ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಭಾರತ ಇನ್ನು ಕೆಲವೇ ವರ್ಷಗಳಲ್ಲಿ ಪ್ರಪಂಚದಲ್ಲೇ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ಶಾಸಕ ಎಂ.ಟಿ. ಕೃಷ್ಣಪ್ಪ ಆಶಾಭಾವನೆ ವ್ಯಕ್ತಪಡಿಸಿದರು.ಪಟ್ಟಣದ ಗುರುಭವನದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ೭೫ ನೇ ವರ್ಷದ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ನೀಡಿರುವ ಸಂವಿಧಾನ ಪವಿತ್ರವಾದದ್ದು. ಅದನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಎಲ್ಲಾ ವರ್ಗದ ಜನರಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಹಕ್ಕು ಭಾದ್ಯತೆಗಳು ಸಿಗಬೇಕೆಂಬ ಆಶಯಗಳನ್ನು ಹೊಂದಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಇಂತಹ ಸ್ಥಾನಮಾನಗಳನ್ನು ಕಲ್ಪಿಸಿಕೊಡುವ ಮೂಲಕ ದೇಶದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಿಕೊಟ್ಟಿದ್ದಾರೆ.ಸ್ವಾತಂತ್ರ್ಯ ನಂತರದಿಂದ ಇಲ್ಲಿಯವರೆಗೆ ಒಮ್ಮೆ ದೇಶದ ಸ್ಥಿತಿಗತಿಗಳನ್ನು ಅವಲೋಕನ ಮಾಡಿದರೆ ದೇಶ ಸ್ವಾವಲಂಬಿ ರಾಷ್ಟ್ರವಾಗಿ ಅಭಿವೃದ್ಧಿ ಪಥದತ್ತ ದಾಪುಗಾಲಿಡುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯ ಸಾಧನೆ ಅವಿಸ್ಮರಣೀಯವಾದುದು. ಈಚೆಗೆ ಕೈಗೊಂಡ ಚಂದ್ರಯಾನ-೩ ಯಶಸ್ವಿಯಾಗಿದೆ. ಸೂರ್‍ಯನ ಅಧ್ಯಯನಕ್ಕೆ ಮುಂದಾಗಿರುವ ಭಾರತದ ವಿಜ್ಞಾನಿಗಳ ಸಾಧನೆಗೆ ಇಡೀ ಪ್ರಪಂಚವೇ ನಿಬ್ಬೆರಗಾಗಿ ನೋಡುತ್ತಿವೆ ಎಂದರು.
ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ತಾಲೂಕಿನ ಜನತೆಗೆ ಸಂವಿಧಾನ ಮತ್ತು ಗಣರಾಜ್ಯೋತ್ಸವದ ಮಹತ್ವ ತಿಳಿಸಿಕೊಟ್ಟರು. ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ನಾಗರಾಜು, ಸತೀಶ್ ಕುಮಾರ್, ಪತ್ರಕರ್ತ ಮಾಯಸಂದ್ರ ಸಚ್ಚಿನ್, ಆರ್. ಮಮತಾ ಮತ್ತು ಕ್ರೀಡೆಯಲ್ಲಿ ಸಾಧನೆಗೈದಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಗಳ ಮಕ್ಕಳಿಂದ ನಡೆದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ಸಾರ್ವಜನಿಕರನ್ನು ಆಕರ್ಷಿಸಿತು.ಈ ಸಂಧರ್ಭದಲ್ಲಿ ತಾಲೂಕು ಪಂಚಾಯಿತಿ ಇಒ, ಶಿವರಾಜಯ್ಯ, ಬಿಇಒ ಎನ್. ಸೋಮಶೇಖರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂರಾಜು ಮುನಿಯೂರು, ಪಟ್ಟಣ ಪಂಚಾಯಿತಿ ಸದಸ್ಯರಾದ ಅಂಜನ್ ಕುಮಾರ್, ಸುರೇಶ್, ಮಧು, ಚಿದಾನಂದ್, ಕಸಬಾ ಕಂದಾಯಾಧಿಕಾರಿ ಶಿವಕುಮಾರ್, ಅಣ್ಣಪ್ಪ, ಬಿಆರ್‌ಸಿ ವೀಣಾ, ಹೇಮಾವತಿ ನಾಲಾ ಎಇಇ ಶಿವಪ್ರಸಾದ್, ಕೃಷಿ ಇಲಾಖಾ ಸಹಾಯಕ ನಿರ್ದೇಶಕಿ ಪೂಜಾ, ಜಿಲ್ಲಾ ಪಂಚಾಯತ್ ನ ಎಇಇ ರಮ್ಯಾ, ಸಿಡಿಪಿಒ ಗೋಪಾಲಯ್ಯ, ಹಿಂದುಳಿದ ವರ್ಗಗಳ ಇಲಾಖಾಧಿಕಾರಿ ಗುರುಮೂರ್ತಿ, ಆರೋಗ್ಯ ಇಲಾಖಾ ಶಿಕ್ಷಣಾಧಿಕಾರಿ ಚಂದ್ರಶೇಖರ್, ಬೆಸ್ಕಾಂನ ಎಇಇ ರಾಜಶೇಖರ್, ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು, ಮಕ್ಕಳು ಪಾಲ್ಗೊಂಡಿದ್ದರು.