ಸಾರಾಂಶ
ದಕ್ಷಿಣ ಭಾರತದಲ್ಲಿ ಪಲ್ಲವರ ಕಾಲದಲ್ಲಿ ದ್ರಾವಿಡ ಕಲಾಶೈಲಿಯೂ ಉಗಮಗೊಂಡು ಚೋಳರು ಸೇರಿದಂತೆ ಕರ್ನಾಟಕದ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಹೊಯ್ಸಳರ ಕಾಲದಲ್ಲಿ ಹಲವು ಪ್ರಸಿದ್ಧ ದೇವಾಲಯಗಳು ನಿರ್ಮಾಣವಾದವು.
ಕನ್ನಡಪ್ರಭ ವಾರ್ತೆ ಮೈಸೂರು
ಭಾರತೀಯ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಸಾವಿರಾರು ವರ್ಷಗಳ ಇತಿಹಾಸ ಮತ್ತು ಸಾಂಸ್ಕೃತಿಕ ಹಿನ್ನೆಲೆ ಇದೆ ಎಂದು ಕೆ.ಆರ್. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಕೆ.ಎನ್. ಮೋಹನ್ ಹೇಳಿದರು.ನಗರದ ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗ ಮತ್ತು ಐಕ್ಯೂಎಸಿಯ ಸಹಯೋಗದಲ್ಲಿ ಭಾರತೀಯ ವಾಸ್ತುಶಿಲ್ಪ ಕಲೆ ಒಂದು ಐತಿಹಾಸಿಕ ಒಳನೋಟ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿದರು.
ಸಿಂಧೂ ಬಯಲಿನ ನಾಗರಿಕತೆಯಿಂದ ಭಾರತೀಯರ ವಾಸ್ತುಶೈಲಿಯ ಪ್ರಕಾರವು ಆರಂಭಗೊಂಡಿತು. ಅಲ್ಲಿಂದ ಮುಂದೆ ಮೌರ್ಯರು ಮತ್ತು ಗುಪ್ತರ ಕಾಲದಲ್ಲಿ ಉತ್ತರ ಭಾರತದಲ್ಲಿ ನಾಗರ ಕಲಾಶೈಲಿಯು ಅಸ್ತಿತ್ವಕ್ಕೆ ಬಂದು ಅನೇಕ ದೇವಾಲಯಗಳು, ಬೌದ್ಧಸ್ತೂಪಗಳು, ಜೈನಬಸದಿಗಳು ಸೇರಿ ಭವ್ಯವಾದ ಅರಮನೆಗಳು ನಿರ್ಮಾಣಗೊಂಡವು ಎಂದು ಅವರು ತಿಳಿಸಿದರು.ದಕ್ಷಿಣ ಭಾರತದಲ್ಲಿ ಪಲ್ಲವರ ಕಾಲದಲ್ಲಿ ದ್ರಾವಿಡ ಕಲಾಶೈಲಿಯೂ ಉಗಮಗೊಂಡು ಚೋಳರು ಸೇರಿದಂತೆ ಕರ್ನಾಟಕದ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಹೊಯ್ಸಳರ ಕಾಲದಲ್ಲಿ ಹಲವು ಪ್ರಸಿದ್ಧ ದೇವಾಲಯಗಳು ನಿರ್ಮಾಣವಾದವು. ವಿಶೇಷವಾಗಿ ಬಾದಾಮಿ ಚಾಲುಕ್ಯರ ಕಾಲದಲ್ಲಿ ನಾಗರ ಮತ್ತು ದ್ರಾವಿಡ ಶೈಲಿಗಳು ಸಮ್ಮಿಲನಗೊಂಡು ನೂತನ ವೇಸರಶೈಲಿಯು ಅಸ್ತಿತ್ವಕ್ಕೆ ಬಂದು ನೂರಾರು ವಿಭಿನ್ನವಾದ ಮತ್ತು ಆಕರ್ಷಣೀಯವಾದ ದೇವಾಲಯಗಳು ಅಸ್ತಿತ್ವಕ್ಕೆ ಬಂದವು. ವಿಜಯನಗರದ ಅರಸರ ಕಾಲದಲ್ಲಿ ದ್ರಾವಿಡ ಕಲಾಶೈಲಿಯು ದಕ್ಷಿಣ ಭಾರತದಲ್ಲಿ ಪರಾಕಾಷ್ಠೆಯ ಹಂತವನ್ನು ತಲುಪಿತು ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಪ್ರಾಸ್ತಾವಿಕ ನುಡಿಗಳ ಮೂಲಕ ಶುಭ ಕೋರಿದರು. ಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಶೈಕ್ಷಣಿಕ ಡೀನ್ ಡಾ.ಎಚ್. ಶ್ರೀಧರ, ವಿಭಾಗದ ಅಧ್ಯಾಪಕರಾದ ಎ.ಆರ್. ನಂದೀಶ್, ಎನ್. ಜಯಲಕ್ಷ್ಮೀ ಹಾಗೂ ಇತಿಹಾಸ ವಿಷಯದ ವಿದ್ಯಾರ್ಥಿಗಳು ಇದ್ದರು.