ಸಾರಾಂಶ
ಧ್ವಜ ಇಳಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಪಟ್ಟು. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಏಕಾಏಕಿ ಪ್ರತಿಭಟನೆಯಿಂದ ಕೆಂಭಾವಿ-ಹುಣಸಗಿ ರಸ್ತೆಯ ಮೇಲೆ ಕೆಲಕಾಲ ವಾಹನಗಳು ಸರದಿ ಸಾಲಿನಲ್ಲಿ ನಿಂತು ಟ್ರಾಫಿಕ್ ಸಮಸ್ಯೆ ಉಂಟಾಯಿತು.
ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಕೆಂಭಾವಿ ಹೋಬಳಿ ಸಮೀಪದ ಮುದನೂರ ಗ್ರಾಮದ ದೇವರ ದಾಸಿಮಯ್ಯನ ವೃತ್ತಕ್ಕೆ ಗುರುವಾರ ಮಧ್ಯರಾತ್ರಿ ನೀಲಿ ಧ್ವಜ ಕಟ್ಟಿದ್ದರಿಂದ ಶುಕ್ರವಾರ ಬೆಳಗ್ಗೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.ಕೆಂಭಾವಿ-ಹುಣಸಗಿ ಮುಖ್ಯ ರಸ್ತೆಯ ಮುದನೂರ ಕ್ರಾಸ್ ಬಳಿ ಇರುವ ದೇವರ ದಾಸಿಮಯ್ಯನವರ ವೃತ್ತಕ್ಕೆ ಕಿಡಿಗೇಡಿಗಳು ನೀಲಿ ಧ್ವಜ ಕಟ್ಟಿದ್ದನ್ನು ಕಂಡ ಮುದನೂರ ಬಿ ಹಾಗೂ ಮುದನೂರ ಕೆ. ಗ್ರಾಮದ ದಾಸೀಮಯ್ಯ ಭಕ್ತರು ಮುಂಜಾನೆಯಿಂದ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖಂಡರು ಪ್ರತಿಭಟನೆಯಲ್ಲಿ ಮಾತನಾಡಿ, 11ನೇ ಶತಮಾನದ ಮಹಾನ್ ಶರಣ ದಾಸಿಮಯ್ಯನವರ ಪುಣ್ಯ ಕ್ಷೇತ್ರವಾಗಿದೆ. ಈ ಗ್ರಾಮದಲ್ಲಿ ಇಲ್ಲಿಯವರೆಗೂ ಎಲ್ಲರೂ ಒಗಟ್ಟಾಗಿ ಸೌಹಾರ್ದತೆಯಿಂದ ಜೀವಿಸುತ್ತಿದ್ದಾರೆ. ಪ್ರತಿ ವರ್ಷ ರಾಷ್ಟ್ರೀಯ ಹಬ್ಬಗಳಂದು ಗ್ರಾಮದ ಪ್ರತಿಯೊಂದು ವೃತ್ತಗಳಿಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಆಚರಿಸುತ್ತಿದ್ದೇವೆ. ಆದರೆ, ಇದನ್ನು ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ದಾಸಿಮಯ್ಯನವರ ಭಾವಚಿತ್ರದ ಮೇಲೆ ಕಾಲಿಟ್ಟು ನೀಲಿ ಧ್ವಜ ಕಟ್ಟಿದ್ದು ತೀವ್ರ ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.ಘಟನೆ ಸುದ್ದಿ ತಿಳಿಯುತ್ತಲೆ ಸ್ಥಳಕ್ಕಾಗಮಿಸಿದ ಸಿಪಿಐ ಸಚಿನ್ ಚಲುವಾದಿ ಹಾಗೂ ಪಿಎಸ್‌ಐ ರಾಜಶೇಖರ ರಾಠೋಡ ಅವರು ಪ್ರತಿಭಟನಾ ನಿರತರೊಂದಿಗೆ ಕೆಲಕಾಲ ಮಾತುಕತೆ ನಡೆಸಿ ನೀಲಿ ಧ್ವಜ ಕಟ್ಟಿದ ಕಿಡಗೇಡಿಗಳನ್ನು ಶೀಘ್ರವೆ ಬಂಧಿಸಲಾಗುವುದು ಎಂದು ಮನವೊಲಿಸಿದರೂ ಸಂಧಾನ ಫಲಿಸದೆ ಧ್ವಜ ಕಟ್ಟಿದ ಕಿಡಿಗೇಡಿಯೆ ಬಂದು ಧ್ವಜ ಇಳಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂಬುದಾಗಿ ಪಟ್ಟುಹಿಡಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ವಿವಿಧ ದಲಿತ ಸಂಘಟನೆಯ ಮುಖಂಡರು ದೇವರ ದಾಸಿಮಯ್ಯ ಎಲ್ಲ ಸಮಾಜದ ಪೂಜ್ಯನೀಯ ವ್ಯಕ್ತಯಾಗಿದ್ದಾರೆ. ಎಲ್ಲರೂ ಗೌರವದಿಂದ ಕಾಣಬೇಕು. ಈ ಘಟನೆಯ ಬಗ್ಗೆ ನಾವೆಲ್ಲರೂ ಕ್ಷಮೆ ಕೇಳುವುದಾಗಿ ಹೇಳಿದ ನಂತರ ಎಲ್ಲರ ಸಮ್ಮುಖದಲ್ಲಿ ನೀಲಿ ಧ್ವಜ ಇಳಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.ಸುಬ್ಬಣ್ಣ ಚೌಧರಿ, ಶಾಂತರೆಡ್ಡಿ ಚೌಧರಿ, ಕೃಷ್ಣಾರೆಡ್ಡಿ, ಮಲ್ಲರೆಡ್ಡಿ ಯಡಳ್ಳಿ, ಹಣಮಂತರೆಡಡಿ ಚೌಧರಿ, ಯಂಕಾರೆಡ್ಡಿ ಕರಡಕಲ್, ದಲಿತ ಮುಖಂಡರಾದ ಮಡಿವಾಳಪ್ಪ ಕಿರದಳ್ಳಿ, ಲಾಲಪ್ಪ ಆಲ್ಹಾಳ, ಶಿವಶರಣ ನಾಗರೆಡ್ಡಿ ಸೇರಿದಂತೆ ಇತರರಿದ್ದರು.
ಏಕಾಏಕಿ ಪ್ರತಿಭಟನೆಯಿಂದ ಕೆಂಭಾವಿ-ಹುಣಸಗಿ ರಸ್ತೆಯ ಮೇಲೆ ಕೆಲಕಾಲ ವಾಹನಗಳು ಸರದಿ ಸಾಲಿನಲ್ಲಿ ನಿಂತು ಟ್ರಾಫಿಕ್ ಸಮಸ್ಯೆ ಉಂಟಾಯಿತು. ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರಿಂದ ಶಾಲಾ ವಾಹನ, ಬಸ್‌ಗಳು, ಖಾಸಗಿ ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.