ಗುರುವಿನ ಸ್ಥಾನ ಜಗತ್ತಿಗೆ ತೋರಿಸಿದ್ದೇ ಭಾರತ: ಸದಾಶಿವ ಸ್ವಾಮೀಜಿ

| Published : Jul 11 2025, 12:32 AM IST

ಗುರುವಿನ ಸ್ಥಾನ ಜಗತ್ತಿಗೆ ತೋರಿಸಿದ್ದೇ ಭಾರತ: ಸದಾಶಿವ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಹೇಗೆ ನಮ್ಮ ಕಣ್ಣಿಗೆ ಶಿವ ಕಾಣುವುದಿಲ್ಲವೋ ಶಿವನ ಮಾರ್ಗವನ್ನು ಬೋಧಿಸುವಂತಹ ಶಕ್ತಿ ಗುರುವಿನಲ್ಲಿ ಇರುವುದರಿಂದ ನಮಗೆ ಗುರುಗಳು ಬಹಳ ಮುಖ್ಯವಾಗಿದ್ದಾರೆ.

ಹಾವೇರಿ: ಗುರುವಿಗೂ ವಿಶೇಷ ಸ್ಥಾನವಿದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಏಕೈಕ ದೇಶ ಭಾರತವಾಗಿದ್ದು, ಗುರುಪೂರ್ಣಿಮೆ ಎಂಬುದು ಅಜ್ಞಾನದಿಂದ ಸುಜ್ಞಾನದಡೆಗೆ ಕೊಂಡೊಯ್ಯುವ ಗುರುವಿಗೆ ಭಕ್ತಿ ಸಮರ್ಪಣೆ ಮಾಡುವ ಶುಭ ಗಳಿಗೆಯಾಗಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ತಿಳಿಸಿದರು. ಸ್ಥಳೀಯ ಹುಕ್ಕೇರಿಮಠದ ದಾಸೋಹ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವೇದ, ಉಪನಿಷತ್ ಕಾಲದಿಂದಲೂ ಗುರುಗಳಿಗೆ ಬಹಳ ವಿಶೇಷವಾದ ಗೌರವವನ್ನು ನಾಡಿನ ಜನತೆ ನೀಡುತ್ತಾ ಬಂದಿದ್ದಾರೆ. ಲೌಕಿಕವಾದ ಶಿಕ್ಷಣವನ್ನು ನೀಡುವ ಗುರುಗಳು ಒಂದು ಅಕ್ಷರವನ್ನು ಕಲಿಸಿದರೂ ಅವರು ಗುರುಗಳೇ, ಇಂತಹ ಗುರುಗಳಿಗೆ ಗೌರವ ಸಲ್ಲಿಸುವ ವ್ಯವಸ್ಥೆ ಕಾಣುತ್ತಿದ್ದೇವೆ. ಶಿವನನ್ನು ಕಾಣಲು ಸಾಧ್ಯವಿಲ್ಲ. ಆದರೆ ಶಿವನನ್ನು ತೋರಿಸಲು ಸಮರ್ಥ ಗುರು ಬೇಕು. ಹೇಗೆ ನಮ್ಮ ಕಣ್ಣಿಗೆ ಶಿವ ಕಾಣುವುದಿಲ್ಲವೋ ಶಿವನ ಮಾರ್ಗವನ್ನು ಬೋಧಿಸುವಂತಹ ಶಕ್ತಿ ಗುರುವಿನಲ್ಲಿ ಇರುವುದರಿಂದ ನಮಗೆ ಗುರುಗಳು ಬಹಳ ಮುಖ್ಯವಾಗಿದ್ದಾರೆ ಎಂದರು. ನಡೆಯುವ ದಾರಿಯಲ್ಲಿ ಕಲ್ಲು, ಮುಳ್ಳುಗಳು ಎದುರಾದಂತೆ, ಪ್ರತಿಯೊಬ್ಬರ ಜೀವನದಲ್ಲಿ ಕಷ್ಟಗಳು ಎದುರಾಗುವುದು ಸಾಮಾನ್ಯ. ಸಮಸ್ಯೆಗಳು ಎದುರಾದಾಗ ಅವುಗಳನ್ನು ಸಮಾಧಾನವಾಗಿ ಎದುರಿಸುವ ಶಕ್ತಿ ಬಂದರೆ ನಮ್ಮ ಬದುಕು ಸಾರ್ಥಕವಾಗುತ್ತದೆ. ಅಂತಹ ಸಮಸ್ಯೆಗಳು ಬಂದಾಗ ಸರಿಯಾದ ಮಾರ್ಗದರ್ಶನ ನೀಡುವ ಶಕ್ತಿ ಸದ್ಗುರುವಿನಲ್ಲಿ ಮಾತ್ರ ಇರುತ್ತದೆ. ಹೀಗಾಗಿ ಗುರುವಿನ ಮಾರ್ಗದರ್ಶನ ಎಲ್ಲರಿಗೂ ಅವಶ್ಯವಿದೆ ಎಂದರು.ಕತ್ತಲೆಯನ್ನು ಹೊಡೆದೋಡಿಸುವ ಶಕ್ತಿ ಒಂದು ಸಣ್ಣ ಹಣತೆಗೆ ಇರುತ್ತದೆ. ಮನುಷ್ಯನಿಗೆ ಅಜ್ಞಾನ ಎಂಬ ಕತ್ತಲೆ ಆವರಿಸಿದಾಗ ಆತನಿಗೆ ಬೆಳಕು ನೀಡುವ ಶಕ್ತಿ ಗುರುಗಳಲ್ಲಿ ಮಾತ್ರ ಇರುತ್ತದೆ. ದೈವ ನಮಗೆ ನೇರವಾಗಿ ಕಾಣದಿರಬಹುದು ಆದರೆ, ದೈವದ ಸ್ವರೂಪದ ಶಕ್ತಿಯನ್ನು ಗುರುಗಳಲ್ಲಿ ಕಾಣಬಹುದು. ಗುರುಗಳು ಕಷ್ಟಗಳಿಗೆ ಸ್ಪಂದಿಸುತ್ತಾರೆ, ಸಮಸ್ಯೆಗಳಿಗೆ ಸಮಾಧಾನ ಹೇಳುತ್ತಾರೆ, ಏನೇ ಸಮಸ್ಯೆಗಳು ಎದುರಾದರೂ ಗುರುವಿನ ಮಾರ್ಗದರ್ಶನದಲ್ಲಿ ನಡೆದರೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು.ಈ ವೇಳೆ ಶ್ರೀಮಠದ ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.