ನೀಡಲಾಗುತ್ತಿದೆ. ಸಂವಿಧಾನದಲ್ಲಿರುವಂತೆ ಮೂಲಭೂತ ಹಕ್ಕು, ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲ ಉದ್ದೇಶದಿಂದ ಈ ಜಾಥಾ ಏರ್ಪಡಿಸಲಾಗಿದೆ. ಜಿಲ್ಲೆಯ ಎಲ್ಲಾ ಏಳು ವಿಧಾನಸಭಾ ಕ್ಷೇತ್ರದ ಶಾಸಕರು ತಮ್ಮ ಕ್ಷೇತ್ರದಲ್ಲಿ ಜಾಥಾ ರಥವನ್ನು ಬರಮಾಡಿಕೊಂಡು ಸಂವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ತಮ್ಮೆಲ್ಲರ ಸಹಕಾರವನ್ನು ಕೋರಿದೆ. ಸಂವಿಧಾನ ಜಾಗೃತಿ ಜಾಥಾವು ಜ.೨೬ ರಿಂದ ಫೆ.೨೩ ರವರೆಗೆ ಜಿಲ್ಲೆಯ ೨೬೪ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ ಅರಿವು ಮೂಡಿಸಲಿದೆ ಎಂದರು.

‘ನಮ್ಮ ಸರ್ಕಾರ ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲು ಪ್ರಮುಖ ಆದ್ಯತೆ ನೀಡಿ ಎಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಮಾಡಲಾಗಿದೆ. ಅನ್ನಭಾಗ್ಯ ಪ್ರತಿಯೊಬ್ಬರು ಆಹಾರದ ಕೊರತೆ ಇಲ್ಲದೆ ಪ್ರತಿ ದಿನ ಮೂರು ಹೊತ್ತು ಆಹಾರವನ್ನು ಸೇವಿಸಬೇಕು ಎಂಬ ದೃಷ್ಟಿಯಿಂದ ಸರ್ಕಾರ ಬಿ.ಪಿ.ಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಪ್ರತಿ ವ್ಯಕ್ತಿಗೆ ಪ್ರತಿ ಮಾಹೆ ೧೦ ಕೆ.ಜಿ ಅಕ್ಕಿಯನ್ನು ನೀಡಲು ತೀರ್ಮಾನಿಸಿ ಅನ್ನಭಾಗ್ಯ ಯೋಜನೆಯನ್ನು ರೂಪಿಸಲಾಗಿದೆ’ ಎಂದು ಹೇಳಿದರು.

ನಿರುದ್ಯೋಗ ಸಮಯದಲ್ಲಿ ಯುವಕರಲ್ಲಿ ಸ್ಫೂರ್ತಿ ತುಂಬಿ ಉದ್ಯೋಗ ಹುಡುಕಲು ಅನುಕೂಲವಾಗುವಂತೆ ೨೦೨೨-೨೩ ನೇ ಸಾಲಿನಲ್ಲಿ ಉತ್ತೀರ್ಣರಾಗಿ ಹೊರಬಂದಿರುವ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ೧೫೦೦ ರು ಮತ್ತು ಪದವಿ ವಿದ್ಯಾರ್ಥಿಗಳಿಗೆ ೩೦೦೦ ರು. ಹಣವನ್ನು ೬ ತಿಂಗಳವರೆಗೆ ನೀಡಲಾಗುವುದು. ಸಿದ್ದರಾಮಯ್ಯ ನವರ ನೇತೃತ್ವದ ಸರ್ಕಾರ ಕರ್ನಾಟಕದ ಸರ್ವತೋಮುಖ ಅಭಿವೃದ್ದಿಗೆ ದೃಢ ಸಂಕಲ್ಪ ಮಾಡಿದೆ ಎಂದರು.

ತೆರೆದ ವಾಹನದಲ್ಲಿ ತೆರಳಿ ವಿವಿಧ ಪೊಲೀಸ್ ತುಕಡಿ, ಎನ್‌ಸಿಸಿ, ಸೇವಾದಳ, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ೨೮ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ನಂತರ ನಡೆದ ಆಕರ್ಷಕ ಪಥ ಸಂಚಲನ ಎಲ್ಲರ ಗಮನ ಸೆಳೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹತ್ತಾರು ಗಣ್ಯರಿಗೆ ಗಣರಾಜ್ಯೋತ್ಸವ ಪ್ರಶಸ್ತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ, ಅಪರ ಜಿಲ್ಲಾಧಿಕಾರಿ ಶಾಂತಲಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವೆಂಕಟೇಶ್ ನಾಯ್ಡು, ಉಪ ವಿಭಾಗಾಧಿಕಾರಿ ಮಾರುತಿ, ತಹಸೀಲ್ದಾರ್ ಶ್ವೇತಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ಇದ್ದರು.ಹಾಸನ ನಗರದ ಹಾಕಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 75 ನೇ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಧ್ವಜಾರೋಹಣ ನೆರವೇರಿಸಿದರು.