ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ 75ನೇ ಗಣರಾಜ್ಯೋತ್ಸವ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ತಹಸೀಲ್ದಾರ್ ಜಯಪ್ರಕಾಶ್ ರವರು ಧ್ವಜಾರೋಹಣ ನೆರವೇರಿಸಿದರು.ಶಾಸಕ ಎ.ಆರ್.ಕೃಷ್ಣಮೂರ್ತಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಸ್ತ ಜನತೆಗೆ ಶುಭಾಶಯ ಕೋರಿ ಮಾತನಾಡಿ, ಭಾರತ ವಿಶ್ವದಲ್ಲಿಯೇ ಮಾದರಿ ರಾಷ್ಟ್ರವಾಗಿದೆ. ಅನೇಕ ಸಂಸ್ಕೃತಿ, ಧರ್ಮ, ಭಾಷೆಗಳನ್ನು ಹಾಗೂ ವೈವಿಧ್ಯತೆಯಲ್ಲಿಯೂ ಏಕತೆಯನ್ನು ಹೊಂದಿರುವಂತಹ ರಾಷ್ಟ್ರವಾಗಿದೆ. ಈ ಏಕತೆ ಕಾಣಲು ನಮ್ಮ ಸಂವಿಧಾನ ಕಾರಣ. ಸಂವಿಧಾನವೆಂದರೆ ನೀತಿ ನಿಯಮಗಳ ಸಂಗ್ರಹವೆಂದು ಕರೆಯಲಾಗುತ್ತದೆ. ಭಾರತದ ಅಖಂಡತೆಯನ್ನು ಸಂವಿಧಾನ ಚೌಕಟ್ಟಿನಲ್ಲಿ ಒಂದೂಗೂಡಿಸಿದ್ದು ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್. ವಿವಿಧ ರಾಷ್ಟ್ರಗಳ ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿ ಈ ಬಹು ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರಕ್ಕೆ ಹೊಂದುವಂತಹ ಬೃಹತ್ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ. ಸಂವಿಧಾನದಡಿಯಲ್ಲಿ ಸರ್ವರು ಸಮಾನರು, ಪ್ರಜೆಗಳು ಸ್ವಾವಲಂಬಿಯಾಗಿ, ಸ್ವಾಭಿಮಾನದಿಂದ ಬದುಕು ಸಾಗಿಸಿ ಅಂತ ತಿಳಿಸಿದ್ದಾರೆ. ಮೂಲ ಸಂವಿಧಾನದಲ್ಲಿ 395 ವಿಧಿಗಳು, 8 ಅನುಸೂಚಿ, 22 ಭಾಗಗಳನ್ನು ಒಳಗೊಂಡಿದೆ. ಈ ವಿಶ್ವದಲ್ಲಿಯೇ ನಮ್ಮ ಸಂವಿಧಾನ ಬೃಹತ್ ಸಂವಿಧಾನವಾಗಿದೆ ಹಾಗೂ ಮಾದರಿಯಾಗಿದ್ದು ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವಂತೆ ಜೀವನ ನಡೆಸಬೇಕಾಗಿದೆ. ಪ್ರತಿಯೊಬ್ಬ ನಾಗರೀಕರು ಸಂವಿಧಾನದ ಆಶಯವನ್ನು ತಿಳಿದುಕೊಳ್ಳಬೇಕು ಎಂದರು. ಸಂವಿಧಾನವು ಈ ದೇಶದ ಮೂಲಭೂತ ಕಾನೂನಾಗಿದ್ದು ಅದನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಶತಮಾನಗಳಿಂದಲೂ ಶೋಷಣೆಗೆ ಒಳಗಾಗಿದ್ದ ಮಹಿಳೆಯರನ್ನು ಸಂವಿಧಾನದಡಿಯಲ್ಲಿ ಸ್ವಾವಲಂಬಿಯಾಗಿ ಬದುಕುವುದನ್ನು ತೋರಿಸಿಕೊಟ್ಟವರು ಅಂಬೇಡ್ಕರ್ ಎಂದರು. ಜ.26, 1950 ರಂದು ನಮ್ಮ ಸಂವಿಧಾನ ಅಧಿಕೃತವಾಗಿ ಜಾರಿಯಾಯಿತು. ಈ ಹಬ್ಬವನ್ನು ಪ್ರತಿ ಮನೆಯಲ್ಲಿಯೂ ಆಚರಿಸಬೇಕು ಎಂದು ತಿಳಿಸಿದರು. 75ನೇ ಗಣರಾಜೋತ್ಸವನ್ನು ಕೇಂದ್ರ ಸರ್ಕಾರ ಅರ್ಥಪೂರ್ಣವಾಗಿ ಆಚರಿಸದೆ ಆಯೋಧ್ಯೆಯಲ್ಲಿ ರಾಮನ ಮೂರ್ತಿ ಸ್ಥಾಪನೆಗೆ ಹೆಚ್ಚಿನ ಗಮನಹರಿಸಿದ್ದಾರೆ. ಅದೇ ನಮ್ಮ ರಾಜ್ಯ ಸರ್ಕಾರ 75ನೇ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ಸಂವಿಧಾನ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ ಎಂದು ಮಾತನಾಡಿದರು.ಮುಖ್ಯ ಭಾಷಣಕಾರರಾಗಿ ಉಪನ್ಯಾಸಕಿ ಶ್ವೇತಾ ಕೆ.ರವರು ಗಣರಾಜ್ಯೋತ್ಸವದ ಬಗ್ಗೆ ಅರ್ಥಪೂರ್ಣವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಜಯಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ಸಮಾಜ ಕಲ್ಯಾಣ ಅಧಿಕಾರಿ ರಾಜೇಶ್, ಸಿಡಿಪಿಒ ಸಕಲೇಶ್, ಪಟ್ಟಣ ಪಂಚಾಯತಿ ಸದಸ್ಯರಾದ ಶಾಂತಮ್ಮ ಲಿಂಗರಾಜು, ಲಕ್ಷ್ಮೀ, ಮಹೇಶ್,ಮಹದೇವನಾಯಕ, ಪಪಂ ಮುಖ್ಯಾಧಿಕಾರಿ ಮಹೇಶ್ ಕುಮಾರ್ ,ಹಾಗೂ ವಿವಿಧ ಇಲಾಖೆಯ ಮುಖ್ಯಸ್ಥರು ಹಾಗೂ ಇತರರು ಹಾಜರಿದ್ದರು.