ಸಾರಾಂಶ
2047ಕ್ಕೆ ಭಾರತ ವಿಶ್ವದ ನಂಬರ್ ಒನ್ ದೇಶ ಆಗಬೇಕೆಂದರೆ ವಿದೇಶಿ ವಸ್ತುಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ, ಸ್ವದೇಶಿ ವಸ್ತುಗಳನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭವ್ಯ ಭಾರತ, ಆತ್ಮನಿರ್ಭರ, ನಶಾ ಮುಕ್ತ ಭಾರತ ಮಾಡುತ್ತೇವೆ ಎಂದು ಸಂಕಲ್ಪ ಮಾಡೋಣ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ: 2047ಕ್ಕೆ ಭಾರತ ವಿಶ್ವದ ನಂಬರ್ ಒನ್ ದೇಶ ಆಗಬೇಕೆಂದರೆ ವಿದೇಶಿ ವಸ್ತುಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ, ಸ್ವದೇಶಿ ವಸ್ತುಗಳನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭವ್ಯ ಭಾರತ, ಆತ್ಮನಿರ್ಭರ, ನಶಾ ಮುಕ್ತ ಭಾರತ ಮಾಡುತ್ತೇವೆ ಎಂದು ಸಂಕಲ್ಪ ಮಾಡೋಣ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಎಂ.ಜಿ. ರಸ್ತೆಯಲ್ಲಿ ಶನಿವಾರ ಬೆಳಗ್ಗೆ ನಶೆ ಮುಕ್ತ ಭಾರತ ಅಂಗವಾಗಿ ಬಿಜೆಪಿ ಆಯೋಜಿಸಿದ್ದ ನಮೋ ಯುವ ರನ್ ಮ್ಯಾರಾಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಯುವಕರಲ್ಲಿ ದೇಶ ಪ್ರೇಮ, ಜಾಗೃತಿ ಮೂಡಿಸಬೇಕು. ಯುವಕರು ತಮ್ಮ ಬದುಕನ್ನು ಅತ್ಯಂತ ಯಶಸ್ವಿಯಾಗಿ ತತ್ವನಿಷ್ಠೆಯಿಂದ ಬದುಕಬೇಕೆನ್ನುವುದು ಪ್ರಧಾನಿಯವರ ಬಯಕೆ. ಅದಕ್ಕಾಗಿ ಎಲ್ಲ ಕಾರ್ಯಕ್ರಮಗಳಲ್ಲಿ ಯುವಕರನ್ನು ಜೋಡಿಸಿಕೊಂಡಿದ್ದಾರೆ. ಉದಾಹರಣೆಗೆ ಸ್ಟಾರ್ಟ್ ಆಪ್‌ನಲ್ಲಿ ಯುವಕರಿಗೆ ಅವಕಾಶ ಕಲ್ಪಿಸಿದ್ದಾರೆ. ಯಾವ ಸರ್ಕಾರಗಳು ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಪ್ರಧಾನಿ ಮೋದಿ ಯುವಕರ ಭಾವನೆ ಅರ್ಥ ಮಾಡಿಕೊಂಡು ಖೇಲೊ ಇಂಡಿಯಾ, ಫಿಟ್ ಇಂಡಿಯಾ ಅಂದರು. ಒಲಿಂಪಿಕ್ ಬಂದಾಗ ಜೀತೋ ಇಂಡಿಯಾ ಎಂದು ಹೇಳಿ ಯುವಕರಲ್ಲಿ ಉತ್ಸಾಹ ತುಂಬಿದರು.