ಭಾರತ ವಿಶ್ವಕ್ಕೆ ಯೋಗ ಗುರು: ರಾಜ್ಯಪಾಲ ಗೆಹಲೋತ್

| Published : Jun 22 2024, 01:32 AM IST / Updated: Jun 22 2024, 07:13 AM IST

ಸಾರಾಂಶ

10 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂಭಾಗ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮ

 ಬೆಂಗಳೂರು : ಯೋಗವು ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯ ಅಮೂಲ್ಯ ಕೊಡುಗೆಯಾಗಿದೆ. ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಯೋಗದ ಬಗ್ಗೆ ಉಲ್ಲೇಖಿಸಿದ್ದು ಅದಕ್ಕಾಗಿ ಭಾರತವನ್ನು ಯೋಗ ಗುರು ಎಂದು ಪರಿಗಣಿಸಲಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅಭಿಪ್ರಾಯಪಟ್ಟರು.

10 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂಭಾಗ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಯೋಗಾಭ್ಯಾಸ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಯೋಗವು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ. ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸಲು ಯೋಗವು ಉತ್ತಮ ಮಾರ್ಗವಾಗಿದೆ. ಭಾರತವು ವಿಶ್ವಕ್ಕೆ ಯೋಗವನ್ನು ನೀಡುವ ಮೂಲಕ ಯೋಗ ಗುರುವಾಗಿದೆ ಎಂದು ಸ್ಪಷ್ಟಪಡಿಸಿದರು.

ಯೋಗ ಸಾಕ್ಷರ ರಾಜ್ಯಕ್ಕಾಗಿ ಕ್ರಮ:

‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬುದು ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯ ವಾಕ್ಯವಾಗಿದೆ. ಕರ್ನಾಟಕ ಸರ್ಕಾರವು ‘ಹರ್ ಘರ್ ಯೋಗ’ದ ಮೂಲಕ ರಾಜ್ಯವನ್ನು ಭಾರತದ ಪ್ರಮುಖ ಯೋಗ ಸಾಕ್ಷರ ರಾಜ್ಯವನ್ನಾಗಿ ಮಾಡಲು ಶ್ರಮಿಸುತ್ತಿದೆ. ನಾನು ಯೋಗಪಟುವಾಗಿದ್ದು, ಸಕಾರಾತ್ಮಕ ಪರಿಣಾಮಗಳನ್ನು ಅನುಭವಿಸಿದ್ದೇನೆ. ತಾವೆಲ್ಲರೂ ಯೋಗಾಭ್ಯಾಸವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಯೋಗದತ್ತ ಜಗತ್ತಿನ ಜನರನ್ನು ಪ್ರೇರೇಪಿಸಬೇಕು ಎಂದು ಮನವಿ ಮಾಡಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ‘ಯೋಗೋತ್ಸವ‘ ಎಂಬ 10 ದಿನಗಳ ವಿಶಿಷ್ಟವಾದ ಕಾರ್ಯಕ್ರಮವನ್ನು ಜೂ.10 ರಿಂದ 20 ರವರಗೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿತ್ತು. ಸಮಾಜ ಕಲ್ಯಾಣ ಇಲಾಖೆಯ 664 ವಸತಿ ನಿಲಯದ 90,300 ವಿದ್ಯಾರ್ಥಿಗಳು, ಕರ್ನಾಟಕ ವಸತಿ ಶಿಕ್ಷಣ ಸಂಘದ 831 ವಸತಿ ಶಾಲೆಯ 87 ಸಾವಿರ ವಿದ್ಯಾರ್ಥಿ ಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವ-ಸಹಾಯ ಸಂಘದ 5 ಸಾವಿರ ಸದಸ್ಯರು, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ 1.80 ಲಕ್ಷ ವಿದ್ಯಾರ್ಥಿಗಳು, ಹಲವು ಸಂಘ-ಸಂಸ್ಥೆಗಳು ಪಾಲ್ಗೊಂಡಿದ್ದವು ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ವಿವಿಧ ಯೋಗ ಸಂಸ್ಥೆಗಳು ಯೋಗ ಪ್ರದರ್ಶನ ಪ್ರಸ್ತುತಪಡಿಸಿದವು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಟಿ.ಎ.ಶರವಣ, ಅಂತಾರಾಷ್ಟ್ರೀಯ ಕ್ರೀಡಾಪಟು ಅಶ್ವಿನಿ ನಾಚಪ್ಪ, ಚಿತ್ರ ನಟಿ ಅನು ಪ್ರಭಾಕರ್, ನಟ ಶರಣ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ, ಆಯುಷ್‌ ಇಲಾಖೆ ಆಯುಕ್ತ ಶ್ರೀನಿವಾಸಲು ಮತ್ತು ಯೋಗ ಪಟುಗಳು ಭಾಗವಹಿಸಿದ್ದರು.

ಶಾಲಾ-ಕಾಲೇಜಿನಲ್ಲೂ ಯೋಗ ತರಗತಿಗೆ ಚಿಂತನೆ

ಶಾಲಾ-ಕಾಲೇಜುಗಳಲ್ಲಿ ಪ್ರತಿನಿತ್ಯ ಯೋಗಾಭ್ಯಾಸ ಮಾಡುವ ಅಥವಾ ವಾರಕ್ಕೆ ಕೆಲ ತರಗತಿಗಳನ್ನು ಆರಂಭ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ನನಗೆ ಯೋಗ ಮಾಡಿ ಅಭ್ಯಾಸವಿಲ್ಲ. ಶಾಲಾ ದಿನಗಳಲ್ಲಿ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದೆ. ಮನೆಯಲ್ಲಿ ಶ್ರೀಮತಿ ಯೋಗ ಮಾಡುತ್ತಾರೆ. ಆದರೆ ಇನ್ನು ಮುಂದೆ ನಾನೂ ಯೋಗಾಭ್ಯಾಸ ಮಾಡುತ್ತೇನೆ. ಸಚಿವ ದಿನೇಶ್‌ ಗುಂಡೂರಾವ್‌ ಯೋಗ ಗುರು ಕಳುಹಿಸಿಕೊಡುವುದಾಗಿ ಹೇಳಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಪ್ರತಿನಿತ್ಯ ಯೋಗಾಭ್ಯಾಸ ಮಾಡುವ ಅಥವಾ ವಾರದಲ್ಲಿ ಕೆಲ ಯೋಗ ತರಗತಿಗಳನ್ನು ಪ್ರಾರಂಭಿಸುವ ಸಂಬಂಧ ಚಿಂತನೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.