ಸ್ವಾತಂತ್ರ ಚಿಂತನೆ, ಬದ್ಧತೆ ಇದ್ದರೆ ಭಾರತವೂ ಅಭಿವೃದ್ಧಿ ಹೊಂದುತ್ತದೆ: ಡಾ.ನಿರಂಜನ ಬಾಬು

| Published : Oct 24 2024, 12:33 AM IST

ಸ್ವಾತಂತ್ರ ಚಿಂತನೆ, ಬದ್ಧತೆ ಇದ್ದರೆ ಭಾರತವೂ ಅಭಿವೃದ್ಧಿ ಹೊಂದುತ್ತದೆ: ಡಾ.ನಿರಂಜನ ಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತಮ ಮಾನವ ಸಂಪನ್ಮೂಲ ಇದ್ದರೆ, ದೇಶ ಅಭಿವೃದ್ಧಿ ಹೊಂದುತ್ತದೆ. ದೀರ್ಘ ಪ್ರಾಚೀನತೆ ಹೊಂದಿರುವ ಭಾರತ ದೇಶವು ಹಿಂದುಳಿದರಲು ಹಲವು ಕಾರಣಗಳಿವೆ. ಕೇವಲ ಮುನ್ನೂರು ವರ್ಷಗಳ ಇತಿಹಾಸವಿರುವ ಅಮೇರಿಕಾ ದೇಶ ಜಗತ್ತಿನ ಮುಂದುವರೆದ ದೇಶಗಳಲ್ಲಿ ಮೊದಲನೇ ಸ್ಥಾನದಲ್ಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಉತ್ತಮ ಮಾನವ ಸಂಪನ್ಮೂಲ, ಸ್ವತಂತ್ರ ಅಭಿಪ್ರಾಯ, ಚಿಂತನೆ, ಆಲೋಚನೆ, ಬದ್ಧತೆಯಿಂದ ದುಡಿದರೆ ನಮ್ಮ ದೇಶವು ಜಗತ್ತಿನಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತದೆ ಎಂದು ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಎಚ್.ಎಸ್. ನಿರಂಜನ ಬಾಬು ಹೇಳಿದರು.

ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಕೋಶ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶವು ಬುಧವಾರ ಬಿ.ಎ, ಬಿ.ಕಾಂ, ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ವ್ಯಕ್ತಿತ್ವಗಳನ್ನು ಪ್ರೀತಿಸುತ್ತಾ ಹೋದಂತೆ ಬುದ್ಧ, ಬಸವ, ಅಂಬೇಡ್ಕರ್, ಸ್ವಿವ್ ಜಾರ್ಜ್, ವಿವೇಕಾನಂದ, ಅಬ್ದುಲ್ ಕಲಾಂ ಹೀಗೆ ಹಲವು ವ್ಯಕ್ತಿತ್ವ ಮಾದರಿಗಳು ನಮ್ಮ ಮುಂದೆ ಬರುತ್ತವೆ. ಉನ್ನತ ಶಿಕ್ಷಣದ ಮುಖ್ಯ ಉದ್ದೇಶ ಪದವಿಧರರನ್ನು ಸೃಷ್ಟಿಸುವುದಲ್ಲ. ಪತ್ರಿಕಾ ರಂಗ, ಉದ್ಯಮಗಳು, ಶ್ರೇಷ್ಠ ಸಂಶೋಧನೆ. ಉತ್ತಮ ಸಮಾಜವನ್ನು ಕಟ್ಟುವುದರೊಂದಿಗೆ ಸಹಬಾಳ್ವೆ, ಸೌಹಾರ್ದತೆಯಿಂದ ಬಾಳುವುದು. ಉತ್ತಮ ಮಾನವ ಸಂಪನ್ಮೂಲ ಇದ್ದರೆ, ದೇಶ ಅಭಿವೃದ್ಧಿ ಹೊಂದುತ್ತದೆ. ದೀರ್ಘ ಪ್ರಾಚೀನತೆ ಹೊಂದಿರುವ ಭಾರತ ದೇಶವು ಹಿಂದುಳಿದರಲು ಹಲವು ಕಾರಣಗಳಿವೆ. ಕೇವಲ ಮುನ್ನೂರು ವರ್ಷಗಳ ಇತಿಹಾಸವಿರುವ ಅಮೇರಿಕಾ ದೇಶ ಜಗತ್ತಿನ ಮುಂದುವರೆದ ದೇಶಗಳಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದರು.

ಸ್ವಾಮಿ ವಿವೆಕಾನಂದರು ಹೇಳಿದಂತೆ ಅವರವರ ಉದ್ಧಾರ, ಅವರವರ ವಿನಾಶಕ್ಕೆ ಅವರೇ ಕಾರಣರಾಗುತ್ತಾರೆ. ಹಾಗಾಗಿ ನಾವು ಮಾನವೀಯ ಮೌಲ್ಯಗಳೊಂದಿಗೆ ಬದುಕೋಣ ಎಂದರು.

ಹಲವು ಪ್ರಾತ್ಯಕ್ಷಿಕಗಳೊಂದಿಗೆ ಸಂವಾದದ ಮೂಲಕ ವಿದ್ಯಾರ್ಥಿನಿಯರ ಪ್ರಶ್ನೆಗಳಿಗೆ ಉತ್ತರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಅನ್ಯಾಯ, ಭ್ರಷ್ಟಾಚಾರ, ಅಕ್ರಮ, ಮೋಸ, ಹಿಂಸೆ ಹೆಚ್ಚಾಗಿರುವುದಕ್ಕೆ ಮಾನವೀಯ ಮೌಲ್ಯಗಳ ಕೊರತೆಯೇ ಕಾರಣ ಎಂದರು.

ಶೀಲವಿಲ್ಲದ ಶಿಕ್ಷಣದಿಂದ ಉನ್ನತವಾದದ್ದುನ್ನು ಸಾಧಿಸಲು ಸಾಧ್ಯವಿಲ್ಲ. ದುಡಿಮೆ ಇಲ್ಲದ ಸಂಪತ್ತು ಉತ್ತಮ ಪ್ರಜೆಗಳನ್ನು ಸೃಷ್ಟಿಸುವುದಿಲ್ಲ. ಇಂದು ಜಗತ್ತಿನಲ್ಲಿ ಯುದ್ಧದ ಭೀಕರತೆಯಿಂದ ಹಿಂಸೆ ತಾಂಡವಾಡುತ್ತಿದೆ. ಹಾಗಾಗಿ ಮೌಲ್ಯಯುತ ಶಿಕ್ಷಣದಿಂದ ಮಾತ್ರ ಅಹಿಂಸೆಯ ಬದಕನ್ನು ಕಾಣಲು ಸಾಧ್ಯ. ಇಂತಹ ಕಾರ್ಯಾಗಾರ ಬಹಳ ಮುಖ್ಯ ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ, ಉದ್ಯೋಗ ಕೋಶ ಸಂಯೋಜಕಿ ಎನ್. ಹೇಮಶ್ರೀ ಇದ್ದರು.

ರೇವತಿ ಪ್ರಾರ್ಥಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎಸ್. ಲತಾ ನಿರೂಪಿಸಿದರು. ಉದ್ಯೋಗ ಕೋಶ ಮತ್ತು ಐಕ್ಯೂಎಸಿ ಸಂಚಾಲಕಿ ಹೇಮಶ್ರೀ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಟಿ. ಕೃಪಾಲಿನಿ ವಂದಿಸಿದರು.