ಇಡಿ ವಿಶ್ವದಲ್ಲಿ ಯಾರದಾದರೂ ಮಾತು ಕೇಳಿದರೆ ಅದು ಮೋದಿಯವರ ಮಾತು. ಕೆಲವರು ನಮ್ಮ ದೇಶವನ್ನು ಒಡೆಯುವ ಮಾತನಾಡುತ್ತಾರೆ. ಹೊರ ದೇಶಕ್ಕೆ ಹೋದಾಗ ನಮ್ಮ ದೇಶದ ಪ್ರಜಾಪ್ರಭುತ್ವದ ಬಗ್ಗೆ ತುಚ್ಚವಾಗಿ ಮಾತನಾಡುತ್ತಾರೆ. ಆದ್ದರಿಂದ ನಮ್ಮ ಯುವಕರು ಜಾಗೃತರಾಗಿರಬೇಕು. ಪ್ರಧಾನಮಂತ್ರಿಯವರನ್ನು ನಿಮ್ಮ ಧರ್ಮ ಯಾವುದು ಎಂದು ಕೇಳಿದಾಗ ಸಂವಿಧಾನವೇ ನಮ್ಮ ಧರ್ಮ ಎಂದು ಹೇಳಿದರು. 25 ಕೋಟಿ ಜನರನ್ನು ಬಡತನದಿಂದ ಮುಕ್ತ ಮಾಡಿದ್ದು ವಿಶ್ವ ದಾಖಲೆಯಾಗಿದೆ ಎಂದರು.ಸ್ವದೇಶಿ ವಸ್ತುಗಳಿಗೆ ಆದ್ಯತೆ: ಭಾರತೀಯರಿಂದ ಭಾರತೀಯರಿಗೋಸ್ಕರ ಉತ್ಪಾದನೆಯಾದ ವಸ್ತುಗಳನ್ನು ಬಳಸಬೇಕು. ವಿದೇಶಿ ವ್ಯಾಮೋಹ ಕಡಿಮೆ ಮಾಡಬೇಕು. ನಾನು ಗೃಹ ಸಚಿವನಾಗಿದ್ದಾಗ ಡ್ರಗ್ಸ್ ವಿರುದ್ಧ ಸಮರ ಸಾರಿ ಅತಿ ಹೆಚ್ಚು ವಿದೇಶಿ ಡ್ರಗ್ಸ್ ಪತ್ತೆ ಹೆಚ್ಚಿ ಸುಟ್ಟು ಹಾಕಿದ್ದು ನಮ್ಮ ಬಿಜೆಪಿ ಅವಧಿಯಲ್ಲಿ. ಯಾವುದೇ ಸಂಸ್ಥೆಯಲ್ಲಿ ಡ್ರಗ್ ಮಾರಾಟವಾದರೂ ಯುವಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಬೇಕು. ಯಾವ ಸಂಸ್ಥೆಯಲ್ಲಿ ಮಾರಾಟವಾಗುತ್ತದೆ ಆ ಆಡಳಿತ ಮಂಡಳಿಯನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದರು. ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿದರು. ಮಾಜಿ ಶಾಸಕ ಶಿವರಾಜ ಸಜ್ಜನರ, ಡಾ.ಬಸವರಾಜ ಕೇಲಗಾರ, ಯುವ ಮುಖಂಡ ಭರತ ಬೊಮ್ಮಾಯಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಭೋಜರಾಜ ಕರೂದಿ, ಪರಮೇಶಪ್ಪ ಮೇಗಳಮನಿ, ಭಾರತಿ ಜಂಬಗಿ, ಮಂಜುನಾಥ ಗಾಣಿಗೇರ, ಗಿರೀಶ ತುಪ್ಪದ, ಸಂತೋಷ ಅಲದಕಟ್ಟಿ, ನಂಜುAಡೇಶ ಕಳ್ಳೇರ, ಕಲ್ಯಾಣಕುಮಾರ ಶೆಟ್ಟರ, ಕಿರಣಕುಮಾರ ಕೋಣನವರ, ರುದ್ರೇಶ ಚಿನ್ನಣ್ಣನವರ, ಜಗದೀಶ ಬಸೇಗಣ್ಣಿ, ಪಾಲಾಕ್ಷಗೌಡ ಪಾಟೀಲ, ಕೆ.ಶಿವಲಿಂಗಪ್ಪ, ಅಭಿಷೇಕ ಗುಡಗೂರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.ಪ್ರಧಾನಿ ಮೋದಿಯವರ ಜನ್ಮದಿನ ಅಂಗವಾಗಿ ಈಗಾಗಲೇ ಆರೋಗ್ಯ ಶಿಬಿರ, ಮ್ಯಾರಾಥಾನ್ ಮಾಡಿದ್ದೇವೆ. ನವೆಂಬರ್‌ನಲ್ಲಿ ಸ್ವದೇಶಿ ಮೇಳ ಹಾಗೂ ನಮೋ ಸಂಸದರ ಕ್ರೀಡಾಕೂಟ ಏರ್ಪಡಿಸಲಿದ್ದೇವೆ. ಎಲ್ಲರೂ ಪಾಲ್ಗೊಳ್ಳಬೇಕು. ಮೋದಿಯವರದು ಪವರ್ ಪೊಲಿಟಿಕ್ ಅಲ್ಲ, ಜನರನ್ನು ಒಳಗೊಂಡಿರುವ ಜನರ ರಾಜಕಾರಣ, ನಾವೆಲ್ಲರೂ ಮೋದಿಯವರಿಗೆ ಕೈಜೋಡಿಸೋಣ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಪ್ರಧಾನಿ ಮೋದಿಯವರಿಗೆ 75 ವರ್ಷ ತುಂಬಿದೆ. ಅಧಿಕಾರದಲ್ಲಿ 25 ವರ್ಷ ಪೂರೈಸಿದ್ದಾರೆ. ಅವರಿಲ್ಲದ ದೇಶ ಕಲ್ಪಿಸಿಕೊಳ್ಳುವುದು ಕಷ್ಟ. ದೇಶದ ಮೇಲೆ ನಿರಂತರ ದಾಳಿ ಆಗುತ್ತಿತ್ತು, ಈಗ ಆಗುತ್ತಿಲ್ಲ. ಆರ್ಥಿಕತೆಯಲ್ಲಿ ದೇಶ 7ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಏರಿದೆ. ಅವರ ವಿರುದ್ಧ ಸಾಕಷ್ಟು ಅಪಪ್ರಚಾರ ನಡೆಸಿದರೂ ಅದನ್ನೆ ಸಕಾರಾತ್ಮಕವಾಗಿ ಸ್ವೀಕರಿಸಿ ಕೆಲಸ ಮಾಡಿದ್ದಾರೆ. ಯುವಶಕ್ತಿ ಈ ದೇಶದ ಭವಿಷ್ಯ. ಮೋದಿಜಿ ಶತಾಯುಷಿಗಳಾಗಲಿ, ಇರುವಷ್ಟು ದಿನ ಪ್ರಧಾನಿಯಾಗಿಯೇ ಇರಲಿ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.ನಶಾಮುಕ್ತ ಭಾರತ, ಆತ್ಮನಿರ್ಭರ ಭಾರತದ ಜಾಗೃತಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಮ್ಯಾರಾಥಾನ್ ಯಶಸ್ವಿಯಾಗಿದೆ. ಪ್ರಧಾನಿ ಮೋದಿ ದಿನಕ್ಕೆ 18 ತಾಸು ಕೆಲಸ ಮಾಡುವ ಮೂಲಕ ನಮಗೆ ಮಾದರಿಯಾಗಿದ್ದಾರೆ. ಆರ್ಥಿಕತೆ, ಆರೋಗ್ಯ, ರಕ್ಷಣೆ ಸೇರಿದಂತೆ ಪ್ರತಿ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಬೇಕು. ಈ ನಿಟ್ಟಿನಲ್ಲಿ ಸ್ವಾಭಿಮಾನ, ಅಭಿಮಾನದಿಂದ ಮುನ್ನುಗ್ಗೋಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.ನಮೋ ಯುವ ರನ್ ಮ್ಯಾರಾಥಾನ್‌ಗೆ ಚಾಲನೆ ನಗರದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಶನಿವಾರ ಬೆಳಗ್ಗೆ ನಮೋ ಯುವ ರನ್ ಮ್ಯಾರಾಥಾನ್‌ಗೆ ಚಾಲನೆ ನೀಡಲಾಯಿತು. ಅಲ್ಲಿಂದ ಬಿ.ಪಿ.ರಸ್ತೆ ಮೂಲಕ ಕಿತ್ತೂರ ರಾಣಿ ಚೆನ್ನಮ್ಮ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ, ಎಂ.ಎಂ. ವೃತ್ತ ಮಾರ್ಗವಾಗಿ ಸಂಚರಿಸಿ ಎಂ.ಜಿ. ವೃತ್ತವನ್ನು ತಲುಪಿತು. ವಿವಿಧ ಕಾಲೇಜು ವಿದ್ಯಾರ್ಥಿಗಳು, ಬಿಜೆಪಿ ಮುಖಂಡರು, ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.