ಪುತ್ತೂರು: ಲಲಿತ ಕಲೆಗಳನ್ನು ನಮ್ಮ ಹಿರಿಯರು ದೈವಿಕ ಕಲೆಯನ್ನಾಗಿ ಸ್ವೀಕರಿಸಿ ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಿದ್ದಾರೆ. ಯಾವ ಕಲೆಗಳು ಖುಷಿಯನ್ನು ಕೊಡುತ್ತದೆಯೋ ಹಾಗೆಯೇ ಬೇಗನೇ ಮನವನ್ನು ಆವರಿಸಿಕೊಳ್ಳುತ್ತದೆಯೋ ಅವುಗಳು ದೈವಿಕ ಕಲೆಗಳೆನ್ನಬಹುದು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಹೇಳಿದರು.
ಅವರು ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದ ವಿವೇಕಾನಂದ ಸಂಶೋಧನಾ ಕೇಂದ್ರ, ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರ, ಲಲಿತ ಕಲಾ ಸಂಘ, ಐಕ್ಯೂಎಸಿ ಹಾಗೂ ನೃತ್ಯೋಪಾಸನಾ ಕಲಾ ಅಕಾಡೆಮಿ ಪುತ್ತೂರು ಸಹಯೋಗದಲ್ಲಿ ನಡೆದ ಶಿವಾರ್ಪಣಂ ಭರತನಾಟ್ಯದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಭಾರತೀಯ ಲಲಿತ ಕಲೆಗಳಲ್ಲಿ ಭರತನಾಟ್ಯ, ಮೋಹಿನಿಯಾಟ್ಟಂ, ಕಥಕ್ಕಳಿ, ಕೂಚಿಪುಡಿ ಇತ್ಯಾದಿ ಪ್ರಕಾರಗಳನ್ನು ಕಾಣಬಹುದಾಗಿದ್ದು ಒಂದೊಂದು ಪ್ರಾಂತ್ಯದಲ್ಲೂ ಬೇರೆ ಬೇರೆ ತೆರನಾದ ವಿಶೇಷತೆಗಳಿಂದ ಕೂಡಿದೆ. ಇಂತಹಾ ವೈವಿಧ್ಯತೆಯನ್ನು ನಾವು ಭಾರತೀಯ ಕಲೆಗಳಲ್ಲಿ ಕಾಣಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ನೃತ್ಯೋಪಾಸನಾ ಕಲಾ ಅಕಾಡೆಮಿಯ ನಿರ್ದೇಶಕಿ ವಿದುಷಿ ಶಾಲಿನಿ ಆತ್ಮಭೂಷಣ, ಲಲಿತ ಕಲೆಗಳ ಬಗ್ಗೆ ಕಾರ್ಯಗಾರಗಳು ನಡೆದು ಅದರಿಂದ ವಿದ್ಯಾರ್ಥಿಗಳು, ಆಸಕ್ತರು ಪ್ರಯೋಜನ ಪಡೆದುಕೊಂಡಾಗ ಯೋಜಿಸಿದವರ, ಕಲಾವಿದರ ಆಶಯ ಪೂರ್ಣವಾಗುತ್ತದೆ. ಕಲಿಕೆಯ ಸಂದರ್ಭದಲ್ಲಿ ಹಿರಿಯರ ಜೊತೆಗೆ ಇದ್ದು ಕಲಿತಾಗ, ಅಭ್ಯಾಸ ಮಾಡಿದಾಗ ನಮ್ಮದು ಒಳ್ಳೆಯ ಗುಣಮಟ್ಟದ ಅಧ್ಯಯನವಾಗಬಲ್ಲದು ಎಂದರು.ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮತ್ತು ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿದುಷಿ ಶಾಲಿನಿ ಆತ್ಮಭೂಷಣ ಇವರನ್ನು ಸನ್ಮಾನಿಸಲಾಯಿತು. ಬಳಿಕ ನೃತ್ಯೋಪಾಸನಾ ಕಲಾ ಅಕಾಡೆಮಿಯ ಮತ್ತು ನೃತ್ಯವನ್ನು ಅಭ್ಯಸಿಸಿದ ಕಾಲೇಜಿನ ಆಯ್ದ ವಿದ್ಯಾರ್ಥಿಗಳಿಂದ ನವರಸಗಳ ಪ್ರಸ್ತುತಿಯ ಕುರಿತಾದ ಭರತನಾಟ್ಯ ಕಾರ್ಯಾಗಾರ ನಡೆಯಿತು.ಕಾರ್ಯಾಗಾರದಲ್ಲಿ ಹಾಡುಗಾರಿಕೆಯಲ್ಲಿ ಡಾ. ನಿಷಿತಾ ಪುತ್ತೂರು, ಮೃದಂಗದಲ್ಲಿ ವಿದ್ವಾನ್ ಬಾಲಕೃಷ್ಣ ಹೊಸಮನೆ ಹಾಗೂ ನಟುವಾಂಗದಲ್ಲಿ ವಿದುಷಿ ಶಾಲಿನಿ ಆತ್ಮಭೂಷಣ ಇವರು ಸಹಕರಿಸಿದರು. ಕಾರ್ಯಕ್ರಮವನ್ನು ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಹಾಗೂ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ.ಬಿ ಸ್ವಾಗತಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಮತ್ತು ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್ ವಂದಿಸಿದರು. ಕಾಲೇಜಿನ ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಹಂಪನಾ ನಿರೂಪಿಸಿದರು.